ರಾಜ್ಯ

'ಉಡ್ತಾ ಕರ್ನಾಟಕ' ಆಗಲು ಬಿಡೆವು; ದಂಧೆ ನಡೆಸುತ್ತಿದ್ದ 150 ವಿದೇಶಿಗರನ್ನು ವಾಪಸ್‌ ಕಳಿಸಿದ್ದೇವೆ: ಸಚಿವ ಪರಮೇಶ್ವರ್‌

ರಾಜ್ಯದಲ್ಲಿ ಸುಮಾರು 150 ಕೋಟಿ ರೂ. ಮೌಲ್ಯದ 10 ಟನ್‌ ಡ್ರಗ್ಸ್‌ಗೆ ಹಾಗೂ 250 ಕೆಜಿಯಷ್ಟು ಸಿಂಥೆಟಿಕ್‌ ಡ್ರಗ್ಸ್‌ ಅನ್ನು ಸುಟ್ಟು ಹಾಕಲಾಗಿದೆ. ವಿದೇಶದಿಂದ ವಿದ್ಯಾರ್ಥಿ ವೀಸಾದ ಮೇಲೆ ಬಂದವರು ದಂಧೆಗೆ ಇಳಿಯುತ್ತಿದ್ದು, ಅಂಥ 150 ಮಂದಿಯನ್ನು ಬಂಧಿಸಿ ವಾಪಸ್‌ ಕಳುಹಿಸಲಾಗಿದೆ.

'ಉಡ್ತಾ ಕರ್ನಾಟಕ' ಆಗಲು ಬಿಡೆವು; ದಂಧೆ ನಡೆಸುತ್ತಿದ್ದ 150 ವಿದೇಶಿಗರನ್ನು ವಾಪಸ್‌ ಕಳಿಸಿದ್ದೇವೆ: ಸಚಿವ ಪರಮೇಶ್ವರ್‌
ಡಾ ಜಿ ಪರಮೇಶ್ವರ್
Published On :

ಬೆಂಗಳೂರು: ಡ್ರಗ್ಸ್‌ ಹಾವಳಿ ವಿರುದ್ಧ ನಮ್ಮ ಸರ್ಕಾರ ಸಮರ ಸಾರಿದ್ದು, ಯಾವುದೇ ಕಾರಣಕ್ಕೂ ರಾಜ್ಯವನ್ನು “ಉಡ್ತಾ ಪಂಜಾಬ್‌’ನಂತೆ “ಉಡ್ತಾ ಕರ್ನಾಟಕ’ ಆಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಪುನರುಚ್ಚರಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಡಾ.ಧನಂಜಯ ಸರ್ಜಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸುಮಾರು 150 ಕೋಟಿ ರೂ. ಮೌಲ್ಯದ 10 ಟನ್‌ ಡ್ರಗ್ಸ್‌ಗೆ ಹಾಗೂ 250 ಕೆಜಿಯಷ್ಟು ಸಿಂಥೆಟಿಕ್‌ ಡ್ರಗ್ಸ್‌ ಅನ್ನು ಸುಟ್ಟು ಹಾಕಲಾಗಿದೆ. ವಿದೇಶದಿಂದ ವಿದ್ಯಾರ್ಥಿ ವೀಸಾದ ಮೇಲೆ ಬಂದವರು ದಂಧೆಗೆ ಇಳಿಯುತ್ತಿದ್ದು, ಅಂಥ 150 ಮಂದಿಯನ್ನು ಬಂಧಿಸಿ ವಾಪಸ್‌ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುವ ಪೆಡ್ಲರ್‌ಗಳ ಮೇಲೆ‌ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ಕುರಿತು ವಿದ್ಯಾರ್ಥಿಗಳಿಗಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕಳೆದ ವರ್ಷ 2023ರಲ್ಲಿ 2409 ಶಾಲಾ-ಕಾಲೇಜುಗಳಲ್ಲಿ 3.95 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿತ್ತು. ಪ್ರಸಕ್ತ ವರ್ಷ ಜೂನ್‌ನಲ್ಲಿ 3,600 ಶಾಲಾ-ಕಾಲೇಜುಗಳಲ್ಲಿ 5.50 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದೇವೆ‌. ಯಾವುದೇ ಕಾರಣಕ್ಕು ವಿದ್ಯಾರ್ಥಿಗಳ ಕೈಗೆ ಡ್ರಗ್ಸ್ ಸಿಗಬಾರದು ಎಂಬುದು ನಮ್ಮ ಉದ್ದೇಶ. ಅವರಿಗೆ ಜಾಗೃತಿ ಮೂಡಿಸಿದರೆ ಡ್ರಗ್ಸ್ ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.

