ಮಗನ ಶಾಲೆಯ ಅಡ್ಮಿಷನ್ ವಿಚಾರವಾಗಿ ಮಾತನಾಡಲು ಬಂದಿದ್ದರು: ವಿಜಯಲಕ್ಷ್ಮಿ ಭೇಟಿಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ
ಇಂದು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗದೀಪ ಅವರ ಜೊತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ A2 ಆರೋಪಿಯಾಗಿ ಜೈಲು ಪಾಲಾಗಿರುವ ನಟ ದರ್ಶನ್ ಸೇರಿ 17 ಮಂದಿ ಆರೋಪಿಗಳ ವಿರುದ್ಧ ತನಿಖಾಧಿಕಾರಿಗಳು ಚಾರ್ಜ್ ಶೀಟ್ ಸಿದ್ಧಪಡಿಸುತ್ತಿದ್ದು ಆಗಸ್ಟ್ ಎರಡನೇ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಇಂದು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ದಿನಕರ್ ತೂಗದೀಪ ಅವರ ಜೊತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ವಿಚಾರವಾಗಿ ಕಾನೂನು ಚೌಕಟ್ಟಿನೊಳಗೆ ತಮ್ಮ ಪತಿ ದರ್ಶನ್ ಬಿಡುಗಡೆಗೆ ಸಹಾಯ ಮಾಡುವ ಕುರಿತು ಚರ್ಚಿಸಲೆಂದು ವಿಜಯಲಕ್ಷ್ಮಿ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗಿತ್ತು.
ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಡಿ ಕೆ ಶಿವಕುಮಾರ್, ಅವರ ಮಗನ ಶಾಲೆಯ ಅಡ್ಮಿಷನ್ ವಿಚಾರವಾಗಿ ಮಾತನಾಡಲು ಬಂದಿದ್ದರೆ ಹೊರತು ಬೇರೇನೂ ಮಾತನಾಡಿಲ್ಲ ಎಂದಿದ್ದಾರೆ. ನಿನ್ನೆ ನಾನು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಹೋಗಿದ್ದೆ, ಅಲ್ಲಿ ಭೇಟಿ ಮಾಡಲು ಬಂದಿದ್ದರು, ಅಲ್ಲಿ ಭೇಟಿ ಮಾಡೋಕೆ ಆಗಲಿಲ್ಲ, ನಾಳೆ ಮನಗೆ ಬನ್ನಿ ಅಂತ ಹೇಳಿದ್ದೆ. ಹಾಗಾಗಿ ಬಂದಿದ್ದರು. ಅವರ ಮಗ ವಿನೀಶ್ ನಮ್ಮ ಶಾಲೆಯಲ್ಲಿ ಓದುತ್ತಿದ್ದ, ಆ ನಂತರ ಬೇರೆ ಶಾಲೆಗೆ ಸೇರಿಸಿದ್ದರು. ಈಗ ಮತ್ತೆ ನಮ್ಮ ಶಾಲೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಾನು ಪ್ರಾಂಶುಪಾಲರಿಗೆ ಹೇಳುತ್ತೇನೆ ಎಂದು ಭರವಸೆ ಕೊಟ್ಟಿದ್ದೇನೆ, ದರ್ಶನ್ ಕೇಸು ವಿಚಾರವಾಗಿ ಮಾತನಾಡಲು ಬರುತ್ತಾರೆ ಎಂದುಕೊಂಡಿದ್ದೆ, ಆದರೆ ಅವರು ಮಾತನಾಡಿಲ್ಲ, ನಾನು ಕೂಡ ಆ ವಿಷಯ ಪ್ರಸ್ತಾಪಿಸಲಿಲ್ಲ ಎಂದರು.
ಮಧ್ಯೆ ಪ್ರವೇಶಿಸುವುದಿಲ್ಲ: ಹೆಣ್ಣು ಮಗಳು ಏನಾದರೂ ಅನ್ಯಾಯ ಆಗಿದ್ರೆ ಅವರಿಗೆ ಸಹಾಯ ಮಾಡಿರುತ್ತಿದ್ದೆ. ಆದರೆ ಈಗ ಕಾನೂನು ಕ್ರಮ ನಡೆಯುತ್ತಿದೆ. ಇಂಥಹಾ ಸಮಯದಲ್ಲಿ ಮಧ್ಯೆ ಪ್ರವೇಶ ಮಾಡಲು ಆಗುವುದಿಲ್ಲ. ಕಾನೂನು ಚೌಕಟ್ಟು ಅಡಿ ಏನಾದರೂ ಮಾಡೋಣ ಅಂತ ನಿನ್ನೆ ಹೇಳಿದ್ದೆ, ಹುಡುಗರು ನಿನ್ನೆ ಒತ್ತಾಯ ಮಾಡಿದ್ದರು. ನಾನು ಈ ವಿಚಾರದಲ್ಲಿ ಮಧ್ಯ ಬರೋದಿಲ್ಲ, ಸ್ಕೂಲ್ ವಿಚಾರದಲ್ಲಿ ಅಷ್ಟೇ ನಾನು ಮಾತನಾಡುತ್ತೇವೆ, ಸಹಾಯ ಮಾಡುತ್ತೇನೆ ಎಂದಿದ್ದೇನೆ ಎಂದರು.
ಇದೇ ಸಮಯಕ್ಕೆ ಡಿಕೆ ಶಿವಕುಮಾರ್ ಮನೆಗೆ ನಿರ್ದೇಶಕ ಪ್ರೇಮ್ ಕೂಡ ಬಂದಿದ್ದರು. ಅವರಲ್ಲಿ ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಿದಾಗ, ನಾನು ಆಗಾಗ ಡಿಸಿಎಂ ಅವರನ್ನು ಭೇಟಿ ಮಾಡೊಕೆ ಬರ್ತಾ ಇರ್ತೀನಿ. ದರ್ಶನ್ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ಭೇಟಿ ಮಾಡೋಕೆ ಬಂದಿದ್ದಾರೆ. ದರ್ಶನ್ ಮಗ ವಿನೀಶ್ ಸ್ಕೂಲ್ ವಿಚಾರ ಮಾತಾಡೋಕೆ ಬಂದಿದ್ದರು. ನನ್ನ ಮಗ ಅವರ ಮಗ ಇಬ್ಬರು ಒಂದೇ ಕಡೆ ಓದುತ್ತಾ ಇದ್ದರು. ಆದರೆ ಅವರು ಬೇರೆ ಶಾಲೆಗೆ ಮಗನನ್ನು ಶಿಫ್ಟ್ ಮಾಡಿಸಿದ್ದರು. ಈಗ ಮತ್ತೆ ಅದೇ ಶಾಲೆಗೆ ಸೇರಿಸಬೇಕೆಂದು ಕೇಳಲು ಬಂದಿದ್ದಾರೆ ಎಂದರು.
ಆದರೆ ದರ್ಶನ್ ಕೇಸಿನಲ್ಲಿ ಪೊಲೀಸರು ಚಾರ್ಚ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ವಿಜಯಲಕ್ಷ್ಮಿ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



