ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ 70 ಕೋಟಿ ರೂ. ವಂಚನೆ, ಐವರ ಬಂಧನ
ಶ್ರೀನಿವಾಸ್, ನಾಗರಾಜ್, ರವಿಕುಮಾರ್, ಭರತ್ ಮತ್ತು ಸ್ವಾಮಿ ಬಂಧಿತರು. ಐವರು ಆರೋಪಿಗಳ ಪೈಕಿ ನಾಗರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು: ಕೆಂಗೇರಿ ಸಮೀಪದ ಚಲ್ಲಘಟ್ಟದಲ್ಲಿ ಆರು ಎಕರೆ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿ 70 ಕೋಟಿ ರೂಪಾಯಿ ಪರಿಹಾರ ಪಡೆಯಲು ಯತ್ನಿಸಿದ ಐವರು ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು ಐವರನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಶ್ರೀನಿವಾಸ್, ನಾಗರಾಜ್, ರವಿಕುಮಾರ್, ಭರತ್ ಮತ್ತು ಸ್ವಾಮಿ ಬಂಧಿತರು. ಐವರು ಆರೋಪಿಗಳ ಪೈಕಿ ನಾಗರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ (ಕೇಂದ್ರ) ಎಚ್ಟಿ ಶೇಖರ್ ತಿಳಿಸಿದ್ದಾರೆ.
ಬಿಡಿಎ ವಿಚಕ್ಷಣ ದಳದ ಡಿವೈಎಸ್ಪಿ ಮಲ್ಲೇಶ್ ಅವರು ನೀಡಿದ ದೂರಿನ ಮೇರೆಗೆ ಚಲ್ಲಘಟ್ಟ ನಿವಾಸಿ ಪುಟ್ಟಮ್ಮ, ಗಂಗಮ್ಮ, ನಾಗರಾಜ್, ಲಕ್ಷ್ಮಮ್ಮ, ಶ್ರೀನಿವಾಸ, ಸಂತೋಷ್, ರವಿಕುಮಾರ್, ಭರತ್, ಸುನೀತ್, ಆಶಾ, ಸ್ವಾಮಿ, ಉಮೇಶ್, ಬಿಡಿಎ ಭೂಸ್ವಾಧೀನ ಅಧಿಕಾರಿ, ವಿಶೇಷ ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು, ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶೇಷಾದ್ರಿಪುರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.
ಆರೋಪಿಗಳಾದ ಪುಟ್ಟಮ್ಮ, ಗಂಗಮ್ಮ, ಲಕ್ಷ್ಮಮ್ಮ, ಆಶಾ ಮತ್ತು ಬಂಧಿತ ಐವರು ಇತರ ಖಾಸಗಿ ವ್ಯಕ್ತಿಗಳು ಕಾನೂನುಬದ್ಧ ಮಾಲೀಕರಲ್ಲದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಹಾರ ಪಡೆಯಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಚಲ್ಲಘಟ್ಟ ಸರ್ವೇ ನಂ 13 ಮತ್ತು ಹೊಸ ಸರ್ವೇ ನಂಬರ್ 58ರಲ್ಲಿನ 6 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಎಲ್ಲ ಆರೋಪಿಗಳು ಹಾಗೂ ಜಮೀನಿನ ಮೂಲ ಮಾಲೀಕ ಮೂಡ್ಲಪ್ಪ ಯಾವುದೇ ರೀತಿಯಲ್ಲಿ ಸಂಬಂಧಿಗಳಲ್ಲ. ಆದರೂ ಸಂಬಂಧಿಕರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಿಡಿಎಗೆ ಸಲ್ಲಿಸಿದ್ದಾರೆ. ಅಲ್ಲದೆ, ಈ ಆಸ್ತಿಯ ಮಾಲೀಕರುಗಳು ತಾವುಗಳೇ ಎಂದು ಹೇಳಿಕೊಂಡು 70 ಕೋಟಿ ರೂ. ಮೌಲ್ಯದ ಆಸ್ತಿಗೆ ಪರಿಹಾರ ಕೋರಿದ್ದಾರೆ.
ಆಸ್ತಿಯ ಮೂಲ ಮಾಲೀಕ ಮೂಡ್ಲಪ್ಪ ಅಲಿಯಾಸ್ ಮೂಡ್ಲಯ್ಯ 1976ರಲ್ಲಿ ನಿಧನರಾಗಿದ್ದು, 1992 ಆಸ್ತಿಯ ಪೋಡಿ ಆಗಿದೆ. 2019-2020ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಆರೋಪಿಗಳು ರಿಲೀಸ್ ಡೀಡ್ ಮಾಡಿಕೊಂಡಿದ್ದಾರೆ.
ಈ ಆಸ್ತಿಯು ಈಗಾಗಲೇ ರೆವೆನ್ಯೂ ನಿವೇಶನಗಳಾಗಿ ಮಾರ್ಪಾಡಾಗಿ ಆಶ್ರಯ ಯೋಜನೆಗೆ ಕಾಯ್ದಿರಿಸಿರುವ ಜಮೀನಾಗಿದ್ದರೂ ರವಿಪ್ರಕಾಶ್ ಮತ್ತು ಸುಧಾ ಅವರು ಭೂ ಪರಿಹಾರಕ್ಕೆ ಅರ್ಹವಾಗಿರುವ ಜಮೀನು ಎಂದು ಸುಳ್ಳು ನಕಾಶೆ ಸಿದ್ಧಪಡಿಸಿದ್ದರು.
ಆರೋಪಿಗಳು ಸಲ್ಲಿಸಿದ್ದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ, ನಿಜವಾದ ಆಸ್ತಿ ಮಾಲೀಕರ ಬಗ್ಗೆ ವಿಚಾರ ಮಾಡಿರಲಿಲ್ಲ. ದಕ್ಷಿಣ ಉಪ ವಿಭಾಗಾಧಿಕಾರಿ ಡಾ.ಶಿವಣ್ಣ ಅವರು 2021ರಲ್ಲಿಆರೋಪಿ ಪುಟ್ಟಮ್ಮ ಹೆಸರಿಗೆ ಖಾತೆ ಮಾಡಲು ಬೆಂಗಳೂರು ದಕ್ಷಿಣ ತಾಲೂಕು ವಿಶೇಷ ತಹಶೀಲ್ದಾರ್ಗೆ ಆದೇಶ ಮಾಡಿ ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ಗೋವಿಂದರಾಜು ಎಂಬುವವರು ಬಿಡಿಎಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಪ್ರಾಥಮಿಕ ವಿಚಾರಣೆ ನಡೆಸಿದಾಗ ಹಾಗೂ ಬೆರಳಚ್ಚು ತಜ್ಞರಿಂದ ವರದಿ ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



