ವಿಳಂಬ ಮಾಡದೆ ಕಳಸಾ-ಬಂಡೂರಿ ಯೋಜನೆಗೆ ಅನುಮೋದನೆ ನೀಡಿ: ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಆಗ್ರಹ
ಅಕ್ಟೋಬರ್ 9 ರಂದು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್‌ಬಿಡಬ್ಲ್ಯು) 80 ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಕಣಕುಂಬಿಯಲ್ಲಿ ಕಳಸಾ-ಬಂಡೂರಿ ಯೋಜನೆಯಡಿ ನೀರನ್ನು ತಿರುಗಿಸುವ ಬಗ್ಗೆ ಚರ್ಚಿಸಲಾಯಿತು.

ಬೆಳಗಾವಿ: ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಗೋವಾ ಸರ್ಕಾರ ಒಡ್ಡುತ್ತಿರುವ ಅಡೆತಡೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕವು ಯಾವುದೇ ವಿಳಂಬವಿಲ್ಲದೆ ಯೋಜನೆಗೆ ಅಗತ್ಯ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದು, ಸುಪ್ರೀಂ ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿಲ್ಲ ಎಂದು ತಿಳಿಸಿದೆ.
ಅಕ್ಟೋಬರ್ 9 ರಂದು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್‌ಬಿಡಬ್ಲ್ಯು) 80 ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಕಣಕುಂಬಿಯಲ್ಲಿ ಕಳಸಾ-ಬಂಡೂರಿ ಯೋಜನೆಯಡಿ ನೀರನ್ನು ತಿರುಗಿಸುವ ಬಗ್ಗೆ ಚರ್ಚಿಸಲಾಯಿತು. ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ನಡುವಿನ ಹುಲಿ ಕಾರಿಡಾರ್‌ನಿಂದ 10.68 ಹೆಕ್ಟೇರ್ ಅರಣ್ಯ ಭೂಮಿಯನ್ನು ಡೈವರ್ಶನ್ ವೇರ್, ಪಂಪ್‌ಹೌಸ್, ವಿದ್ಯುತ್ ಸಬ್‌ಸ್ಟೇಷನ್, ಪೈಪ್‌ಲೈನ್ ಮತ್ತು ನಿರ್ಮಾಣ ಚುಟುವಟಿಕೆಗಾಗಿ ಬಳಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆ ಸಭೆಯಲ್ಲಿ ಚರ್ಚೆಯ ಪ್ರಮುಖ ಅಜೆಂಡಾವಾಗಿತ್ತು. ಖಾನಾಪುರ ತಾಲೂಕಿನಲ್ಲಿ ಕಳಸಾ ನಾಲಾ ತಿರುವು ಯೋಜನೆ ನಿರ್ಮಾಣಕ್ಕಾಗಿ ಕಣಕುಂಬಿ ಮತ್ತು ಇತರ ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಲೈನ್ ಅಳವಡಿಸುವುದನ್ನೂ ಇದು ಒಳಗೊಂಡಿದೆ.
ಕರ್ನಾಟಕದ ಮನವಿಯನ್ನು ಆಲಿಸಿದ ಎನ್‌ಬಿಡಬ್ಲ್ಯು ಸ್ಥಾಯಿ ಸಮಿತಿ, ಯೋಜನೆಯ ಸ್ಥಿತಿಗತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯದ ಪ್ರತಿನಿಧಿಗಳಿಗೆ ಸೂಚಿಸಿದೆ. ಜತೆಗೆ, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ. ಯೋಜನೆಯ ಅನುಷ್ಠಾನದಿಂದ ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ತಜ್ಞರ ಸಮಿತಿಯು ಯೋಜನೆಗೆ ಅನುಮೋದನೆ ನೀಡಿ ಈಗಾಗಲೇ ಒಂಬತ್ತು ತಿಂಗಳುಗಳು ಕಳೆದಿವೆ. ಈ ಎಲ್ಲ ಬೆಳವಣಿಗೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಕೂಡಲೇ ಯೋಜನೆ ಆರಂಭಿಸಲು ಅರಣ್ಯ ಮತ್ತು ವನ್ಯಜೀವಿಗಳ ಇಲಾಖೆಯಿಂದ ಅನುಮತಿ ನೀಡಬೇಕು ಎಂದು ಮಂಜುನಾಥ್ ಪ್ರಸಾದ್ ಆಗ್ರಹಿಸಿದ್ದಾರೆ.
ಮಹದಾಯಿ ಜಲ ವಿವಾದ ನ್ಯಾಯಮಂಡಳಿ (ಎಂಡಬ್ಲ್ಯುಡಿಟಿ) 2018ರಲ್ಲಿಯೇ ಈ ಯೋಜನೆಯ ಮೂವರು ಭಾಗೀದಾರರಾದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಕ್ಕೆ ನದಿ ನೀರಿನ ಪಾಲನ್ನು ಮಂಜೂರು ಮಾಡಿ ಆದೇಶ ನೀಡಿದ್ದನ್ನು ಅವರು ಸಮಿತಿಗೆ ನೆನಪಿಸಿದ್ದಾರೆ. 2020 ರ ಕೇಂದ್ರ ಜಲ ಆಯೋಗವು ಕಳಸಾ-ಬಂಡೂರಿ ಯೋಜನೆಯ ಪರಿಷ್ಕೃತ ಯೋಜನಾ ವರದಿಯನ್ನು ಅನುಮೋದಿಸಬಹುದು ಎಂಬುದಾಗಿ ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎಂದು ಅವರು ತಿಳಿಸಿದ್ದಾರೆ.
ಯೋಜನೆಗೆ ಒಪ್ಪಿಗೆ ನೀಡಲು ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದರು. ಆದರೆ, ಅದರ ನಡುವೆಯೇ ಗೋವಾದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಕರ್ನಾಟಕ ನೀರಾವರಿ ಎಂಡಿಗೆ ಶೋಕಾಸ್ ನೋಟಿಸ್ ನೀಡಿದ್ದರು. ಅದರಲ್ಲಿ, 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ, ಗೋವಾ ಸರ್ಕಾರದ ಅನುಮತಿಯಿಲ್ಲದೆ ಕರ್ನಾಟಕ ಸರ್ಕಾರವು ಯೋಜನೆಯನ್ನು ಕೈಗೆತ್ತಿಕೊಳ್ಳಬಾರದು ಎಂದು ಉಲ್ಲೇಖಿಸಲಾಗಿತ್ತು ಎಂಬುದನ್ನು ಮಂಜುನಾಥ್ ಪ್ರಸಾದ್ ನೆನಪಿಸಿದ್ದಾರೆ. ನಂತರ, ಕರ್ನಾಟಕವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅಂತಹ ನೋಟಿಸ್‌ಗಳನ್ನು ನೀಡಲು ಗೋವಾಗೆ ಯಾವುದೇ ಅಧಿಕಾರವಿಲ್ಲ ಮತ್ತು ಅದನ್ನು ಅಮಾನತುಗೊಳಿಸಬೇಕು ಎಂದು ಪ್ರತಿಪಾದಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



