ಶೈಕ್ಷಣಿಕ, ಶ್ರೀಸಾಮಾನ್ಯರ ಪ್ರವಾಸೋದ್ಯಮಕ್ಕೆ ರಾಜ್ಯದಲ್ಲಿ ಆದ್ಯತೆ; ಎಚ್.ಕೆ ಪಾಟೀಲ ಪ್ರತಿಪಾದನೆ
ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದ ದಕ್ಷಿಣದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಸಚಿವರುಗಳ ಸಮ್ಮೇಳನ

ಬೆಂಗಳೂರು: ವಿಲಾಶಿ ಮತ್ತು ಮೇಲ್ಮದ್ಯಮ ವರ್ಗದವರ, ಶ್ರೀಮಂತರ ಪ್ರವಾಸೋದ್ಯಮ ಅವಶ್ಯಕತೆಗಳನ್ನು ಪೂರೈಸುವ ಜೊತೆಜೊತೆಗೆ ಶ್ರೀಸಾಮಾನ್ಯರ, ಬಡವರ, ವಿದ್ಯಾರ್ಥಿಗಳ, ಮಕ್ಕಳ ಮತ್ತು ಇತರ ಅವಕಾಶ ವಂಚಿತ ಸಮುದಾಯಗಳ ಪ್ರವಾಸೋದ್ಯಮದ ಅವಶ್ಯಕತೆಗಳಿಗೆ ಪೂರಕವಾದ ನೀತಿಗಳನ್ನು ಸರ್ಕಾರಗಳು ರೂಪಿಸಬೇಕೆಂದು ಕಾನೂನು. ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಪ್ರತಿಪಾದಿಸಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದ ದಕ್ಷಿಣದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಸಚಿವರುಗಳ ಸಮ್ಮೇಳನದಲ್ಲಿ ಮಾತನಾಡಿದ ಎಚ್ .ಕೆ. ಪಾಟೀಲ್, ಕರ್ನಾಟಕ ಪ್ರವಾಸೋದ್ಯಮ ಅತ್ಯಂತ ಉಚ್ಚಾಯ ಸ್ಥಿತಿಯಲ್ಲಿದ್ದು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಆದರೆ, ಕೇಂದ್ರ ಸರ್ಕಾರ ಮೈಸೂರಿನ ಚಾಮುಂಡೇಶ್ವರಿ ದೇವಿ ಬೆಟ್ಟವನ್ನು ಅಭಿವೃದ್ಧಿಪಡಿಸಲು ಪ್ರಸಾದ್ ಯೋಜನೆಯಡಿ ಬಿಡುಗಡೆಯಾಗಬೇಕಾದ 45.17 ಕೋಟಿ ರೂಪಾಯಿಗಳ ಮೊದಲ ಕಂತನ್ನು ಇನ್ನು ಬಿಡುಗಡೆಯಾಗಿಲ್ಲ. ಮೈಸೂರು ಮತ್ತು ಹಂಪಿ ಯೋಜನೆಗಳನ್ನು ಸ್ವದೇಶಿ ದರ್ಶನ 2.0 ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು 46.17 ಕೋಟಿ ರೂಪಾಯಿಗಳು ಇನ್ನು ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.
ಹಣ ಬಿಡುಗಡೆಯಲ್ಲಿ ಇಂಥ ವಿಳಂಬಗಳು ಅತ್ಯಂತ ಮಹತ್ವದ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಲ್ಲಿ ಅಡ್ಡಿಯುಂಟುಮಾಡುತ್ತಿದ್ದು ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವಲ್ಲಿ ರಾಜ್ಯ ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿವೆ. ಆದ್ದರಿಂದ ಮುಂದಿನ ಅನಾನುಕೂಲಗಳನ್ನು ತಪ್ಪಿಸಲು ಹಾಗೂ ಕಾಲಮಿತಿಗೊಳಪಟ್ಟು ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಹಣ ಬಿಡುಗಡೆಯನ್ನು ತ್ವರಿತಗೊಳಿಸಬೇಕೆಂದು ಒತ್ತಾಯಿಸಿದರು.
ಗೋಲ್ಡನ್ ಚಾರಿಯೆಟ್ ರೈಲು ಯೋಜನೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಆದರೆ ಭಾರತ್ ಗೌರವ ರೈಲ್ವೆ ನೀತಿಯಂತೆ ಗೋಲ್ಡನ್ ಚಾರಿಯೆಟ್ ಪ್ರವಾಸದ ನೀತಿಯನ್ನು ಬದಲಾವಣೆ ಮಾಡಿ ಪ್ರವಾಸದ ಶುಲ್ಕವನ್ನು ಕಡಿತಗೊಳಿಸುವ ಮೂಲಕ ಅತ್ಯಂತ ಮಹತ್ವದ ವೈಭವದ ಈ ಪ್ರವಾಸ ಯೋಜನೆಗೆ ಸಾರ್ವಜನಿಕರು ಉಪಯೋಗಿಸಲು ಅನುಕೂಲವಾಗಬೇಕೆಂದು ಒತ್ತಾಯಿಸಿದರು.
