ಅಂಕಣಗಳು

ವಿಧಾನಸಭಾ ಚುನಾವಣೆಗೆ ಹಿಮ್ಮೇಳ ಆರಂಭ (ನೇರ ನೋಟ)

ರಾಜಕೀಯ ಪಕ್ಷಗಳ ಅಜೆಂಡಾ ಸಿದ್ಧತೆ: ವಿಧಾನಸಭಾ ಚುನಾವಣೆಗೆ ಮುನ್ನವೇ ತೀವ್ರ ಚಟುವಟಿಕೆ

ವಿಧಾನಸಭಾ ಚುನಾವಣೆಗೆ ಹಿಮ್ಮೇಳ ಆರಂಭ (ನೇರ ನೋಟ)
ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಬಿ.ವೈ.ವಿಜಯೇಂದ್ರ
Published On :

ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲು ಇನ್ನೂ 18 ತಿಂಗಳು ಇರುವಾಗಲೇ ರಾಜಕೀಯ ಪಕ್ಷಗಳು ತಾಲೀಮು ಆರಂಭಿಸಿವೆ. ಡಿ.ಕೆ. ಶಿವಕುಮಾರ್ ಯಾವಾಗ ಮುಖ್ಯಮಂತ್ರಿಯಾದರೋ ಅಂದೇ ಅವರು ನನ್ನ ಗುರಿ ಏನಿದ್ದರೂ 2028ರ ವಿಧಾನಸಭಾ ಚುನಾವಣೆ ಎಂದು ಭವಿಷ್ಯದ ನೋಟವನ್ನು ಹರಿಸಿದರು. ಅದಕ್ಕಾಗಿ ಲೆಕ್ಕಾಚಾರದಿಂದ ಸಿದ್ದತೆಗಳನ್ನೂ ಆರಂಭಿಸಿದರು. ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಈಗ ಚುನಾವಣೆ ಸಿದ್ದತೆಯ ಮಾತುಗಳನ್ನು ಆಡುತ್ತಿದೆ. ಈ ನಡುವೆಯೇ ಪಂಚಾಯಿತಿ ಫೈಟ್‌ಗೆ ದಾರಿ ತೆರೆದುಕೊಂಡಿದೆ.

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ವರ್ಗವಾರು ಮೀಸಲು ನಿಗದಿಪಡಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಇದು ಪಂಚಾಯಿತಿ ಸಮರಕ್ಕೆ ಮುನ್ನುಡಿ ಬರೆದಿದೆ. ಮುಂದಿನ ವರ್ಷ ಜನವರಿಯಲ್ಲಿ ಪಂಚಾಯಿತಿ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಅಜೆಂಡಾ ಸಿದ್ದಪಡಿಸುತ್ತಿರುವ ಹೊತ್ತಲ್ಲೇ ಪಂಚಾಯಿತಿ ಚುನಾವಣೆ ಸೆಮಿಫೈನಲ್‌ ರೀತಿ ಎದುರಾಗಬಹುದು. ಆದರೆ, ರಾಜ್ಯ ಸರಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ಪಂಚಾಯಿತಿ ಚುನಾವಣೆ ನಡೆಯಬಹುದು. ಇಲ್ಲದಿದ್ದರೆ ಕುಂಟು ನೆಪಗಳನ್ನು ಹೇಳಿ ಮುಂದೂಡಬಹುದು. ಪಂಚಾಯಿತಿ ಹಾಗೂ ಪಾಲಿಕೆಗಳ ಚುನಾಯಿತ ಸದಸ್ಯರ ಅಧಿಕಾರ ಅವಧಿ ಮುಗಿದು ವರ್ಷಗಳೇ ಉರುಳಿವೆ.

