ಕೈದಿ ಪತ್ನಿಯ ಮೇಲೆ ಕಣ್ಣು, ಸುಪ್ರೀಂ ಕೋರ್ಟ್ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿಗೆ ಮುಕ್ತಿ: ಜೈಲು ಡಿಐಜಿ ಸೋಮಶೇಖರ್ ಬಂಧನ ಕೇಸ್‌ಗೆ ಬಿಗ್ ಟ್ವಿಸ್ಟ್!
ಡಿಐಜಿ ಸೋಮಶೇಖರ್ ಬಂಧನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಹೆಣ್ಣಿನ ಆಸೆಗೆ ಬಿದ್ದು, ಸುಪ್ರೀಂ ಕೋರ್ಟ್‌ನ ನಕಲಿ ಬಿಡುಗಡೆ ಆದೇಶವನ್ನು ಸೃಷ್ಟಿಸಿ ಜೈಲಿನಿಂದ ಕೈದಿ ಶಂಕರ್ ಆರ್ಮುಗಂನನ್ನು ಅಕ್ರಮವಾಗಿ ಡಿಐಜಿ ಎಂ. ಸೋಮಶೇಖರ್ ಅವರು ಬಿಡುಗಡೆ ಮಾಡಿದ್ದಾರೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬೆಂಗಳೂರು: ಜೈಲು ಡಿಐಜಿ ಸೋಮಶೇಖರ್ ಬಂಧನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಹೆಣ್ಣಿನ ಆಸೆಗೆ ಬಿದ್ದು, ಸುಪ್ರೀಂ ಕೋರ್ಟ್‌ನ ನಕಲಿ ಬಿಡುಗಡೆ ಆದೇಶವನ್ನು ಸೃಷ್ಟಿಸಿ ಜೈಲಿನಿಂದ ಕೈದಿ ಶಂಕರ್ ಆರ್ಮುಗಂನನ್ನು ಅಕ್ರಮವಾಗಿ ಕರ್ನಾಟಕ ಕಾರಾಗೃಹ ಇಲಾಖೆಯ ಡಿಐಜಿ ಎಂ. ಸೋಮಶೇಖರ್ ಅವರು ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ತಮಿಳುನಾಡು ಮೂಲದ ಶಂಕರ್ ಆರ್ಮುಗಂ ಮತ್ತು ಆತನ ಗ್ಯಾಂಗ್ 2001ರಲ್ಲಿ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಅಪಹರಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 2004ರಲ್ಲಿ ಶಂಕರ್‌ನಿಗೆ ಜೀವಾವಧಿ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿತ್ತು. ಅದರಲ್ಲೂ, ಆತ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎರಡರಲ್ಲೂ ಮೇಲ್ಮನವಿ ಸಲ್ಲಿಸಿದ್ದರೂ, ಎರಡೂ ಕಡೆ ಶಿಕ್ಷೆ ಎತ್ತಿಹಿಡಿಯಲ್ಪಟ್ಟಿತ್ತು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ವಜಾಗೊಂಡಿದ್ದರೂ, ಜೈಲು ಸಿಬ್ಬಂದಿ ಶ್ರೀಕಾಂತ್ ಹಾಗೂ ಜೈಲು ಡಿಐಜಿ ಸೋಮಶೇಖರ್ ಸಹಾಯದಿಂದ ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಪ್ರತಿಯನ್ನು ಸೃಷ್ಟಿಸಲಾಗಿತ್ತು. ಅದರಲ್ಲಿ ಕೈದಿಗೆ ಕೇವಲ ₹10,000 ದಂಡ ವಿಧಿಸಿ ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ನಕಲಿ ಸಹಿ, ಸೀಲು ಹಾಕಿ ಫೋರ್ಜರಿ ಮಾಡಲಾಗಿತ್ತು. ಅದರಂತೆ, ಈ ಫೋರ್ಜರಿ ದಾಖಲೆಗಳನ್ನು ನೈಜ ಎಂದು ನಂಬಿದ್ದ ಜೈಲು ಅಧಿಕಾರಿಗಳು, ನವೆಂಬರ್ 13, 2018 ರಂದು ₹10,000 ದಂಡ ಕಟ್ಟಿಸಿಕೊಂಡು ಶಂಕರ್‌ನನ್ನು ಜೈಲಿನಿಂದ ಮುಕ್ತಗೊಳಿಸಿದ್ದರು.
