ಮಂಗಳೂರಿನ MRPLನಲ್ಲಿ ಭಾರೀ ಅಗ್ನಿ ಅವಘಡ: ಆಗಸಕ್ಕೆ ಚಿಮ್ಮಿದ ದಟ್ಟ ಹೊಗೆ, 7 ಮಂದಿಗೆ ಗಾಯ..! Video
ಘಟನೆಯಲ್ಲಿ ಘಟಕದ ಪಕ್ಕದ ಕಚೇರಿಯಲ್ಲಿದ್ದ ಇತರ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಂಗಳೂರು: ಮಂಗಳೂರಿನ ಜೋಕಟ್ಟೆ ಸಮೀಪದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನ ಕೋಕರ್ ಹೈಡ್ರೋಟ್ರೀಟರ್ (ಸಿಎಚ್‌ಟಿ) ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 7 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಘಟನೆ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದು, ಸಿಎಚ್‌ಟಿ (ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್) ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಬಳಿಕ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, ರಾಜೇಶ್ ಬ್ಯಾಪ್ಟಿಸ್ಟ್ ಎಂಬ ಸಿಬ್ಬಂದಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿದೆ. ಅವರಿಗೆ ಶ್ರೀನಿವಾಸ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿಸಿದ್ದಾರೆ.
ಘಟನೆಯಲ್ಲಿ ಘಟಕದ ಪಕ್ಕದ ಕಚೇರಿಯಲ್ಲಿದ್ದ ಇತರ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎಂಆರ್‌ಪಿಎಲ್ ಅಧಿಕಾರಿಗಳ ಪ್ರಕಾರ, ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಸುಮಾರು 70 ಬಾರ್ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲ್ಡ್ ಸೆಪರೇಟರ್ ಒಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ತಕ್ಷಣವೇ ಘಟಕದ ಬ್ಯಾಟರಿ ಮಿತಿಯನ್ನು ಪ್ರತ್ಯೇಕಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಲಾಯಿತು. ಪರಿಣಾಮಿತ ಘಟಕವನ್ನು ಖಾಲಿ ಮಾಡಿಸಲಾಗಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ ಸಂಪೂರ್ಣ ತಂಪುಗೊಳಿಸುವ ಕಾರ್ಯಾಚರಣೆ ಇನ್ನೂ ಕೆಲಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಸ್ಫೋಟದ ಸದ್ದು ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಆತಂಕ ಮೂಡಿಸಿದ್ದು, ಕಾಟಿಪಳ್ಳ, ಕಾನಾ, ಬಜ್ಪೆ, ಅಂಗರಗುಂಡಿ, ಕುಳಾಯಿ, ಜೋಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಬೆಚ್ಚಿ ಬೀಳವಂತೆ ಸ್ಫೋಟದ ಸದ್ದು ಕೇಳಿಸಿದೆ ಎಂದು ತಿಳಿಸಿದ್ದಾರೆ.
ಬಳಿಕ ಜೋಕಟ್ಟೆಯಲ್ಲಿರುವ ಎಂಆರ್‌ಪಿಎಲ್ ಘಟಕದ ದಿಕ್ಕಿನಿಂದ ದಟ್ಟ ಕಪ್ಪು ಹೊಗೆ ಮೇಲಕ್ಕೆ ಬರುತ್ತಿರುವುದು ಕಂಡುಬಂದಿದೆ. ಕೆಲವು ಪ್ರದೇಶಗಳಲ್ಲಿ ಕಿಟಕಿ ಗಾಜುಗಳು ಒಡೆದಿವೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಲಹೆಯ ಮೇರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿತು. ಇದರಲ್ಲಿ ಪ್ರಿಸಿಷನ್ ಅಪ್ರೋಚ್ ಲೈಟಿಂಗ್ ವರ್ಗ-1 ವ್ಯವಸ್ಥೆ ಹಾಗೂ ಸುತ್ತಮುತ್ತಲಿನ ರಸ್ತೆಗಳನ್ನೂ ಪರಿಶೀಲಿಸಲಾಗಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.
ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಬೆಂಕಿ ನಂದಿಸುವ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಸದ್ಯ ಯಾವುದೇ ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪರೇಟರ್ ಒಡೆದ ನಿಖರ ಕಾರಣವನ್ನು ವಿವರವಾದ ತನಿಖೆಯ ಬಳಿಕ ಪತ್ತೆಹಚ್ಚಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