ಪಂಚಾಯಿತಿ ಚುನಾವಣೆ ನಡೆಯಲಿ, ಬಿಡಲಿ. ಆದರೆ, ರಾಜ್ಯ ರಾಜಕಾರಣ ಮುಂಬರುವ ವಿಧಾನಸಭಾ ಚುನಾವಣೆಯತ್ತ ಈಗಲೇ ತಿರುವು ಪಡೆಯುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಶಿವಕುಮಾರ್ ನಡುವಿನ ವಾಗ್ಸಮರ ಮುಂದಿನ ಚುನಾವಣೆಯಲ್ಲಿ ಇವರಿಬ್ಬರ ಮಧ್ಯೆ ನಡೆಯಬಹುದಾದ ಮತ್ತೊಂದು ಸುತ್ತಿನ ಜಿದ್ದಾಜಿದ್ದಿಯ ಲಕ್ಷಣಗಳನ್ನು ಈಗಲೇ ತೋರುತ್ತಿದೆ. ಶಿವಕುಮಾರ್ ಅವರ ನಡೆ, ನುಡಿ, ಕುಮಾರಸ್ವಾಮಿ ಅವರ ಮಾತುಗಳು, ಆರೋಪಗಳು, ಬಿಜೆಪಿ ನಾಯಕರ ಪಾದಯಾತ್ರೆ ಇವೆಲ್ಲವೂ ವಿಧಾನಸಭಾ ಚುನಾವಣೆಯತ್ತ ರಾಜ್ಯ ರಾಜಕಾರಣ ತಿರುವು ತೆಗೆದುಕೊಳ್ಳುತ್ತಿರುವ ಸೂಚನೆ ನೀಡಿದೆ. ಚುನಾವಣೆಯ ಹಿಮ್ಮೇಳ ಶುರುವಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಳೆದ 40 ವರ್ಷಗಳಲ್ಲಿ ಒಮ್ಮೆ ಗೆದ್ದವರು ನಂತರದ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆ ಜಯ ಸಾಧಿಸಿಲ್ಲ. ಇದನ್ನು ಸುಳ್ಳು ಮಾಡಬೇಕೆಂದು ಆಡಳಿತಾರೂಢ ಕಾಂಗ್ರೆಸ್‌ ಬಲವಾದ ಪ್ರಯತ್ನ ನಡೆಸಿದೆ. ಒಂದು ಕಡೆ ಸರಕಾರದ ಮುಖ್ಯಸ್ಥರಾಗಿ ಸಿಎಂ ಶಿವಕುಮಾರ್ ಅವರಿದ್ದಾರೆ. ಮತ್ತೊಂದೆಡೆ ಪ್ರದೇಶ ಕಾಂಗ್ರೆಸ್ ಸಮಿತಿಗೆ ಬಿ.ಕೆ.ಹರಿಪ್ರಸಾದ್ ಅವರ ಸಾರಥ್ಯವಿದೆ.

ಶಿವಕುಮಾರ್ ಆಡಳಿತದಲ್ಲಿ ನುರಿತವರು. ಹರಿಪ್ರಸಾದ್‌ ಪಕ್ಷದ ಸಂಘಟನಾ ಚತುರರು. ಆದರೆ, ಇವರಿಬ್ಬರ ಮಧ್ಯೆ ಸಮನ್ವಯ ತಾಳ ತಪ್ಪುತ್ತಿರುವಂತೆ ತೋರುತ್ತಿದೆ. ಇಬ್ಬರೂ ಮೂಲತಃ ಕಾಂಗ್ರೆಸ್ಸಿಗರಾದರೂ ವೈಚಾರಿಕವಾಗಿ ಭಿನ್ನರು. ಹರಿಪ್ರಸಾದ್‌ ಹಿಂದುತ್ವದ ಕಡು ವಿರೋಧಿಯಾದರೆ ಶಿವಕುಮಾರ್ ಅವರದು ಮೃದು ಹಿಂದುತ್ವ. ಹರಿಪ್ರಸಾದ್‌ ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಾದರೆ ಶಿವಕುಮಾರ್ ಮೈಸೂರಿನ ಬಹಿರಂಗ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಭಾರತದ ನಾಯಕ ಎಂದು ಅಭಿಮಾನದಿಂದ ಕರೆದವರು. ಹರಿಪ್ರಸಾದ್‌ ಸಂಘಪರಿವಾರವನ್ನು ವಾಚಾಮಗೋಚರ ನಿಂದಿಸಿದರೆ ಶಿವಕುಮಾರ್‌ ವಿಧಾನಸಭೆಯಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ನಮಸ್ತೆ ಸದಾ ವತ್ಸಲೆ ಮಾತೃಭೂಮೇ’ ಗೀತೆ ಹಾಡಿದವರು. ಆದರೆ, ಹೈಕಮಾಂಡ್‌ಗೆ ಇಬ್ಬರೂ ಆಪ್ತರು.

