ಮೇ 30ರೊಳಗೆ ಎಲ್ಲಾ ನಾಗರೀಕ ಕಾಮಗಾರಿಗಳ ಪೂರ್ಣಗೊಳಿಸಿ: ಅಧಿಕಾರಿಗಳಿಗೆ BBMP ಸೂಚನೆ
ಮಳೆಗಾಲ ಹತ್ತಿರ ಬರುತ್ತಿದ್ದು, ಈ ನಡುವೆ ಪರಿಸ್ಥಿತಿ ಎದುರಿಸಲು ಬಿಬಿಎಂಪಿ ಸಜ್ಜಾಗುತ್ತಿದೆ. ಇದರಂತೆ ಮೇ 20ರೊಳಗೆ ಎಲ್ಲಾ ನಾಗರೀಕ ಕಾಮಗಾರಿಗಳ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಬೆಂಗಳೂರು: ಮಳೆಗಾಲ ಹತ್ತಿರ ಬರುತ್ತಿದ್ದು, ಈ ನಡುವೆ ಪರಿಸ್ಥಿತಿ ಎದುರಿಸಲು ಬಿಬಿಎಂಪಿ ಸಜ್ಜಾಗುತ್ತಿದೆ. ಇದರಂತೆ ಮೇ 20ರೊಳಗೆ ಎಲ್ಲಾ ನಾಗರೀಕ ಕಾಮಗಾರಿಗಳ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮಳೆಗಾಲ ಮುಗಿಯುವವರೆಗೆ ಮೂರು ವಾರಕ್ಕೊಮ್ಮೆ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಎಸ್'ಡಬ್ಲ್ಯೂಡಿ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಪಾಲಿಕೆಯ ಮುಂಗಾರು ಪೂರ್ವ ಸಿದ್ಧತೆ ಕುರಿತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಕೆಲದಿನಗಳಲ್ಲಿ ಮುಂಗಾರು ಪೂರ್ವ ಮಳೆ ಸುರಿಯಲಿದೆ. ಈ ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಪ್ಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಚರಂಡಿ, ರಾಜಕಾಲುವೆಗಳಲ್ಲಿ ಶೇಖರಣೆಯಾಗಿರುವ ತ್ಯಾಜ್ಯ, ಹೂಳನ್ನು ತೆಗೆಯಲಾಗುತ್ತಿದೆ. ಅದಕ್ಕಾಗಿ ವಲಯ ಅಧಿಕಾರಿಗಳಿಗೆ ಮೇ 10ರೊಳಗೆ ಚರಂಡಿ, ರಾಜಕಾಲುವೆ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಚರಂಡಿ, ರಾಜಕಾಲುವೆಗಳಲ್ಲಿ ಹೂಳು, ತ್ಯಾಜ್ಯ ಶೇಖರಣೆಯಾಗುವುದನ್ನು ತಡೆಯಲು ಪ್ರತಿ ತಿಂಗಳ ಮೂರನೇ ವಾರ ಬಿಬಿಎಂಪಿ ವ್ಯಾಪ್ತಿಯ ಎಲ್ಲೆಡೆ ಚರಂಡಿ ಮತ್ತು ರಾಜಕಾಲುವೆ ಸ್ವಚ್ಛತಾ ವಾರವನ್ನಾಗಿ ಆಚರಿಸಲಾಗುವುದು. ವಲಯ ಅಧಿಕಾರಿಗಳು ಅದಕ್ಕೆ ಬೇಕಾಗುವ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ರಸ್ತೆ ಬದಿ ಶೇಖರಣೆಯಾಗಿರುವ ತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯವನ್ನು ಕೂಡಲೇ ತೆರವು ಮಾಡುವಂತೆಯೂ ನಿರ್ದೇಶಿಸಲಾಗಿದೆ. ಜತೆಗೆ ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಹೇಳಲಾಗಿದೆ ಎಂದು ತಿಳಿಸಿದರು.
ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯಲ್ಲಿ ಜನರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲ ಎಂಟು ವಲಯಗಳಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಬಿಬಿಎಂಪಿ ಜತೆಗೆ ಬೆಸ್ಕಾಂ, ಜಲಮಂಡಳಿ, ಅರಣ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳನ್ನು ನೇಮಿಸಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತಿದೆ. ವಿವಿಧ ಇಲಾಖೆಗಳು ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮುಂದಿನ 10 ದಿನಗಳಲ್ಲಿ ಪೂರ್ಣ ಅಥವಾ ಸ್ಥಗಿತಗೊಳಿಸಿ ರಸ್ತೆ ಹಾಗೂ ರಸ್ತೆ ಬದಿ ಹಾಕಲಾಗಿರುವ ಕಾಮಗಾರಿಗಳಿಗೆ ಬಳಸಲಾದ ಸಾಮಗ್ರಿಗಳನ್ನು ತೆರವು ಮಾಡುವಂತೆಯೂ ನಿರ್ದೇಶಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



