ರಾಜ್ಯ

ಮರ್ಮಾಂಗ ತೋರಿಸಿ ವಿದ್ಯಾರ್ಥಿನಿಗೆ ಕಿರುಕುಳ; ಕಾಮುಕನಿಗೆ ಧರ್ಮದೇಟು, ರಕ್ಷಿಸಿದ ಯುವಕರನ್ನೇ ಬಂಧಿಸಿದ ಪೊಲೀಸರು!

ಬಾಗಲಕೋಟೆಯ ನವನಗರದ ಬಳಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಕಂಡು ಕಾಮುಕನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

ಮರ್ಮಾಂಗ ತೋರಿಸಿ ವಿದ್ಯಾರ್ಥಿನಿಗೆ ಕಿರುಕುಳ; ಕಾಮುಕನಿಗೆ ಧರ್ಮದೇಟು, ರಕ್ಷಿಸಿದ ಯುವಕರನ್ನೇ ಬಂಧಿಸಿದ ಪೊಲೀಸರು!
ಕಾಮುಕನಿಗೆ ಧರ್ಮದೇಟು
Published On :

ಬಾಗಲಕೋಟೆ: ಕಾಲೇಜು ವಿದ್ಯಾರ್ಥಿನಿಗೆ ನಡುರಸ್ತೆಯಲ್ಲೇ ತನ್ನ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನಿಗೆ ಧರ್ಮದೇಟು ನೀಡಿದ ಯುವಕರನ್ನೇ ಬಂಧಿಸಿದ ಆರೋಪ ಕೇಳಿಬಂದಿದ್ದು, ಪೊಲೀಸರ ಕ್ರಮ ವಿರೋಧಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಬಾಗಲಕೋಟೆಯ ನವನಗರದ ಬಳಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಕಂಡು ಕಾಮುಕನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದ ಇಬ್ಬರು ಯುವಕರು ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.

ಆದರೆ ಅಚ್ಚರಿ ಎಂದರೆ ಈ ಪ್ರಕರಣದಲ್ಲಿ ಪೊಲೀಸರು ಯುವತಿಯನ್ನು ರಕ್ಷಿಸಿ ಕಾಮುಕನಿಗೆ ಧರ್ಮದೇಟು ನೀಡಿದ ಯುವಕನನ್ನೇ ಬಂಧಿಸಿರುವ ಆರೋಪ ಕೇಳಿಬಂದಿದೆ.

ಏನಿದು ಘಟನೆ?

ಬಾಗಲಕೋಟೆಯ ನವನಗರದ 51ನೇ ಸೆಕ್ಟರ್ ಬಳಿ ಸೆ.17ರಂದು ರಸ್ತೆಯಲ್ಲಿ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಕಂಡು ಕಾಮುಕನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಸಹಾಯಕ್ಕಾಗಿ ಕೂಗಿಕೊಂಡಿದ್ದು, ತನಗಾಗುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸಿದ್ದಾಳೆ.

ಆಕೆಯ ನೆರವಿಗೆ ಚೇತನ್ ಕೊಡಬಾಗಿ ಹಾಗೂ ರೋಹನ್ ಹಾದಿಮನಿ ಎಂಬ ಇಬ್ಬರು ಯುವಕರು ಧಾವಿಸಿದ್ದಾರೆ. ಕಾಮುಕನ ಹಿಡಿದು ಆತನಿಗೆ ತಕ್ಕ ಪಾಠ ಕಲಿಸಲು ಆತನಿಗೆ ಧರ್ಮದೇಟು ನೀಡಿದ್ದಾರೆ. ಈ ವೇಳೆ ಯುವತಿ ಆರೋಪಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾಮುಕನ ಬಿಟ್ಟು, ಯುವತಿ ರಕ್ಷಣೆಗೆ ಧಾವಿಸಿದವರ ಬಂಧನ