ಒಂದೆಡೆ ಬಿಜೆಪಿ-ಜೆಡಿಎಸ್‌ ನಿಧಾನವಾಗಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೆ ಕಾಂಗ್ರೆಸ್‌ನಲ್ಲಿ ಶಿವಕುಮಾರ್ - ಹರಿಪ್ರಸಾದ್ ಅವರ ನಡುವೆ ಸಮನ್ವಯದ ಕೊರತೆ ಗೋಚರಿಸುತ್ತಿದೆ. ಹರಿಪ್ರಸಾದ್ ಅಧ್ಯಕ್ಷರಾದ ಮರುದಿನವೇ ‘ಅಧಿಕಾರ ಬೇಕಿರುವವರು ಮುಖ್ಯಮಂತ್ರಿಗಳ ಬಳಿ ಹೋಗಿ, ಪಕ್ಷದ ಸಂಘಟನೆ ಬೇಕಿರುವವರು ನನ್ನ ಜೊತೆ ಬನ್ನಿ’ ಅಂತ ಹೇಳಿ ತಮ್ಮತನವನ್ನು ಪ್ರದರ್ಶಿಸಿದ್ದರು. ಶಿವಕುಮಾರ್ ಸರಕಾರಕ್ಕೆ ನೂರು ದಿನಗಳ ಸಂದರ್ಭ. ಆ ಕಾರ್ಯಕ್ರಮಕ್ಕೆ ಶಿವಕುಮಾರ್ ತಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನೇ ಆಹ್ವಾನಿಸಲಿಲ್ಲ. ಆದರೆ, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡರು. ಹರಿಪ್ರಸಾದ್‌ ಸೊಲ್ಲೆತ್ತಲಿಲ್ಲ. ಸಮಯಕ್ಕೆ ಕಾದರು. ಭಾರತ್‌ ಜೋಡೋ ಯಾತ್ರೆ 2.0 ವೇಳೆ ತಮ್ಮ ದಾಳ ಉರುಳಿಸಿದರು. ಶಿಕಾರಿಪುರದಿಂದ ಆರಂಭವಾದ ಭಾರತ್‌ ಜೋಡೋ 2.0 ಕಾರ್ಯಕ್ರಮದಲ್ಲಿ ಶಿವಕುಮಾರ್‌ ಕಂಡು ಬರಲಿಲ್ಲ.

ಇನ್ನು ಪಕ್ಷ ಹಾಗೂ ಸರಕಾರದ ನಡುವೆ ಸಮನ್ವಯ ಸುಧಾರಿಸಲು ರಾಜಕೀಯ ವ್ಯವಹಾರಗಳ ಸಮಿತಿ ರಚಿಸಬೇಕೆಂಬ ಹರಿಪ್ರಸಾದ್‌ ಅವರ ಪ್ರಸ್ತಾವವನ್ನು ಶಿವಕುಮಾರ್‌ ವಿರೋಧಿಸಿರುವ ವರದಿಗಳಿವೆ. ಸರಕಾರ ಮತ್ತು ಪಕ್ಷದ ಪ್ರಮುಖ ನಿರ್ಧಾರಗಳನ್ನು ಜಾರಿಗೊಳಿಸುವ ಮುನ್ನ ಅವುಗಳ ಬಗ್ಗೆ ಈ ಸಮಿತಿಯಲ್ಲಿ ಚರ್ಚೆಯಾಗಬೇಕೆಂಬ ಉದ್ದೇಶವಿತ್ತು. ಒಂದು ವೇಳೆ ಈ ಸಮಿತಿ ರಚನೆಯಾದರೆ ಶಿವಕುಮಾರ್ ವೇಗಕ್ಕೆ ಕಡಿವಾಣ ಹಾಕಿದಂತೆ.

