ಶಾಸಕ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: 14 ವರ್ಷಗಳ ನಂತರ ಬಳ್ಳಾರಿ ಪ್ರವೇಶಕ್ಕೆ ಅನುಮತಿ
ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅನುಮತಿ ಪಡೆದು ಬಳ್ಳಾರಿಯ ನಿವಾಸಕ್ಕೆ ಭೇಟಿ ನೀಡಿದ್ದರು.

ಬಳ್ಳಾರಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್ ದೊರೆತಿದೆ. ಬಳ್ಳಾರಿಗೆ ತೆರಳಲು ಅವರಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿ ಸೋಮವಾರ ಆದೇಶಿಸಿದೆ. ಇದರೊಂದಿಗೆ, ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅವಕಾಶ ದೊರೆತಂತಾಗಿದೆ.
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆ ಕಳೆದ ಒಂದೂವರೆ ದಶಕಗಳಿಂದ ತವರು ಜಿಲ್ಲೆಯ ಪ್ರವೇಶವಿಲ್ಲದೆ ವನವಾಸ ಅನುಭವಿಸಿದ್ದ ಮಾಜಿ ಸಚಿವ, ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಕೊನೆಗೂ ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಾಗ ಕೋರ್ಟ್ ಬಳ್ಳಾರಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಿತ್ತು. ಆದ್ದರಿಂದ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಬೆಂಗಳೂರಿನ 'ಪಾರಿಜಾತ' ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದರು. ಜನಾರ್ದನ ರೆಡ್ಡಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್ ಬಳ್ಳಾರಿಗೆ ಭೇಟಿ ನೀಡದಂತೆ ಹಾಕಿದ್ದ ಷರತ್ತುಗಳನ್ನು ಸಡಿಲಿಸಿದೆ. ಆದ್ದರಿಂದ ಅವರು ಇನ್ನು ಮುಂದೆ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಬಹುದು. ಅಲ್ಲಿರುವ ತಮ್ಮ ಐಷಾರಾಮಿ ನಿವಾಸದಲ್ಲಿ ವಾಸ್ತವ್ಯವನ್ನು ಹೂಡಬಹುದು.
ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅನುಮತಿ ಪಡೆದು ಬಳ್ಳಾರಿಯ ನಿವಾಸಕ್ಕೆ ಭೇಟಿ ನೀಡಿದ್ದರು. ವಿವಾಹದ ಕಾರಣ 10ಕ್ಕೂ ಹೆಚ್ಚು ದಿನಗಳ ಕಾಲ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಕೋರ್ಟ್ ಅನುಮತಿ ನೀಡಿತ್ತು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಜನಾರ್ದನ ರೆಡ್ಡಿ ಅವರನ್ನು 2011ರ ಸೆ. 5 ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ರೆಡ್ಡಿ ಆಂಧ್ರ ಪ್ರದೇಶದ ಚರ್ಲಪಲ್ಲಿ ಜೈಲು ಸೇರಿದ್ದರು. ನಂತರ ನಡೆದ ವಿಚಾರಣೆಯಲ್ಲಿ ಜನಾರ್ದನ ರೆಡ್ಡಿ ಪ್ರಭಾವಿಯಾಗಿದ್ದು, ಸಾಕ್ಷ್ಯ ನಾಶ ಸಾಧ್ಯತೆ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ ಪ್ರದೇಶಗಳಾದ ಬಳ್ಳಾರಿ, ಅನಂತಪುರ ಮತ್ತು ಕರ್ನೂಲು ಜಿಲ್ಲೆ ಪ್ರವೇಶ ನಿಷೇಧ ಹೇರಲಾಗಿತ್ತು. ಹೀಗಾಗಿ 13 ವರ್ಷಗಳಿಂದ ಜನಾರ್ದನ ರೆಡ್ಡಿ ಬಳ್ಳಾರಿಯಿಂದ ದೂರವಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


