ಕಳಸಾ ಬಂಡೂರಿ ಯೋಜನೆಯಿಂದ ಎಲ್ಲ ಅಡೆತಡೆಗಳು ನಿವಾರಣೆ: ಸಚಿವ ಈಶ್ವರ್ ಖಂಡ್ರೆ ವಿಶ್ವಾಸ
ಅ.9 ರಂದು ನವದೆಹಲಿಯಲ್ಲಿ ಕೇಂದ್ರ ಅರಣ್ಯ, ಹವಾಮಾನ ಬದಲಾವಣೆ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ, ನಮ್ಮ ಇಲಾಖೆಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದು, ಈ ಯೋಜನೆ ಕುರಿತಂತೆ ಆಶಾದಾಯಕ ಚರ್ಚೆ ಆಗಿದೆ.

ಬೆಂಗಳೂರು: ಕಳಸಾ ಬಂಡೂರಿ ನಾಲಾ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಗುರುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.9 ರಂದು ನವದೆಹಲಿಯಲ್ಲಿ ಕೇಂದ್ರ ಅರಣ್ಯ, ಹವಾಮಾನ ಬದಲಾವಣೆ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ, ನಮ್ಮ ಇಲಾಖೆಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದು, ಈ ಯೋಜನೆ ಕುರಿತಂತೆ ಆಶಾದಾಯಕ ಚರ್ಚೆ ಆಗಿದೆ ಎಂದು ತಿಳಿಸಿರುವುದಾಗಿ ಹೇಳಿದರು.
ಮಹದಾಯಿ ನದಿಯ ಎರಡು ಉಪನದಿಗಳಾದ ಕಳಸಾ ಮತ್ತು ಬಂಡೂರಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಈ ಯೋಜನೆಗೆ ಗೋವಾ ರಾಜ್ಯ ಸರಕಾರ ತಕರಾರು ಮಾಡುತ್ತದೆ. ಆದರೆ, 2018ರ ಆ.14ರಂದು ಮಹದಾಯಿ ನದಿ ನೀರು ವಿವಾದ ನ್ಯಾಯಾಧೀಕರಣ ನೀಡಿರುವ ವರದಿ ಸಹಿತವಾದ ನಿರ್ಣಯದಲ್ಲಿ ಕಳಸಾ-ಬಂಡೂರಿ ಯೋಜನೆಯಡಿ 3.9 ಟಿಎಂಸಿ ನೀರನ್ನು ತಿರುಗಿಸಲು ಅವಕಾಶ ನೀಡಿದೆ. ಆದರೆ, ಇದಕ್ಕೆ ಪರಿಸರ ತೀರುವಳಿ ಅನುಮೋದನೆ ಅಗತ್ಯ ಎಂದು ಹೇಳಿದೆ ಎಂಬ ಅಂಶವನ್ನು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಮಂಡಳಿ ಸಭೆಗೆ ಮನವರಿಕೆ ಮಾಡಿಸಿದ್ದಾರೆ. ಅಲ್ಲದೆ, ಕೇಂದ್ರೀಯ ಜಲ ಆಯೋಗ 2022ರ ಡಿ.29ರ ತನ್ನ ಪತ್ರದಲ್ಲಿ ಕಳಸಾ ಬಂಡೂರಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದೆ ಎಂಬ ವಿಷಯವನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಯೋಜನೆಗಳ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪುಗಳನ್ನೂ ಉಲ್ಲೇಖಿಸಿದ್ದು, ನಿನ್ನೆಯ ಸಭೆಯಲ್ಲಿ ಫಲಪ್ರದವಾದ ಮತ್ತು ಸಕಾರಾತ್ಮಕವಾದ ಚರ್ಚೆ ಆಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಮುಂದಿನ ಸಭೆಯಲ್ಲಿ ಅನುಮೋದನೆ ದೊರಕುವ ನಿರೀಕ್ಷೆ ಇದೆ. ಈ ಸಂಬಂಧ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ವತಿಯಿಂದ ಮಂಡಳಿಗೆ ವಿವರವಾದ ಪತ್ರ ಬರೆಯಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