ಶಿವಕುಮಾರ್ ಅವರದು 2028ರ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಬೇಕೆಂಬ ಸಂಕಲ್ಪ. ಆ ನಿಟ್ಟಿನಲ್ಲೇ ಅವರ ಹೆಜ್ಜೆ. ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಇದರ ಯಶಸ್ಸು ತಮಗೆ ಸಲ್ಲಬೇಕು. ತಾವು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಹಂಬಲ. ಇದಕ್ಕೆ ಪ್ರತಿಯಾಗಿ ಹರಿಪ್ರಸಾದ್ ಅವರೂ ತಮ್ಮ ಪಟ್ಟುಗಳನ್ನು ಬಿಗಿ ಮಾಡುತ್ತಿದ್ದಾರೆ. ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸಿ ಅಧಿಕಾರಕ್ಕೇರುವ ಕಸರತ್ತು ಅವರದು. ಯಶಸ್ಸು ವ್ಯಕ್ತಿಗಿಂತ ಪಕ್ಷಕ್ಕೆ ಸಲ್ಲಬೇಕು ಎಂಬ ಮನಸ್ಥಿತಿ ಅವರದು.

ಭಾರತ್‌ ಜೋಡೋ 2.0 ಅನ್ನು 84 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ಚಾಲನೆ ನೀಡಲು ಕಾಂಗ್ರೆಸ್‌ ಆರಿಸಿಕೊಂಡ ಕ್ಷೇತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿನಿಧಿಸುವ ಶಿಕಾರಿಪುರವನ್ನು. ಅಂದರೆ, ಕಾಂಗ್ರೆಸ್‌ ಚುನಾವಣಾ ಸಮರದಲ್ಲಿ ಆಕ್ರಮಣಕಾರಿ ಧೋರಣೆ ತಳೆದಿರುವುದು ಸ್ಪಷ್ಟ. ಈ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ ಸೋತಿತ್ತು. ಇಲ್ಲಿ ಪಕ್ಷದ ಸಂಘಟನೆ ಉದ್ದೇಶದಿಂದ ಕಾಂಗ್ರೆಸ್‌ ಭಾರತ್‌ ಜೋಡೋ 2.0 ನಡೆಸಿದೆ. ಎಸ್‌ಐಆರ್‌ ವಿಚಾರದಲ್ಲೂ ಪ್ರದೇಶ ಕಾಂಗ್ರೆಸ್‌ ಸಮಿತಿ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಫಾರಂ 7 ದುರ್ಬಳಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳ ಮಧ್ಯೆ ಸಂಘರ್ಘ ನಡೆದಿದೆ.

ಇನ್ನು ಮುಂದಿನ ಎಲ್ಲ ಚುನಾವಣೆಗಳನ್ನೂ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯಾಗಿ ಎದುರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಜೆಡಿಎಸ್‌ನಲ್ಲೂ ಹುಮ್ಮಸ್ಸು ಮೂಡಿಸಿದೆ. ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕೆಂಬ ಬಗ್ಗೆ ಚರ್ಚಿಸುವುದು ಸೂಕ್ತ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿರುವುದನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆಯ ವಿಚಾರದಲ್ಲಿ ಉಭಯತ್ರರ ನಡುವೆ ಹಗ್ಗಜಗ್ಗಾಟ ನಡೆಯುವುದು ಖಚಿತ. ಅಂತಹ ಕ್ಷೇತ್ರಗಳನ್ನು ಈಗಲೇ ಗುರುತಿಸಿ ಬಿಕ್ಕಟ್ಟು ಬಗೆಹರಿಸಿಕೊಂಡು ಚುನಾವಣೆಗೆ ತಯಾರಿ ನಡೆಸುವುದು ಬಿಜೆಪಿ-ಜೆಡಿಎಸ್ ಇರಾದೆ. ಇದು ಅಂತಿಮವಾಗಿ ದೆಹಲಿ ಮಟ್ಟದಲ್ಲೇ ತೀರ್ಮಾನವಾಗಬೇಕಾದ ಸಂಗತಿ.

ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿಯೇ ಜೆಡಿಎಸ್‌ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಬೇಕಿದೆ. ಆದರೆ, ಇದೇ ಪ್ರಾಂತ್ಯದ, ಒಕ್ಕಲಿಗ ಸಮಾಜ ಶಿವಕುಮಾರ್‌ ಯಾವಾಗ ಮುಖ್ಯಮಂತ್ರಿ ಗಾದಿ ಏರಿದರೋ ಜೆಡಿಎಸ್‌ನಲ್ಲಿ ತಳಮಳ ಆರಂಭವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಈಗ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರತಿದಿನ ಶಿವಕುಮಾರ್‌ ವಿರುದ್ಧ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಒಕ್ಕಲಿಗ ಸಮಾಜದ ಶಿವಕುಮಾರ್ ತಮ್ಮ ಸಮಾಜದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದರೆ ಜೆಡಿಎಸ್‌ಗೆ ಆಪತ್ತು. ಇದು ಕುಮಾರಸ್ವಾಮಿ ನಾಯಕತ್ವಕ್ಕೂ ಸವಾಲು.

ಕುಮಾರಸ್ವಾಮಿ ಹಾಗೂ ಶಿವಕುಮಾರ್ ನಡುವಿನ ಸಮರ ವೈಯಕ್ತಿಕ ಮಟ್ಟಕ್ಕೆ ಇಳಿದಿರುವುದು ಹೊಸದೇನಲ್ಲ. ಈ ಬಾರಿ ಇಬ್ಬರ ನಡುವೆ ಸ್ಟಿಂಗ್‌ ಆಪರೇಷನ್‌ ಸುತ್ತಲೇ ವಾಗ್ಬಾಣಗಳು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಸ್ಟಿಂಗ್‌ ಆಪರೇಷನ್‌ ನಡೆಯಿತು. ಹೀಗಾಗಿ, ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು ಎಂಬುದು ಕುಮಾರಸ್ವಾಮಿ ಆರೋಪ. ಇದಕ್ಕೆ ಪ್ರತಿಯಾಗಿ, ತಾವು ಮುಖ್ಯಮಂತ್ರಿಯಾದ ಬಳಿಕ ತಮ್ಮ ಹಾಗೂ ಇತರ ಸಚಿವರ ವಿರುದ್ಧ ಸ್ಟಿಂಗ್‌ ಆಪರೇಷನ್‌ ಪ್ರಯತ್ನ ನಡೆದಿದೆ. ಇದರ ಪಿತಾಮಹ ಯಾರೆಂದು ಗೊತ್ತಿದೆ. ಕೆಲವು ನಾಯಕರು ಈ ಕಾರ್ಯಾಚರಣೆಗೆ ಖಾಸಗಿ ಏಜೆಂಟರನ್ನು ನೇಮಿಸಿದ್ದಾರೆ ಎಂಬ ಶಿವಕುಮಾರ್ ಹೇಳಿಕೆ ಗಂಭೀರವಾದದ್ದು. ಶಿವಕುಮಾರ್ ತಮ್ಮ ಸಂಪುಟದ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೂ ಸ್ಟಿಂಗ್‌ ಆಪರೇಷನ್‌ ಬಗ್ಗೆ ಜಾಗರೂಕರಾಗಿರಿ ಎಂದು ಎಚ್ಚರಿಸಿರುವುದು ಗಮನಾರ್ಹ. ಯಾವ ಸ್ಟಿಂಗ್ ಆಪರೇಷನ್‌ ನಡೆದರೂ ಚಿಂತೆ ಇಲ್ಲ. ನಾವು ನೆಟ್ಟಗಿದ್ದೇವೆ ಎಂದು ಹೇಳಿದ ವರದಿಗಳಿಲ್ಲ. ರಾಜ್ಯ ರಾಜಕಾರಣ ಅಧೋಗತಿಗೆ ತಲುಪಿರುವುದಕ್ಕೆ ಇವೆಲ್ಲವೂ ನಿದರ್ಶನ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.