ರಾಜ್ಯ

ಶೀಘ್ರದಲ್ಲೇ ಶಾಲೆಗಳ ಟೈಮ್ ಬದಲು? ಟ್ರಾಫಿಕ್ ಕಿರಿಕಿರಿ ತಪ್ಪಿಸಲು ವೇಳಾಪಟ್ಟಿ ಬದಲಾವಣೆಗೆ ಸರ್ಕಾರದ ಚಿಂತನೆ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶಾಲಾ ಸಮಯವನ್ನು ಬದಲಾಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ವಿವಿಧ ಇಲಾಖೆಗಳು ಹಾಗೂ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಶೀಘ್ರದಲ್ಲೇ ಶಾಲೆಗಳ ಟೈಮ್ ಬದಲು? ಟ್ರಾಫಿಕ್ ಕಿರಿಕಿರಿ ತಪ್ಪಿಸಲು ವೇಳಾಪಟ್ಟಿ ಬದಲಾವಣೆಗೆ ಸರ್ಕಾರದ ಚಿಂತನೆ
ಶಾಲೆಯ ವಿದ್ಯಾರ್ಥಿಗಳು — Online Desk
Published On :

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ದಿನೇದಿನೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯು ಕೇವಲ ಉದ್ಯೋಗಿಗಳಿಗಷ್ಟೇ ಅಲ್ಲದೆ ಶಾಲೆಗೆ ಹೋಗುವ ಪುಟ್ಟ ಮಕ್ಕಳು ಹಾಗೂ ಶಿಕ್ಷಕರ ದೈನಂದಿನ ನೆಮ್ಮದಿಯನ್ನೇ ಕಸಿದುಕೊಳ್ಳುತ್ತಿದೆ. ಗಂಟೆಗಟ್ಟಲೆ ವಾಹನಗಳ ನಡುವೆ ಸಿಲುಕಿ ಪರದಾಡುವ ಈ ಸಮಸ್ಯೆಗೆ ಕೊನೆಗೂ ರಾಜ್ಯ ಸರ್ಕಾರ ಒಂದು ಮಹತ್ವದ ಪರಿಹಾರ ಹುಡುಕಲು ಹೊರಟಿದ್ದು, ನಗರದ ಸರ್ಕಾರಿ ಶಾಲೆಗಳ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಅದರಂತೆ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿಯಂತ್ರಿಸಲು, ನಗರದ ಶಾಲಾ - ಕಾಲೇಜುಗಳ ಸಮಯದ  ಪರಿಷ್ಕರಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಹಾಗೂ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬದಲಾವಣೆಗೆ ಕಾರಣವೇನು?

ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್‌ಗಳಲ್ಲಿ ಶಾಲಾ ವಾಹನಗಳು ರಸ್ತೆಗಿಳಿಯುವುದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕಚೇರಿಗಳಿಗೆ ಹೋಗುವವರ ಸಮಯ ಮತ್ತು ಶಾಲಾ ಸಮಯ ಪರಸ್ಪರ ಮುಖಾಮುಖಿಯಾಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಹಾಗಾಗಿ, ಶಾಲಾ ಸಮಯವನ್ನು 30 ನಿಮಿಷಗಳಿಂದ 1 ಗಂಟೆಯವರೆಗೆ ಬದಲಾಯಿಸುವ (ಮುಂದೂಡುವ ಅಥವಾ ಮುಂಚಿತವಾಗಿ ಆರಂಭಿಸುವ) ಸಾಧ್ಯತೆಗಳಿವೆ.

ಇದಕ್ಕೂ ಮುನ್ನ  ಸದ್ಯ ಬೆಂಗಳೂರಿನ ಸರ್ಕಾರಿ ಶಾಲೆಗಳು ಬೆಳಗ್ಗೆ 10:30 ರಿಂದ ಸಂಜೆ 4:30 ರವರೆಗೆ ನಡೆಯುತ್ತಿವೆ. ಟ್ರಾಫಿಕ್‌ನಿಂದಾಗಿ ತಡವಾಗುತ್ತಿರುವುದರಿಂದ ಈ ಸಮಯವನ್ನು ಬೆಳಗ್ಗೆ 8:30 ರಿಂದ ಮಧ್ಯಾಹ್ನ 3:30 ಕ್ಕೆ ಬದಲಾಯಿಸುವಂತೆ ಸರ್ಕಾರಿ ಶಾಲಾ ಶಿಕ್ಷಕರು ವಿನಂತಿಸಿದ್ದಾರೆ. ಇದರೊಂದಿಗೆ ಖಾಸಗಿ ಶಾಲೆಗಳ ಒಕ್ಕೂಟವೂ ಸಹ ಸಮಯ ಬದಲಾವಣೆಗೆ ಮನವಿ ಮಾಡಿತ್ತು. ಜೊತೆಗೆ, ಈ ಹಿಂದೆ ಕರ್ನಾಟಕ ಹೈಕೋರ್ಟ್ ಕೂಡ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ಶಾಲಾ-ಕಾಲೇಜುಗಳು ಮತ್ತು ಐಟಿ/ಬಿಟಿ ಕಂಪನಿಗಳ ಕೆಲಸದ ಸಮಯವನ್ನು ಪರಿಷ್ಕರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು.

ಹಾಗಾದ್ರೆ, ಅಂತಿಮ ನಿರ್ಧಾರ ಯಾವಾಗ?

ಬೆಂಗಳೂರು ಟ್ರಾಫಿಕ್ ಪೊಲೀಸ್, ಪೋಷಕರು, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮತ್ತು ಶಾಲಾ ವಾಹನ ಚಾಲಕರ ಸಂಘಟನೆಗಳೊಂದಿಗೆ ಇಲಾಖೆಯು ಸಭೆ ನಡೆಸಲಿದ್ದು, ಎಲ್ಲರ ಅಭಿಪ್ರಾಯ ಪಡೆದ ನಂತರವೇ ಸರ್ಕಾರ ಅಂತಿಮ ಆದೇಶ ಹೊರಡಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.