ರಾಜ್ಯ

ಕಾರವಾರ: 'ಹಾಕ್ಸ್ ಬಿಲ್' ಆಮೆ ದೇಹದಲ್ಲಿ ಪ್ಲಾಸ್ಟಿಕ್ ಪತ್ತೆ, ತಜ್ಞರ ಆತಂಕ

ದೇಶದ ಪಶ್ಚಿಮ ಕಡಲತೀರದಲ್ಲಿ ಅಪರೂಪವಾಗಿರುವ 'ಹಾಕ್ಸ್ ಬಿಲ್' ಜಾತಿಯ ಆಮೆಯೊಂದರ ಮೃತದೇಹವು ಕಾರವಾರದಲ್ಲಿ ಪತ್ತೆಯಾಗಿದ್ದು, ಮೃತದೇಹದಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವುದಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾರವಾರ: 'ಹಾಕ್ಸ್ ಬಿಲ್' ಆಮೆ ದೇಹದಲ್ಲಿ ಪ್ಲಾಸ್ಟಿಕ್ ಪತ್ತೆ, ತಜ್ಞರ ಆತಂಕ
ಹಾಕ್ಸ್ ಬಿಲ್ ಆಮೆ
Published On :

ಕಾರವಾರ: ದೇಶದ ಪಶ್ಚಿಮ ಕಡಲತೀರದಲ್ಲಿ ಅಪರೂಪವಾಗಿರುವ 'ಹಾಕ್ಸ್ ಬಿಲ್' ಜಾತಿಯ ಆಮೆಯೊಂದರ ಮೃತದೇಹವು ಕಾರವಾರದಲ್ಲಿ ಪತ್ತೆಯಾಗಿದ್ದು, ಮೃತದೇಹದಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವುದಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾರವಾರ ಕರಾವಳಿ ಮತ್ತು ಸಾಗರ ಪರಿಸರ ಸಂರಕ್ಷಣಾ ಘಟಕದ (ಸಿಎಂಇಸಿಸಿ) ಗಸ್ತುಪಡೆ ಮಾಜಾಳಿಯಲ್ಲಿ ಆಮೆಯನ್ನು ಪತ್ತೆ ಮಾಡಿದೆ.

ಆಮೆ ಮೀನುಗಾರಿಕೆ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರಬಹುದು. ಶವಪರೀಕ್ಷೆ ನಡೆಸಿದಾಗ ಮೃತದೇಹದಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ ಎಂದು ಸಿಎಂಇಸಿಸಿಯ ರೇಂಜ್ ಫಾರೆಸ್ಟ್ ಆಫೀಸರ್ ಪ್ರಮೋದ್ ನಾಯಕ್ ಹೇಳಿದ್ದಾರೆ.

ಪ್ಲಾಸ್ಟಿಕ್ ಸಮುದ್ರ ಜೀವಿಗಳಲ್ಲಿ ಪತ್ತೆಯಾಗಿದೆ ಎಂದರೆ, ಸಮುದ್ರದ ಆಳವನ್ನೂ ತಲುಪಿದೆ ಎಂದರ್ಥ. ಕೂಡಲೇ ಪ್ಲಾಸ್ಟಿಕ್‌ ಹಾವಳಿಗೆ ಕಡಿವಾಣ ಹಾಕಬೇಕು. “ಆಮೆಗಳು ಸೇರಿದಂತೆ ಅನೇಕ ಸಮುದ್ರ ಜೀವಿಗಳು ಪ್ಲಾಸ್ಟಿಕ್ ಅನ್ನು ಆಹಾರವೆಂದು ತಪ್ಪಾಗಿ ಗ್ರಹಿಸುತ್ತವೆ. ಸೂರ್ಯ ಮತ್ತು ಅಲೆಗಳ ಕಾರಣದಿಂದಾಗಿ ದೊಡ್ಡ ಪ್ಲಾಸ್ಟಿಕ್ ವಸ್ತುಗಳು ಮೈಕ್ರೋ ಮತ್ತು ನ್ಯಾನೋ ಪ್ಲಾಸ್ಟಿಕ್‌ಗಳಾಗಿ ಒಡೆಯುತ್ತವೆ. ಇವು ಜೀವಿಗಳ ಆಹಾರ ಸರಪಳಿಯನ್ನು ಪ್ರವೇಶಿಸುತ್ತವೆ. ನಂತರ ಮನುಷ್ಯನ ದೇಹವನ್ನೂ ಸೇರುತ್ತದೆ.

