News Headlines 31-12-24 | ನಾನು RSS-ಮನುಸ್ಮೃತಿ ವಿರುದ್ಧ ಹೀಗಾಗಿ ನಾನು BJP ಟಾರ್ಗೆಟ್; ಬಾಣಂತಿ ರಾಧಿಕಾ ಸಾವಿನಿಂದ ನೊಂದು ಫಿನಾಯಿಲ್ ಕುಡಿದ ಪತಿ; ಬೈಕ್ ಗೆ KSRTC ಡಿಕ್ಕಿ: 3 ಸಾವು

1. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ BJP ಪೋಸ್ಟರ್ ಅಭಿಯಾನ
ಬೀದರ್ ಗುತ್ತಿಗೆದಾರ ಸಚಿನ್ ಮಾನಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮತ್ತಷ್ಟು ತೀವ್ರಗೊಳಿಸಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಬಿಜೆಪಿ ನಾಯಕರು ಪೋಸ್ಟರ್ ಅಭಿಯಾನ ನಡೆಸಿದರು. ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಸಿಟಿ ರವಿ ಹಾಗೂ ರವಿಕುಮಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗುತ್ತಿಗೆದಾರ ಸಚಿವ ಸಾವಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೊಣೆಗಾರರು ಎಂದು ಘೋಷಣೆ ಕೂಗಿದರು. ಕೈಲಿದ್ದ ಪೋಸ್ಟರ್ ಅಂಟಿಸಿ ಆಕ್ರೋಶ ಹೊರಹಾಕಿದರು. ಇದೊಂದು ಭ್ರಷ್ಟ ಸರ್ಕಾರ. ತಾವು ಏನೇ ಮಾಡಿದರೂ ತಮ್ಮನ್ನು ಯಾರು ಕೇಳುವುದಿಲ್ಲ ಎಂದು ಭಾವಿಸಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಆರೋಪವನ್ನು ತಳ್ಳಿಹಾಕಿದ ಪ್ರಿಯಾಂಕ್ ಖರ್ಗೆ, ನಾನು ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧವಾಗಿದ್ದೇನೆ. ನಾನು ಆರ್‌ಎಸ್‌ಎಸ್ ಮತ್ತು ಮನುಸ್ಮೃತಿಯ ವಿರುದ್ಧ ಇದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
2. ನಾನು RSS-ಮನುಸ್ಮೃತಿ ವಿರುದ್ಧ ಹೀಗಾಗಿ ನನ್ನನ್ನು BJP ಟಾರ್ಗೆಟ್ ಮಾಡುತ್ತಿದೆ: ಪ್ರಿಯಾಂಕ್ ಖರ್ಗೆ
ರಾಜ್ಯಾದ್ಯಂತ ಬಾಣಂತಿಯರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಬೆಳಗಾವಿ ಮೂಲದ ತುಂಬು ಗರ್ಭಿಣಿ ರೇಣುಕಾ ಪ್ರಕಾಶ್ ಹಿರೇಮನಿ ಮೃತಪಟ್ಟಿದ್ದಾರೆ. ರೇಣುಕಾ ಅವರು ಹೆರಿಗೆಗಾಗಿ ನಿನ್ನೆ ರಾತ್ರಿ ಕುಷ್ಟಗಿ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದರು. ರೇಣುಕಾಗೆ ಮುಂಜಾನೆ 2:30ರ ಸುಮಾರಿಗೆ ಹೆರಿಗೆ ಆಗಿತ್ತು. ಆದರೆ ಡೆಲಿವರಿಗೂ ಮೊದಲೇ ಮಗು ಮೃತಪಟ್ಟಿದ್ದು, ಹೀಗಾಗಿ ವೈದ್ಯರು ಸಿಜೇರಿಯನ್ ಮಾಡಿ ಮಗುವನ್ನು ಹೊರ ತೆಗೆದಿದ್ದರು. ಈ ಸಮಯದಲ್ಲಿ ಹೈಬಿಪಿ ಮತ್ತು ಹೃದಯಾಘಾತವಾಗಿ ಬೆಳಗ್ಗೆ 5.30ರ ಸುಮಾರಿಗೆ ರೇಣುಕಾ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ 19 ವರ್ಷದ ರಾಧಿಕಾ ಮೃತಪಟ್ಟಿದ್ದಾರೆ. ಆದರೆ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದು ಗರ್ಭಿಣಿ ಹಾಗೂ ನವಜಾತ ಶಿಶು ಪ್ರಾಣ ಬಿಟ್ಟಿದೆ. ರಾಧಿಕಾ ಸಾವಿನಿಂದ ನೊಂದ ಪತಿ ಮಲ್ಲೇಶ್ ಫಿನಾಯಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಮಲ್ಲೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.
