News Headlines 07-04-25 | ಯುವತಿ ಖಾಸಗಿ ಅಂಗ ಮುಟ್ಟಿ ವಿಕೃತಿ: ಇದು ಸಹಜ-ಪರಮೇಶ್ವರ್; ಮೇ 1ರಂದು ಪೌರ ಕಾರ್ಮಿಕರ ಸೇವೆ ಕಾಯಂ; ಬಿಜೆಪಿ 'ಜನಾಕ್ರೋಶ ಯಾತ್ರೆ' ಆರಂಭ

1. Bengaluru ಮಹಿಳೆಯ ಖಾಸಗಿ ಅಂಗ ಮುಟ್ಟಿ ವಿಕೃತಿ; ದೊಡ್ಡ ನಗರಗಳಲ್ಲಿ ಇದು ಸಾಮಾನ್ಯ-ಪರಂ
ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಅಲ್ಲೊಂದು ಇಲ್ಲೊಂದು ಮಹಿಳೆಯರ ಮೇಲಿನ ದೌರ್ಜನ್ಯದಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಪೊಲೀಸರ ಉಪಸ್ಥಿತಿಯಿಂದಾಗಿ ನಗರದಲ್ಲಿ ಶಾಂತಿ ನೆಲೆಸಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ಬಿಟಿಎಂ ಲೇಔಟ್ ನ ಸುದ್ದಗುಂಟೆಪಾಳ್ಯದಲ್ಲಿ ನಿರ್ಜನ ಸ್ಥಳದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಂತಹ ಘಟನೆ ನಡೆದಾಗಲೆಲ್ಲಾ ಅದು ಸಾರ್ವಜನಿಕರ ಗಮನ ಸೆಳೆಯುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು. ಪೊಲೀಸರು ಮಳೆ ಮತ್ತು ಚಳಿಯನ್ನು ಲೆಕ್ಕಿಸದೆ ದಿನದ 24 ಗಂಟೆಗಳೂ ಕೆಲಸ ಮಾಡುತ್ತಿದ್ದಾರೆ. ಗಸ್ತು ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸಲು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ಪ್ರತಿದಿನ ಸೂಚನೆಗಳನ್ನು ನೀಡಲಾಗುತ್ತಿದೆ ಎಂದರು.
2. ಮೇ 1ರಂದು ಪೌರ ಕಾರ್ಮಿಕರ ಸೇವೆ ಕಾಯಂ CM Siddaramaiah ಘೋಷಣೆ
ಮೇ 1ರಂದು ನಡೆಯುವ ಕಾರ್ಮಿಕ ದಿನಾಚರಣೆಯಂದೇ ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಮಹಾ ಸಂಘದ 25ನೇ ವಾರ್ಷಿಕೋತ್ಸವ ಮತ್ತು ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಬಸವಣ್ಣನವರ ವಚನದಂತೆ ಕಾಯಕವೇ ಕೈಲಾಸ ಎಂದು ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಹೀಗಾಗಿ ಅವರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ. ಇದಕ್ಕಾಗಿ ಅವರ ಸೇವೆ ಕಾಯಂ ಮಾಡಲಾಗುವುದು. ಪೌರ ಕಾರ್ಮಿಕರ ಜೊತೆಗೆ ವಾಹನ ಚಾಲಕರ ಸೇವೆಯನ್ನೂ ಗುತ್ತಿಗೆಯಿಂದ ತೆಗೆದು ಕಾಯಂ ಮಾಡಲಾಗುವುದು ಎಂದರು.
3. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಇಂದಿನಿಂದ ಬಿಜೆಪಿ ಜನಾಕ್ರೋಶ ಯಾತ್ರೆ
ಬೆಲೆ ಏರಿಕೆ, ಮುಸ್ಲಿಂ ಓಲೈಕೆ ಹಾಗೂ ದಲಿತರ ಹಣ ಲೂಟಿ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಇಂದಿನಿಂದ ಜನಾಕ್ರೋಶ ಯಾತ್ರೆ ಕೈಗೊಂಡಿದೆ. ಇಂದು ಮಧ್ಯಾಹ್ನ 3:15ಕ್ಕೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಬಿಜೆಪಿ ಮುಖಂಡರು ಯಾತ್ರೆ ಆರಂಭಿಸಿದರು. ಮೈಸೂರಿನ ಲಷ್ಕರ್ ಮೊಹಲ್ಲಾದ ಅಂಚೆ ಕಚೇರಿ ಬಳಿಯಿಂದ ಯಾತ್ರೆ ಆರಂಭಗೊಂಡಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯಾತ್ರೆಗೆ ಚಾಲನೆ ನೀಡಿದರು. ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿಎಂಗಳಾದ ಡಿ.ವಿ ಸದಾನಂದ ಗೌಡ, ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿಟಿ ರವಿ ಸೇರಿದಂತೆ ಬಿಜೆಪಿ ಶಾಸಕರು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದಾರೆ. ಅಲ್ಲದೆ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ವಿಜಯೇಂದ್ರ ಈ ಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
4. ಬೀದಿ ಬದಿ ವ್ಯಾಪಾರಿಗಳ ಕುರಿತು ರಾಹುಲ್ ಗಾಂಧಿ ಕಳವಳ
ಬೀದಿ ಬದಿ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಅವಕಾಶಗಳನ್ನು ಕಲ್ಪಿಸಲು ರಾಜ್ಯ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದಲ್ಲಿ ಬೀದಿ ವ್ಯಾಪಾರಿಗಳ ಸ್ಥಿತಿಯ ಬಗ್ಗೆ ರಾಹುಲ್ ಗಾಂಧಿ ಮುಖ್ಯಮಂತ್ರಿಗೆ ಬರೆದ ಪತ್ರದ ಮೂಲಕ ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ, ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ 27,655 ಮಾರಾಟಗಾರರನ್ನು ನೋಂದಾಯಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಬೀದಿ ವ್ಯಾಪಾರಿಗಳ ಒಟ್ಟಾರೆ ಯೋಗಕ್ಷೇಮಕ್ಕೆ ಬದ್ಧವಾಗಿದೆ ಮತ್ತು ಅವರ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
5. ನಟಿ ಸಂಜನಾಗೆ ವಂಚನೆ: ರಾಹುಲ್ ಗೆ 6 ತಿಂಗಳ ಜೈಲು ಶಿಕ್ಷೆ
ಕನ್ನಡದ ನಟಿ ಸಂಜನಾ ಗಲ್ರಾನಿಗೆ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ರಾಹುಲ್ ತೋನ್ಸೆಗೆ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ 33ನೇ ACJM ಕೋರ್ಟ್ ಆದೇಶಿಸಿದೆ. ಸಂಜನಾ ಗಲ್ರಾನಿ ಅವರ ಸ್ನೇಹಿತ ರಾಹುಲ್ ತೋನ್ಸೆ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಪಿಎಸ್ ಸಂತೋಷ್ ಕುಮಾರ್ ದಂಡ ಮತ್ತು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದ್ದಾರೆ. ನಿಗದಿತ ಸಮಯದಲ್ಲಿ ದಂಡ ಪಾವತಿಸಿದರೆ ಆರು ತಿಂಗಳ ಜೈಲು ಶಿಕ್ಷೆಯನ್ನು ರದ್ದು ಮಾಡುವುದಾಗಿ ನ್ಯಾಯಧೀಶರು ತಿಳಿಸಿದ್ದಾರೆ. ಇದೇ ಅಲ್ಲದೆ ಉದ್ಯಮಿಯೊಬ್ಬರಿಗೆ 25 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪವೂ ರಾಹುಲ್ ತೋನ್ಸೆ ಮೇಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