ಆದರೆ, ಇತ್ತೀಚೆಗೆ (ಮೇ 2026 ರಲ್ಲಿ) ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಿಗೆ ಈ ಅಕ್ರಮ ಬಿಡುಗಡೆ ಕುರಿತು ಅನಾಮಧೇಯ ದೂರು ಬಂದಿತ್ತು. ಜೈಲು ಅಧಿಕಾರಿಗಳು ತಕ್ಷಣ ಸುಪ್ರೀಂ ಕೋರ್ಟ್‌ನ ಅಸಿಸ್ಟೆಂಟ್ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿ ದಾಖಲೆಗಳನ್ನು ಪರಿಶೀಲಿಸಿದಾಗ, ಕೋರ್ಟ್ ಅಂತಹ ಯಾವುದೇ ಆದೇಶ ನೀಡಿಲ್ಲ ಮತ್ತು ದಾಖಲೆಗಳು ಸಂಪೂರ್ಣ ನಕಲಿ ಎಂಬುದು ಸಾಬೀತಾಯಿತು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ವಂಚನೆ, ದಾಖಲೆಗಳ ತಿದ್ದುಪಡಿ ಹಾಗೂ ಕ್ರಿಮಿನಲ್ ಪಿತೂರಿಯಡಿ ಪ್ರಕರಣ ದಾಖಲಿಸಲಾಯಿತು. ಅದರಂತೆ, ಸೆ.15 ರಂದು ಮೈಸೂರಿನಲ್ಲಿ ವಾಸವಿದ್ದ ಕೈದಿ ಶಂಕರ್ ಆರ್ಮುಗಂ ಹಾಗೂ ಜೈಲು ಸಿಬ್ಬಂದಿ ಶ್ರೀಕಾಂತ್ ನನ್ನು ಬಂಧಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಪರಪ್ಪನ ಅಗ್ರಹಾರ ಪೊಲೀಸರು ಇದೀಗ ಜೈಲು DIG ಸೋಮಶೇಖರ್ ಅವರನ್ನು ಬಂಧಿಸಿದ್ದಾರೆ.
ತನಿಖೆಯಲ್ಲಿ ಬಯಲಾದ ಮಹಾಸತ್ಯ
ತನಿಖೆಯ ವೇಳೆ ಕೈದಿ ಶಂಕರ್‌ನ ಪತ್ನಿಯ ಹೇಳಿಕೆಯನ್ನು ದಾಖಲಿಸಿಕೊಂಡಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಜೈಲಿನಲ್ಲಿದ್ದ ಎಸ್‌ಡಿಎ ಶ್ರೀಕಾಂತ್ ಮತ್ತು ಅಂದಿನ ಜೈಲು ಮುಖ್ಯಸ್ಥರಾಗಿದ್ದ ಸೋಮಶೇಖರ್ ಇಬ್ಬರೂ ಸೇರಿ, ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡಿಸಿಕೊಡುವುದಾಗಿ ನಂಬಿಸಿ ಆ ಅಸಹಾಯಕ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.
ಏತನ್ಮಧ್ಯೆ, ಕೈದಿ ಶಂಕರ್‌ನ ಬಿಡುಗಡೆಗೆ ಕೇವಲ ಸುಪ್ರೀಂಕೋರ್ಟ್ ಆದೇಶವಷ್ಟೇ ಅಲ್ಲ, ಅದಕ್ಕೂ ಮುನ್ನವೇ ಹಲವು ನಿಯಮಬಾಹಿರ ಕೃತ್ಯಗಳನ್ನು ಎಸಗಿದ್ದರು ಎನ್ನಲಾಗಿದೆ. ಅದರಂತೆ, ಶಂಕರ್‌ಗೆ 2018ರಲ್ಲಿ ಪ್ರತ್ಯೇಕ ಅವಧಿಗಳಲ್ಲಿ ಮೂರು ಬಾರಿ, ತಲಾ 15 ದಿನಗಳಂತೆ ನಿಯಮಗಳನ್ನು ಗಾಳಿಗೆ ತೂರಿ ಪೆರೋಲ್ ನೀಡಲಾಗಿತ್ತು. ಪೆರೋಲ್ ನೀಡುವಾಗ ಪಾಲಿಸಬೇಕಾದ ಯಾವುದೇ ಅಧಿಕೃತ ಪ್ರಕ್ರಿಯೆಯನ್ನು ಅಂದಿನ ಜೈಲು ಮುಖ್ಯಸ್ಥ ಸೋಮಶೇಖರ್ ಪಾಲಿಸಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