2022ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ 6406 ಪ್ರಕರಣ ದಾಖಲಿಸಿದ್ದು, 6164 ಆರೋಪಿಗಳನ್ನು ಬಂಧಿಸಲಾಗಿದೆ. 3881 ಪ್ರಕರಣಗಳು ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ಇದರಲ್ಲಿ 2365 ಜನರಿಗೆ ಶಿಕ್ಷೆಯಾಗಿದೆ. 2023ರಲ್ಲಿ 6764 ಪ್ರಕರಣಗಳಲ್ಲಿ 2280 ಬಂಧಿಸಲಾಗಿದೆ. 4187 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, 2280 ಆರೋಪಿತರಿಗೆ ಶಿಕ್ಷೆಯಾಗಿದೆ. ಪ್ರಸಕ್ತ ವರ್ಷ ಜುಲೈ 10ರವರೆಗೆ 1791 ಪ್ರಕರಣಗಳಲ್ಲಿ 1179 ಆರೋಪಿಗಳನ್ನು ಬಂಧಿಸಲಾಗಿದೆ. 884 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು 189 ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಸುಮಾರು 150 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ್ದೇವೆ. 10 ಟನ್ ಗಾಂಜಾ, 250 ಕೆಜಿಯಷ್ಟು ಸಿಂಥೆಟಿಕ್ ಡ್ರಗ್ಸ್ ಸುಟ್ಟು ಹಾಕಲಾಗಿದೆ. ಯುವಕರು ಮಾದಕ ವ್ಯಸನದಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆ. ಹೀಗಾಗಿ ಡ್ರಗ್ಸ್ ವಿರುದ್ಧವಾಗಿ ನಿರಂತರವಾದ ಹೋರಾಟ ನಡೆಸಲಾಗುತ್ತಿದೆ ಎಂದರು.

ವಿದೇಶದಿಂದ ವಿದ್ಯಾರ್ಥಿ ವೀಸಾದ ಮೇಲೆ ಬಂದು ದಂಧೆಗೆ ಇಳಿಯುತ್ತಿದ್ದಾರೆ. 150 ವಿದೇಶಿಗರನ್ನು ಗುರುತಿಸಿ, ಅಂಥವರನ್ನು ಬಂಧಿಸಿ ವಾಪಸ್ ಕಳಿಹಿಸಲಾಗಿದೆ. ವಿದೇಶಿ ಯುವಕರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಸಿಐಡಿ ಮಾದಕದ್ರವ್ಯ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಎಡಿಜಿಪಿ ಮತ್ತು ಐಜಿಪಿ ಹುದ್ದೆಯನ್ನು ಸೃಜಿಸಲಾಗಿದೆ. ರಾಜ್ಯದಲ್ಲಿ 43 ಸೆನ್ (ಸೈಬರ್, ನಾರ್ಕೋಟಿಕ್ ಮತ್ತು ಎಕನಾಮಿಕ್ ಅಫೆನ್ಸ್) ಸ್ಥಾಪಿಸಲಾಗಿದ್ದು, ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿದೇಶದಿಂದ ಬರುವ ಪಾರ್ಸೆಲ್‌ಗಳ ಮೇಲೆ ನಿಗಾವಹಿಸಲಾಗಿದೆ. ಡ್ರಗ್ಸ್ ಕುರಿತು ಸಾರ್ಜಜನಿಕತು ಮಾಹಿತಿ ನೀಡಲು ‘ಮ್ಯಾಪ್‌ಡ್ರಗ್ಸ್’ ಮೊಬೈಲ್ ಅಪ್ಲಿಕೇಶನ್ ತರಲಾಗಿದೆ. ಇದರ‌ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.