ಇನ್ನು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಸುದೀಪ್ ನಾಡಗೌಡನನ್ನು ಬಂಧಿಸುವುದನ್ನು ಬಿಟ್ಟು, ಯುವತಿಯ ರಕ್ಷಣೆಗೆ ಬಂದಿದ್ದ ಚೇತನ್ ಕೋಡಬಾಗಿ ಹಾಗೂ ರೋಹನ್ ಹಾದಿಮನಿ ಎಂಬುವವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ನವನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಬಂಧಿತ ಯುವಕರ ಪೋಷಕರು ಮತ್ತು ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸರ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸರ ನಡೆಗೆ ಬಂಧಿತ ಯುವಕರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಮ್ಮ ಹುಡುಗರು ಯಾವುದೇ ತಪ್ಪು ಮಾಡಿಲ್ಲ. ಒಬ್ಬ ಹೆಣ್ಣುಮಗಳ ಮಾನ ಕಾಪಾಡಲು ಹೋಗಿದ್ದೇ ಅವರು ಮಾಡಿದ ತಪ್ಪೇ? ಕಿರುಕುಳ ನೀಡಿದವನ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನಮ್ಮ ಮಕ್ಕಳನ್ನು ಜೈಲಿಗಟ್ಟಿರುವುದು ಪೊಲೀಸರ ಅಮಾನವೀಯ ನಡೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಕ್ಷಿಸಿದವರನ್ನೇ ಬಂಧಿಸಿದ್ರೆ ಯಾರು ಮುಂದೆ ಬರುತ್ತಾರೆ?; ಸಂತ್ರಸ್ಥ ಯುವತಿ-ಪೋಷಕರ ಆಕ್ರೋಶ

ಚಿಕಿತ್ಸೆಯ ನೆಪಹೇಳಿ ಆರೋಪಿ ಸುದೀಪ್ ನಾಡಗೌಡನನ್ನು ಬಂಧಿಸುತ್ತಿಲ್ಲ. ಯುವತಿಯನ್ನು ರಕ್ಷಿಸಿದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಚೇತನ್ ಹಾಗೂ ರೋಹನ್ ನನ್ನ ಸಹಾಯಕ್ಕೆ ಬಂದವರು. ಅವರನ್ನು ಬಿಡುಗಡೆ ಮಾಡುವಂತೆ ನೊಂದ ಯುವತಿ ಪೊಲೀಸರಿಗೆ ಮನವಿ ಮಾಡಿದ್ದಾಳೆ.

"ನನಗೆ ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ಕಿರುಕುಳ ನೀಡುತ್ತಿದ್ದಾಗ ಈ ಯುವಕರು ನನ್ನ ರಕ್ಷಣೆಗೆ ಬಂದರು. ಮಹಿಳೆಯರ ರಕ್ಷಣೆ ಮಾಡಬೇಕಾದ ಪೊಲೀಸರು ಈಗ ರಕ್ಷಣೆ ಮಾಡಿದವರನ್ನೇ ಅಪರಾಧಿಗಳಂತೆ ಜೈಲಿಗೆ ಹಾಕಿದ್ದಾರೆ. ಇನ್ನು ಮುಂದೆ ಸಮಾಜದಲ್ಲಿ ಯಾವುದೇ ಹೆಣ್ಣುಮಗಳಿಗೆ ತೊಂದರೆಯಾದರೆ ಯಾರು ತಾನೇ ಮುಂದೆ ಬರುತ್ತಾರೆ?" ಎಂದು ಸಂತ್ರಸ್ತ ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾರೆ.

ಪೊಲೀಸ್ ಇಲಾಖೆಯ ಸ್ಪಷ್ಟನೆ

ಈ ಘಟನೆ ಮತ್ತು ಸಾರ್ವಜನಿಕರ ಆಕ್ರೋಶದ ಕುರಿತು ಪ್ರತಿಕ್ರಿಯಿಸಿರುವ ನವನಗರ ಪೊಲೀಸರು, 'ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸುದೀಪ್ ಎಂಬಾತನ ಮೇಲೆ ಹಲ್ಲೆ ನಡೆಸಿರುವ ದೂರು ದಾಖಲಾಗಿತ್ತು.

ಕಾನೂನನ್ನು ಕೈಗೆತ್ತಿಕೊಂಡು ತೀವ್ರವಾಗಿ ಹಲ್ಲೆ ನಡೆಸಿದ್ದಕ್ಕಾಗಿ ಚೇತನ್ ಮತ್ತು ರೋಹನ್ ವಿರುದ್ಧ ಅಸಾಲ್ಟ್ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇದರೊಂದಿಗೆ, ಯುವಕರ ಕುಟುಂಬದ ಕಡೆಯಿಂದಲೂ ಪ್ರತಿಯಾಗಿ ದೂರು ದಾಖಲಾಗಿದ್ದು, ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ" ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.