ರಾಜ್ಯ

ಪೋಕ್ಸೋ ಪ್ರಕರಣ: ಸಂತ್ರಸ್ತೆ ವರಿಸಲು ಆರೋಪಿಗೆ ಮಧ್ಯಂತರ ಜಾಮೀನು

ಮಗು ಮತ್ತು ಸಂತ್ರಸ್ತೆಯ ಹಿತ ರಕ್ಷಣೆಗೆ ಮುಂದಾಗಿರುವ ಹೈಕೋರ್ಟ್‌ ಈಚೆಗೆ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿಗೆ (ವಿಚಾರಣಾಧೀನ ಕೈದಿ) ಸಂತ್ರಸ್ತೆ ವರಿಸಲು ಮಧ್ಯಂತರ ಜಾಮೀನು ಮಂಜೂರು ಮಾಡುವ ಮೂಲಕ ಅಪರೂಪದ ಆದೇಶ ಹೊರಡಿಸಿದೆ.

ಪೋಕ್ಸೋ ಪ್ರಕರಣ: ಸಂತ್ರಸ್ತೆ ವರಿಸಲು ಆರೋಪಿಗೆ ಮಧ್ಯಂತರ ಜಾಮೀನು
ಸಂಗ್ರಹ ಚಿತ್ರ
Published On :

ಬೆಂಗಳೂರು: ಮಗು ಮತ್ತು ಸಂತ್ರಸ್ತೆಯ ಹಿತ ರಕ್ಷಣೆಗೆ ಮುಂದಾಗಿರುವ ಹೈಕೋರ್ಟ್‌ ಈಚೆಗೆ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿಗೆ (ವಿಚಾರಣಾಧೀನ ಕೈದಿ) ಸಂತ್ರಸ್ತೆ ವರಿಸಲು ಮಧ್ಯಂತರ ಜಾಮೀನು ಮಂಜೂರು ಮಾಡುವ ಮೂಲಕ ಅಪರೂಪದ ಆದೇಶ ಹೊರಡಿಸಿದೆ.

ಆರೋಪಿಯ ಲೈಂಗಿಕ ಸಂಪರ್ಕದಿಂದ ಸಂತ್ರಸ್ತೆಗೆ ಮಗು ಜನಿಸಿದೆ. ಸಂತ್ರಸ್ತೆಗೆ ಸದ್ಯ 18 ವರ್ಷ. ಈ ಹಿಂದೆ ಏನೆಲ್ಲಾ ಘಟನೆಗಳು ನಡೆದಿವೆ ಎನ್ನುವುದು ಮಗುವಿಗೆ ತಿಳಿದಿಲ್ಲ. ಮಗು ಮತ್ತು ಸಂತ್ರಸ್ತೆಯ ಹಿತ ರಕ್ಷಿಸಬೇಕಿದೆ. ಮಗು ಭವಿಷ್ಯದಲ್ಲಿ ಯಾವುದೇ ರೀತಿಯಲ್ಲಿ ಅಪಮಾನಕ್ಕೆ ಗುರಿಯಾಗಬಾರದು” ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೊ ಕಾಯಿದೆ ಅಡಿ ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಕೋರಿ ಆರೋಪಿಯಾದ ಮೈಸೂರಿನ ಆಕಾಶ್‌ (ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಸಂತ್ರಸ್ತೆಯನ್ನು ಮದುವೆಯಾಗಲು 2024ರ ಇಂದಿನಿಂದ (ಜೂ.17) ಅನ್ವಯವಾಗುವಂತೆ ಜುಲೈ 3ರವರೆಗೆ ಆಕಾಶ್‌ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಸಂತ್ರಸ್ತೆಯನ್ನು ಮದುವೆಯಾಗಿ ಆತ ಜುಲೈ 3ರ ಸಂಜೆ ಜೈಲಿಗೆ ಹಿಂದಿರುಗಬೇಕು. ಜುಲೈ 4ರಂದು ವಿವಾಹ ನೋಂದಣಿ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜಾಮೀನು ಮೇಲೆ ಹೊರಗಿರುವ ಸಮಯದಲ್ಲಿ ಆಕಾಶ್‌ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ವಾರಕ್ಕೊಮ್ಮೆ ಹಾಜರಾಗಬೇಕು. ಒಂದು ವೇಳೆ ಮಧ್ಯಂತರ ಜಾಮೀನು ಮಂಜೂರಾತಿಯ ಉದ್ದೇಶ ಉಲ್ಲಂಘಿಸಿದರೆ, ಆ ನಡೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನಿರ್ದೇಶಿಸಿರುವ ಪೀಠವು ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ.

