ರಾಜ್ಯ

ಮುಡಾ ಆಯುಕ್ತರ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಬೆದರಿಕೆ: ಇಬ್ಬರು ಬ್ರೋಕರ್ ಗಳ ವಿರುದ್ಧ FIR ದಾಖಲು

ಕಳೆದ ಜನವರಿ 7ರಂದು ಮುಡಾ ಕಚೇರಿ ಒಳಕ್ಕೆ ನುಗ್ಗಿದ್ದ ಬ್ರೋಕರ್ ವ್ಯಕ್ತಿಯೊಬ್ಬ ಸಿಬಂದಿ ಇಲ್ಲದ ಸಂದರ್ಭದಲ್ಲಿ ಕಚೇರಿ ದಾಖಲೆಗಳನ್ನು ಪರಿಶೀಲಿಸಿ ಫೋಟೊ ನಕಲು ಮಾಡಿದ್ದ ಘಟನೆ ನಡೆದಿತ್ತು.

ಮುಡಾ ಆಯುಕ್ತರ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಬೆದರಿಕೆ: ಇಬ್ಬರು ಬ್ರೋಕರ್ ಗಳ ವಿರುದ್ಧ FIR ದಾಖಲು
ಸಂಗ್ರಹ ಚಿತ್ರ
Published On :

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ(ಮೂಡಾ) ಉರ್ವಾ ಕಚೇರಿಯಲ್ಲಿ ಬ್ರೋಕರ್ ಗಳ ಆಟಾಟೋಪ ಮಿತಿಮೀರಿದ್ದು ಮುಡಾ ಆಯುಕ್ತರಿಗೇ ಬೆದರಿಕೆ ಹಾಕಿ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಇದರಿಂದ ನೊಂದ ಮುಡಾ ಕಮಿಷನರ್ ನೂರ್ ಝಹರಾ ಖಾನಂ ಅವರು ಇಬ್ಬರು ಬ್ರೋಕರ್ ಗಳ ವಿರುದ್ಧ ಉರ್ವಾ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಕಳೆದ ಜನವರಿ 7ರಂದು ಮುಡಾ ಕಚೇರಿ ಒಳಕ್ಕೆ ನುಗ್ಗಿದ್ದ ಬ್ರೋಕರ್ ವ್ಯಕ್ತಿಯೊಬ್ಬ ಸಿಬಂದಿ ಇಲ್ಲದ ಸಂದರ್ಭದಲ್ಲಿ ಕಚೇರಿ ದಾಖಲೆಗಳನ್ನು ಪರಿಶೀಲಿಸಿ ಫೋಟೊ ನಕಲು ಮಾಡಿದ್ದ ಘಟನೆ ನಡೆದಿತ್ತು. ಇದರ ಸಿಸಿಟಿವಿ ವಿಡಿಯೋ ಹೊರ ಬಂದಿದ್ದರಿಂದ ಮುಡಾ ಕಚೇರಿಯ ಬ್ರೋಕರ್ ವ್ಯವಹಾರ ಜಗಜ್ಜಾಹೀರಾಗಿತ್ತು. ಆನಂತರ ಮೂಡಾ ಕಮಿಷನರ್ ನೂರ್ ಝಹರಾ ಅವರು, ಸಿಬಂದಿ ಹೊರತುಪಡಿಸಿ ಇತರ ಯಾರು ಕೂಡ ಕಚೇರಿ ಒಳ ಬರುವಂತಿಲ್ಲ ಎಂದು ನಿರ್ಬಂಧ ವಿಧಿಸಿದ್ದರು.

ಇದರಿಂದ ಕಸಿವಿಸಿಗೊಳಗಾದ ಬ್ರೋಕರ್ ಗಳು, ಮುಡಾ ಕಮಿಷನರ್ ವಿರುದ್ಧ ಇತರ ಬ್ರೋಕರುಗಳನ್ನು ಒಟ್ಟುಗೂಡಿಸಿ ವಾಟ್ಸಪ್ ಗ್ರೂಪ್ ರಚಿಸಿ ಮಹಿಳಾ ಕಮಿಷನರ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ.

ಅಧಿಕಾರಿ ಬಗ್ಗೆ ಅವಮಾನಕರ ಸಂದೇಶಗಳನ್ನು ಪೋಸ್ಟ್ ಮಾಡುವುದು, ಗುಂಪು ಕೂಡಿಕೊಂಡು ಕಚೇರಿ ಒಳಗೆ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಫೋನ್ ಮೂಲಕ ಜೀವ ಬೆದರಿಕೆ ಒಡ್ಡುವುದಲ್ಲದೆ, ಸಾರ್ವಜನಿಕರ ಮುಂದೆ ಕಮಿಷನರ್ ಅವರನ್ನು ಅವಮಾನಿಸುವುದು, ಜನರನ್ನು ಸೇರಿಸಿ ಶಾಂತಿ ಕದಡಲು ಯತ್ನಿಸುವುದು, ಮಾಟಮಂತ್ರ ಬೆದರಿಕೆ ಒಡ್ಡುವ ಕೆಲಸ ಮಾಡಿದ್ದಾರೆಂದು ಮುಡಾ ಕಮಿಷನರ್ ನೂರ್ ಝಹರಾ ದೂರಿನಲ್ಲಿ ತಿಳಿಸಿದ್ದಾರೆ.

ದೂರು ಹಿನ್ನೆಲೆಯಲ್ಲಿ ಉರ್ವಾ ಪೊಲೀಸರು ಆರೋಪಿಗಳ ವಿರುದ್ಧ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 132, 351, 356(1), 61(2) ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.