ಬೇರೆ ಬೇರೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಪಾರಂಪರಿಕ ತಾಣಗಳು ಮತ್ತು ಇಕೋ ಟೂರಿಸಂ ತಾಣಗಳನ್ನು ಅಂದರೆ ಪರಿಸರ ಪ್ರವಾಸೋದ್ಯಮ ತಾಣಗಳನ್ನು ಗೋಲ್ಡನ್ ಚಾರಿಯೆಟ್ ಯೋಜನೆಗೆ ಜೋಡಿಸಬೇಕೆಂದು ಎಲ್ಲ ವರ್ಗದ ಜನರು ಈ ಯೋಜನೆಯನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ನೀತಿ ಬದಲಾವಣೆ ಮತ್ತು ಪ್ರವೃತ್ತಿ ಬದಲಾವಣೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಕರ್ನಾಟಕದ ಪ್ರಸ್ತುತ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಮಾರ್ಗದತ್ತು ಯೋಜನೆ, ನಮ್ಮ ಸ್ಮಾರಕ ಯೋಜನೆಯನ್ನು ವಿವರಿಸಿದ ಸಚಿವರು, ದತ್ತು ನೀಡಲು 800 ಸ್ಮಾರಕಗಳನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 2, 5000 ಅಲಕ್ಷಿತ ಸ್ಮಾರಕಗಳಿವೆ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಅತ್ಯಂತ ಜನಪ್ರಿಯ ಯೋಜನೆಯಾದ ಶಕ್ತಿ ಯೋಜನೆಯಡಿ 285 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ಪಾರಂಪರಿಕ ಮತ್ತು ಶ್ರದ್ಧಾ ಪ್ರವಾಸೋದ್ಯಮದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ ಎಂದು ಮಾನ್ಯ ಸಚಿವರು ವಿವರಿಸಿದರು.
ಕರ್ನಾಟಕದ 5 ಪಾರಂಪರಿಕ ತಾಣಗಳನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗಳಿಗೆ ಸೇರ್ಪಡೆಯಾಗಿದ್ದು ಡೆಕ್ಕನ್ ಸುಲ್ತನೇಟ್‌ನ ಕೋಟೆಗಳು, ಶ್ರೀರಂಗಪಟ್ಟಣದ ಸ್ಮಾರಕಗಳು, ಐಹೊಳೆ-ಬಾದಾಮಿಯ ಮಂದಿರಗಳ ಶಿಲ್ಪಕಲೆ, ಹಿರೆಬೆಣಕಲ್‌ನ ಮೆಗಾಲಿಟಿಕ್ ಸೈಟ್ ಮತ್ತು ಬೀದರ್‌ನ ಕರೇಜ್ ವ್ಯವಸ್ಥೆ ಹಾಗೂ ಲಕ್ಕುಂಡಿಯ ಪಾರಂಪರಿಕ ಶಿಲ್ಪಕಲಾ ವೈಭವಗಳು ಯುನೆಸ್ಕೋದ ವಿಶ್ವಪಾರಂಪರಿಕ ತಾಣಗಳ ಪಟ್ಟಿಗಳಿಗೆ ಸೇರಬೇಕೆಂದು ಕರ್ನಾಟಕದ ಉತ್ಕಟವಾದ ಬಯಕೆಯಾಗಿದೆ. ಇಂಥ ತಾಣಗಳನ್ನು ಯುನೆಸ್ಕೋ ತಾಣಗಳಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರ ಅಗತ್ಯದ ಬೆಂಬಲ ನೀಡಬೇಕೆಂದು ವಿನಂತಿಸಿದರು.
ಕರ್ನಾಟಕದ ಹೊಸ ಪ್ರವಾಸೋದ್ಯಮ ನೀತಿ 2024-29 ಎಲ್ಲ ವರ್ಗದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ಪರಿಷ್ಕೃತವಾದ ಮಹತ್ವವನ್ನು ಮತ್ತು ಒತ್ತು ನೀಡಲು ಪ್ರತಿಯೊಬ್ಬ ಪ್ರವಾಸಿಗನ ಸಂತಸಮಯ ಕ್ಷಣಗಳನ್ನು ಕಳೆಯಲು ಹಾಗೂ ಆರ್ಥಿಕ ವೃದ್ಧಿ ಮಾಡುವ ದಿಸೆಯಲ್ಲಿ ಮಹತ್ವದ ಹೆಜ್ಜೆಗಳನ್ನಿರಿಸುತ್ತದೆ ಎಂದು ಮಾನ್ಯ ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


