2,000 ಕೋಟಿ ರೂ ವೆಚ್ಚದ SWD ಕಾಮಗಾರಿಗಳಲ್ಲಿ ಶೇ 15ರಷ್ಟು ಕಮಿಷನ್: ಡಿಕೆಶಿ ವಿರುದ್ಧ BJP ಶಾಸಕ ಮುನಿರತ್ನ ಗಂಭೀರ ಆರೋಪ, ರಾಜ್ಯಪಾಲರಿಗೆ ದೂರು
ನಿನ್ನೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಅವರು, ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ 2,000 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೇ 15ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ.
ನಿನ್ನೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಅವರು, ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಜೊತೆಗೆ, ‘ಈ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೆಶನಾಲಯ ಮತ್ತು ಸಿಬಿಐಗೆ ದೂರು ನೀಡಿದ್ದು, ಡಿ.ಕೆ.ಶಿವಕುಮಾರ್ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ರಾಜಾಕಾಲುವೆ ಕಾಮಗಾರಿಗಳ ಟೆಂಡರ್ಗಳಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ಆಗಿದೆ. ವರ್ಲ್ಡ್ ಬ್ಯಾಂಕ್ನಿಂದ 2 ಸಾವಿರ ಕೋಟಿ ರೂ. ಸಾಲ ಪಡೆದು, ((1) ಸ್ಟಾರ್ ಇನ್ಫ್ರಾಟೆಕ್ ಅಕಾ ಸ್ಟಾರ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ (2) ಗಣಪತಿ ಸ್ಟೋನ್ ಕ್ರಷರ್ ಪ್ರೈವೇಟ್ ಲಿಮಿಟೆಡ್ (3) ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (4) ಮನು ಕನ್ಸ್ಟ್ರಕ್ಷನ್ಸ್ (5) ಡಿ.ಎಚ್. ಪಟೇಲ್ (6) ಎಲ್ಐಎ ಕನ್ಸ್ಟ್ರಕ್ಷನ್ಸ್ (7) ತಿರುಮಲ ಗಿರಿ ಕನ್ಸ್ಟ್ರಕ್ಷನ್ಸ್ (8) ಓಷನ್ ಕನ್ಸ್ಟ್ರಕ್ಷನ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (9) ವಿಡಿಬಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ (10) ಆರ್ಎನ್ಎಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು (11) ಬಿಎಸ್ಆರ್ ಕನ್ಸ್ಟ್ರಕ್ಷನ್ಸ್ ಕಂಪನಿಗಳಿಂದ ದೊಡ್ಡ ಮೊತ್ತದ ಕಮಿಷನ್ ಪಡೆದು ಟೆಂಡರ್ ಕೊಡಲಾಗಿದೆ ಎಂದು ಆರೋಪಿಸಿದ್ದಾರೆ.
ಒಟ್ಟು 16 ವರ್ಕ್ ಆರ್ಡರ್ಗಳನ್ನು ಈ ಕಂಪನಿಗಳ ಗುತ್ತಿಗೆದಾರರಿಗೆ ಟೆಂಡರ್ ಕೊಟ್ಟಿದ್ದಾರೆ. ಕೆಟಿಟಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ದೊಡ್ಡ ದೊಡ್ಡ ಕಂಪನಿಗಳಿಂದ 400 ಕೋಟಿ ರೂ. ಕಮಿಷನ್ ಪಡೆದು ಟೆಂಡರ್ ಕೊಡಲಾಗಿದೆ. ಇದರ ಟೆಂಡರ್ ಅನ್ನು ಅನರ್ಹ ಕಂಪನಿಗಳಿಗೆ ಕೊಡುತ್ತಿದ್ದಾರೆ. ಇದರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಕೈವಾಡ ಇದೆ. ಹೀಗಾಗಿ ಈ ಟೆಂಡರ್ ಅವ್ಯವಹಾರವನ್ನು ಇಡಿ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ,
ವರ್ಲ್ಡ್ ಬ್ಯಾಂಕ್ ಲೋನ್ಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಕಳೆದ ಫೆಬ್ರವರಿಯಲ್ಲಿ ನಾನು ಇಡಿಗೆ ದೂರು ಕೊಟ್ಟಿದ್ದೆ. ಅದಾದ ನಂತರ ಡಿಕೆಶಿ, ಡಿಕೆ ಸುರೇಶ್ ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಮನೆಗೆ ಕರೆದಿದ್ದಾರೆ. ಏ.15ಕ್ಕೆ ಟೆಂಡರ್ ಕರೆದಿದ್ದು, ಈ ಗುತ್ತಿಗೆದಾರರ ಕಂಪನಿಗಳಿಗೆ ಅನುಕೂಲ ಆಗುವಂತೆ ಟೆಂಡರ್ ನಿಯಮ ಬದಲಾಯಿಸಲಾಗಿದೆ. ಗುತ್ತಿಗೆದಾರರ ಜೊತೆ ಶಾಮೀಲಾಗಿ 2 ಸಾವಿರ ಕೋಟಿ ರೂ. ಅಕ್ರಮ ಮಾಡುತ್ತಿದ್ದಾರೆ. 400 ಕೋಟಿ ರೂ. ಕಮಿಷನ್ ಪಡೆಯುತ್ತಾರೆ. ಇದನ್ನು ತಡೆಗಟ್ಟಿದರೆ ಸರ್ಕಾರಕ್ಕೆ 400 ಕೋಟಿ ರೂ. ಉಳಿಯಲಿದೆ. ಮಂಗಳವಾರ ಇದರ ವಿರುದ್ಧ ಹೈಕೋರ್ಟ್ನಲ್ಲಿ ಪಿಐಎಲ್ (PIL) ಹಾಕುತ್ತೇವೆ. ಈ ಹಗರಣದ ನೇರ ಹೊಣೆ ಡಿಕೆಶಿ, ಡಿಕೆ ಸುರೇಶ್ ಎಂದು ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