ಸಂಶೋಧನೆಯ ಪ್ರಕಾರ, 2050 ರ ವೇಳೆಗೆ ಸಮುದ್ರಗಳಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಇರುತ್ತದೆ ಹೇಳಲಾಗುತ್ತಿದ್ದು, ಪ್ಲಾಸ್ಟಿಕ್ ಈಗಾಗಲೇ ವಿವಿಧ ಬ್ರಾಂಡ್‌ಗಳ ಲವಣಗಳನ್ನು ಪ್ರವೇಶಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜಾಗೃತಿ ಮೂಡಿಸಬೇಕು’ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರಾಧ್ಯಾಪಕ ಜಗನಾಥ ರಾಠೋಡ್ ಹೇಳಿದ್ದಾರೆ.

ಹಾಕ್ಸ್ ಬಿಲ್ ಆಮೆಗಳು ಹೆಚ್ಚಾಗಿ ಫೆಸಿಪಿಕ್, ಅಟ್ಲಾಂಟಿಕ್ ಸಾಗರ ಹಾಗೂ ಅಂಡಮಾನ್, ನಿಕೋಬಾರ್‌ ಭಾಗದ ಸಮುದ್ರದಲ್ಲಿ ಕಡಿಮೆ ಆಳದಲ್ಲಿ, ಹವಳದ ದಿಬ್ಬಗಳ ನಡುವೆ ಕಾಣಿಸುತ್ತವೆ. ವನ್ಯಜೀವಿ ಕಾಯಿದೆಯ ಶೆಡ್ಯೂಲ್ 1 ರ ಅಡಿಯಲ್ಲಿ ಇವುಗಳನ್ನು ರಕ್ಷಿಸಲಾಗಿದೆ, ಇದು ಗಿಡುಗದ ಕೊಕ್ಕಿನಂತೆ ಕಾಣುವ ಕಿರಿದಾದ ಮೊನಚಾದ ತಲೆಯನ್ನು ಹೊಂದಿದೆ. ಹೀಗಾಗಿಯೇ ಇದಕ್ಕೆ ಹಾಕ್ಸ್ ಬಿಲ್ ಎಂದು ಹೆಸರಿಡಲಾಗಿದೆ.

ಸಮುದ್ರದ ಇತರೆ ಆಮೆಗಳಲ್ಲಿ ಇವು ಚಿಕ್ಕವಾಗಿದ್ದು, 2.5 ರಿಂದ 3 ಅಡಿ ಉದ್ದದವರೆಗೆ ಬೆಳೆಯುತ್ತವೆ. ಈ ಆಮೆಗಳು ಬೆಳೆಯಲು ಕಲ್ಲಿನ ಪ್ರದೇಶಗಳು, ಬಂಡೆಗಳನ್ನು ಬಯಸುತ್ತವೆ. ಆಭರಣಗಳ ತಯಾರಿಕೆಗೆ ಈ ಆಮೆಗಳ ಚಿಪ್ಪುಗಳಿಗಾಗಿ ಕೆಲವರು ಇವುಗಳನ್ನು ಬೇಟೆಯಾಡುತ್ತಿದ್ದಾರೆ. ಹೀಗಾಗಿ ಈ ಆಮೆಗಳು ಅಳಿವಂಚಿನಲ್ಲಿರುವ ಜೀವಿಗಳಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.