HSRP ನಂಬರ್ ಪ್ಲೇಟ್: 3 ದಿನ ದಂಡ ವಿಧಿಸದಿರಲು ಸಾರಿಗೆ ಇಲಾಖೆ ನಿರ್ಧಾರ
ಸಾರಿಗೆ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಇಂದು ಕೂಡ ನೋಂದಣಿಗೆ ಅವಕಾಶ ಇದ್ದು, ನೋಂದಣಿ ಮಾಡಿಸಿಕೊಳ್ಳದವರಿಗೆ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.

ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಅಂತಿಮ ಗಡುವು ಭಾನುವಾರಕ್ಕೆ ಮುಕ್ತಾಯವಾಗಿದ್ದು, ಈ ನಡುವೆ ಸೆ.18ರವರೆಗೂ ಕಠಿಣ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಸಾರಿಗೆ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಇಂದು ಕೂಡ ನೋಂದಣಿಗೆ ಅವಕಾಶ ಇದ್ದು, ನೋಂದಣಿ ಮಾಡಿಸಿಕೊಳ್ಳದವರಿಗೆ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.
ಸೆಪ್ಟೆಂಬರ್ 18ರಂದು ಎಚ್‌ಎಸ್‌ಆರ್‌ಪಿ ಅಳವಡಿಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಹೈಕೋರ್ಟ್ ನಲ್ಲಿ ಬರಲಿದೆ. ಹೀಗಾಗಿ, ಅಲ್ಲಿಯವರೆಗೆ ವಾಹನ ಮಾಲೀಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದು ಬೇಡ ಎಂದು ಸಾರಿಗೆ ಇಲಾಖೆ ಆಯುಕ್ತ ಎ.ಎಂ.ಯೋಗೀಶ್ ಹೇಳಿದ್ದಾರೆ.
ಸೋಮವಾರದಿಂದ ದಂಡ ವಿಧಿಸುವುದಾಗಿ ಕರ್ನಾಟಕ ಸಾರಿಗೆ ಇಲಾಖೆ ಘೋಷಣೆ ಮಾಡಿತ್ತು. ಕರ್ನಾಟಕ ಪೊಲೀಸ್ ಇಲಾಖೆ ಸಂಚಾರ ವಿಭಾಗ, ಸಾರಿಗೆ ಇಲಾಖೆಯವರೂ ಹಳೆ ನಂಬರ್ ಪ್ಲೇಟ್ ಇದ್ದ ವಾಹನದವರಿಗೆ ದಂಡವನ್ನು ವಿಧಿಸಲು ಆರಂಭಿಸಲಿದ್ದಾರೆನ್ನಲಾಗಿತ್ತು.
ಆದರೆ, ಇದೀಗ ಮೂರು ದಿನದವರೆಗೆ ಕ್ರಮ ಕೈಗೊಳ್ಳದಂತೆ ಸಾರಿಗೆ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಕೊಂಚ ರಿಲ್ಯಾಕ್ಸ್ ಇರಲಿದೆ.
ಸುಮಾರು 1.5 ಕೋಟಿ ವಾಹನಗಳು ಇನ್ನೂ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್'ನ್ನು ಅಳವಡಿಸಿಕೊಂಡಿಲ್ಲ. ಗಡುವು ವಿಸ್ತರಣೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಒಪ್ಪಿಗೆ ಬೇಕು ಎಂದು ಸಾರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಹಲವು ವಾಹನ ಮಾಲೀಕರು ಹೊಸ ನಂಬರ್ ಪ್ಲೇಟ್‌ಗಳಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ವಾಹನ ಮಾರಾಟಗಾರರ ಬಳಿಗೆ ಹೋಗಿ ತಮ್ಮ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಗಳನ್ನು ಲಗತ್ತಿಸುತ್ತಿಲ್ಲ. ಹೀಗಾಗಿ ವಾಹನ ಡೀಲರ್‌ಗಳ ಬಳಿ ನೂರಾರು ನಂಬರ್ ಪ್ಲೇಟ್‌ಗಳು ಬಿದ್ದಿವೆ. ಅವುಗಳನ್ನು ವಾಹನಗಳಿಗೆ ಅಳವಡಿಸಿದ ನಂತರವೇ, ಎಚ್‌ಎಸ್‌ಆರ್‌ಪಿ ಪ್ರಕ್ರಿಯೆಯು ಕೊನೆಗೊಳ್ಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು 2023ರ ಆಗಸ್ಟ್ನಲ್ಲಿ ಹೊರಡಿಸಿತ್ತು. ಆರಂಭದಲ್ಲಿ 2023ರ ನವೆಂಬರ್ 17ರ ಗಡುವನ್ನು ನಿಗದಿಪಡಿಸಲಾಗಿತ್ತು. ನಿಧಾನಗತಿಯ ಅಳವಡಿಕೆಯ ಕಾರಣ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿತ್ತು. ಸಾರಿಗೆ ಇಲಾಖೆ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿರುವ ಹಳೆಯ ಎರಡು ಕೋಟಿ ವಾಹನಗಳ ಪೈಕಿ ಶೇ.26ರಷ್ಟು ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ವಾಹನ ಮಾಲೀಕರ ನೀರಸ ಪ್ರತಿಕ್ರಿಯೆಯಿಂದಾಗಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವನ್ನು ಈ ಹಿಂದೆ ಮೂರು ಬಾರಿ ವಿಸ್ತರಣೆ ಮಾಡಲಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