ಆಕಾಶ್‌ ಮತ್ತು ಸಂತ್ರಸ್ತೆಯೇ ಮಗುವಿನ ಜೈವಿಕ ತಂದೆ-ತಾಯಿ ಎಂಬುದು ಮಗುವಿನ ಡಿಎನ್‌ಎ ವರದಿ ಸ್ಪಷ್ಟಪಡಿಸುತ್ತದೆ. ಮಗುವನ್ನು ಸಂತ್ರಸ್ತೆ ತಾಯಿ ಪೋಷಣೆ ಮಾಡಬೇಕಿದೆ. ಸಣ್ಣ ಮಗುವಿಗೆ ಈ ಹಿಂದೆ ಏನೆಲ್ಲಾ ಘಟನೆ ನಡೆದಿದೆ ಎಂಬುದು ಗೊತ್ತಿಲ್ಲ. ಮಗು ಭವಿಷ್ಯದಲ್ಲಿ ಯಾವುದೇ ರೀತಿಯ ಅವಮಾನ ಅನುಭವಿಸಬಾರದು. ತಾಯಿ ಮತ್ತು ಮಗುವಿನ ಹಿತಾಸಕ್ತಿಯನ್ನು ರಕ್ಷಣೆ ಮಾಡಬೇಕಿದೆ. ಸಂಕಷ್ಟದಲ್ಲಿರುವ ತಾಯಿ-ಮಗುವಿನ ಪರಿಸ್ಥಿತಿ ಪರಿಗಣಿಸಿದರೆ, ಸಂತ್ರಸ್ತೆಯನ್ನು ಮದುವೆಯಾಗಲು ರವಿಗೆ ಅನುಮತಿ ನೀಡುವ ಮೂಲಕ ಅವರಿಬ್ಬರ ಕುಟುಂಬಗಳ ನಡುವಿನ ಕಷ್ಟ ಪರಿಹರಿಸುವುದು ಸೂಕ್ತವಾಗಿದೆ. ಅದರಂತೆ ಆಕಾಶ್‌ಗೆ ಮಧ್ಯಂತರ ಜಾಮೀನು ನೀಡಿ ಸಂತ್ರಸ್ತೆಯನ್ನು ಮದುವೆಯಾಗಲು ಅನುಮತಿಸಲಾಗುತ್ತಿದೆ” ಎಂದು ಪೀಠ ಆದೇಶಿಸಿದೆ.

ಆಕಾಶ್‌ (23) ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. 2023ರ ಫೆಬ್ರವರಿ 15ರಂದು ಸಂತ್ರಸ್ತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಆಕಾಶ್‌ ಮೇಲಿದೆ. ಆ ಸಂದರ್ಭದಲ್ಲಿ ಶಾಲೆಯಲ್ಲಿ ಓದುತ್ತಿದ್ದ ಆಕೆಗೆ 16 ವರ್ಷ 9 ತಿಂಗಳು ಆಗಿತ್ತು. ಇದರಿಂದ ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ಪೋಕ್ಸೊ ಕಾಯಿದೆ ಅಡಿ ಆಕಾಶ್‌ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಮೈಸೂರಿನ ಪೋಕ್ಸೊ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

ದೂರು ದಾಖಲಾದ ಮರು ದಿನದಿಂದ ಆಕಾಶ್‌ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಹಿನ್ನೆಲೆಯಲ್ಲಿ ತನ್ನ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಆತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ಆಕಾಶ್‌ ಮತ್ತು ಸಂತ್ರಸ್ತೆಯ ಪರ ವಕೀಲರು ಹಾಜರಾಗಿ, ಅರ್ಜಿದಾರರು ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಮಧ್ಯೆ ಪೋಷಕರು ಬಂದಿದ್ದಾರೆ. ಲೈಂಗಿಕ ಸಂಪರ್ಕದಿಂದ ಅವರಿಗೆ ಮಗು ಜನಿಸಿದ್ದು, ಅದಕ್ಕೆ ಸದ್ಯ ಒಂದು ವರ್ಷ. ರವಿ ಬಂಧನಕ್ಕೆ ಒಳಗಾಗುವ ದಿನಕ್ಕೆ ಸಂತ್ರಸ್ತೆಗೆ 18 ವರ್ಷ ತುಂಬಿರಲಿಲ್ಲ. ಆಕೆಗೆ ಸದ್ಯ 18 ವರ್ಷ ತುಂಬಿದೆ. ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಅದಕ್ಕೆ ಪೋಷಕರೂ ಒಪ್ಪಿದ್ದಾರೆ. ಮದುವೆಯಾಗುವುದರಿಂದ ಸಂತ್ರಸ್ತೆ ಮತ್ತು ಮಗುವಿಗೆ ದಿಕ್ಕಿಲ್ಲದಂತಾಗುವುದು ತಪ್ಪಲಿದೆ. ಈ ಸಂಧಾನ ಪರಿಗಣಿಸಿ ಇಡೀ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಕೋರಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.