Deepavali 2024: ಹಸಿರು ಪಟಾಕಿ ಮಾರಾಟಕ್ಕಷ್ಟೇ ಅನುಮತಿ; ರಾಜ್ಯ ಸರ್ಕಾರ
ಹಬ್ಬಕ್ಕೆ ಹಸಿರು ಪಟಾಕಿ ಮಾತ್ರವೇ ಬಳಸಿ. ಹಲವು ಮಕ್ಕಳು ಪಟಾಕಿ ಸಿಡಿಸುವಾಗ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದನ್ನು ನೋಡುತ್ತೇವೆ, ಹಲವರು ಗಾಯಗೊಳ್ಳುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಪಟಾಕಿ ಹಚ್ಚದಿರುವುದೇ ಉತ್ತಮ.

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಬಾರಿಯ ಹಬ್ಬಕ್ಕೆ ಹಸಿರು ಪಟಾಕಿಗಳ ಮಾರಾಟಕ್ಕಷ್ಟೇ ಅನುಮತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಶನಿವಾರ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆಯವರು, ಕತ್ತಲೆಂಬ ಅಜ್ಞಾನವನ್ನು ಕಳೆದು ಸುಜ್ಞಾನವೆಂಬ ದೀಪ ಹಚ್ಚುವ ಬೆಳಕಿನ ಹಬ್ಬಕ್ಕೂ ಪಟಾಕಿಗೂ ಅವಿನಾಭಾವ ಬಾಂಧವ್ಯ ಬೆಸೆದಿದೆ. ಆದರೆ ಈ ಪಟಾಕಿಗಳು ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಪರಿಸರಕ್ಕೆ ದಟ್ಟ ಹೊಗೆ ಸೇರಿಸುವ, ರಾಸಾಯನಿಕ, ಭಾರ ಲೋಹಯುಕ್ತ ಪಟಾಕಿ ಬಳಸದಂತೆ ಮನವಿ ಮಾಡಿದರು.
ಹಬ್ಬಕ್ಕೆ ಹಸಿರು ಪಟಾಕಿ ಮಾತ್ರವೇ ಬಳಸಿ. ಹಲವು ಮಕ್ಕಳು ಪಟಾಕಿ ಸಿಡಿಸುವಾಗ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದನ್ನು ನೋಡುತ್ತೇವೆ, ಹಲವರು ಗಾಯಗೊಳ್ಳುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಪಟಾಕಿ ಹಚ್ಚದಿರುವುದೇ ಉತ್ತಮ. ಪಟಾಕಿ ಸಿಡಿಸಲೇಬೇಕು ಎಂದಾದರೆ ಪರಿಸರಕ್ಕೆ ಹಾನಿ ಉಂಟು ಮಾಡದ ಹಸಿರು ಪಟಾಕಿ ಮಾತ್ರವೇ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್ ತನ್ನ ಹಲವು ತೀರ್ಪುಗಳಲ್ಲಿ 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕಯುಕ್ತ ಪಟಾಕಿಗಳನ್ನು ನಿಷೇಧಿಸಿದೆ. ಹೀಗಾಗಿ ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಹಚ್ಚಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು,
ಗಣಪತಿ ಹಬ್ಬದ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಟಾಕಿ ಮಳಿಗೆಗೆ ಅನುಮತಿ ನೀಡುವಾಗ ಹಸಿರು ಪಟಾಕಿ ಮಾತ್ರ ದಾಸ್ತಾನು, ಸಾಗಾಟ ಹಾಗೂ ಮಾರಾಟ ಮಾಡುವುದಾಗಿ ಮಳಿಗೆ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಮುಂದಿನ ಸಾಲಿನಿಂದ ಪಟಾಕಿ ಮಳಿಗೆ ಅನುಮತಿ ನೀಡದಂತೆ ತಿಳಿಸಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಇದೇ ವೇಳೆ ಸೂಚನೆ ನೀಡಿದರು.
ಸಂಘ ಸಂಸ್ಥೆಗಳು, ಶಿಕ್ಷಕರು, ಬೋಧಕರು, ಉಪನ್ಯಾಸಕರು, ಪರಿಸರ ಪ್ರೇಮಿಗಳು, ಜನಪ್ರತಿನಿಧಿಗಳು ಜನರಲ್ಲಿ ಅದರಲ್ಲೂ ಮಕ್ಕಳಲ್ಲಿ ಪಟಾಕಿಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಪಟಾಕಿ ತ್ಯಜಿಸುವಂತೆ ಇಲ್ಲವೇ ಹಸಿರು ಪಟಾಕಿ ಮಾತ್ರ ಬಳಸಲು ಮನವಿ ಮಾಡಬೇಕು ಎಂದೂ ಸಚಿವರು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