3. JMB ಉಗ್ರ ಸಂಘಟನೆಯ ಜೈದುಲ್ಲ ಇಸ್ಲಾಂ ಕೌಸರ್ ಗೆ NIA 7 ವರ್ಷ ಜೈಲು ಶಿಕ್ಷೆ
ಅಕ್ರಮವಾಗಿ ನೆಲೆಸಿದ್ದಲ್ಲದೆ ತನ್ನ ಸಂಘಟನೆಗಾಗಿ ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಡಕಾಯಿತಿ ಮಾಡುತ್ತಿದ್ದ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ(ಜೆಎಂಬಿ) ಸಂಘಟನೆಯ ಉಗ್ರ ಜೈದುಲ್ಲ ಇಸ್ಲಾಂ ಅಲಿಯಾಸ್ ಕೌಸರ್‌ಗೆ NIA 7 ವರ್ಷ ಕಠಿಣ ಶಿಕ್ಷೆ ಹಾಗೂ 57 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸರಣಿ ಸ್ಪೋಟ ಪ್ರಕರಣದಲ್ಲಿ ಬಂಧನಕ್ಕೊಳಾಗಿದ್ದ ಕೌಸರ್, 2014ರಲ್ಲಿ ಸಂಘಟನೆ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜತೆ ಸೇರಿ ಭಾರತ ಪ್ರವೇಶಿಸಿದ್ದನು. ಬಳಿಕ ಅದೇ ವರ್ಷ ಅಕ್ಟೋಬರ್‌ನಲ್ಲಿ ಕೊಲ್ಕೊತ್ತಾದ ಬುರ್ದ್ವಾನ್ ಸ್ಫೋಟ ನಡೆಸಿದ್ದರು. ಬಳಿಕ ತಮ್ಮ ತಂಡಗಳನ್ನು ದಕ್ಷಿಣ ರಾಜ್ಯಗಳ ಕಡೆ ಕಳುಹಿಸಿದ್ದ ಕೌಸರ್, ತನ್ನ ಕೆಲ ಸಹಚರರ ಜತೆ ಸೇರಿ ತುಮಕೂರು, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಇತರ ಸಣ್ಣ-ಪುಟ್ಟ ವ್ಯಾಪಾರಸ್ಥನ ಸೋಗಿನಲ್ಲಿ ಓಡಾಡಿಕೊಂಡಿದ್ದರು.
4. ಮಂಗಳೂರಿನಲ್ಲಿ ಬೈಕ್ ಗೆ KSRTC ಡಿಕ್ಕಿ, ಮೂವರು ಸಾವು
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆಯ ಮೇಲೆ ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಮಂಕಿ ಕಡೆಯಿಂದ ಹೊನ್ನಾವರ ಪಟ್ಟಣಕ್ಕೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರಾದ ಭಟ್ಕಳ ತಾಲೂಕಿನ ರಾಘವೇಂದ್ರ ಸೋಮಯ್ಯ ಗೌಡ, ಗೌರೀಶ್ ನಾಯ್ಕ್ ಮತ್ತು ರಮೇಶ್ ನಾಯ್ಕ್ ಮೃತಪಟ್ಟಿದ್ದಾರೆ.
5. ಸಿಲಿಂಡರ್ ಸ್ಫೋಟ: ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು
ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ 42 ವರ್ಷದ ಪ್ರಕಾಶ್ ಬಾರಕೇರ ಮೃತಪಟ್ಟಿದ್ದಾರೆ. ಪ್ರಕಾಶ್ ಅವರಿಗೆ ಕಳೆದ 8 ದಿನಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತೆ. ಇದರೊಂದಿಗೆ, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಸೋಮವಾರ ರಾತ್ರಿಯಷ್ಟೇ ಅಯ್ಯಪ್ಪ ಮಾಲಾಧಾರಿ 27 ವರ್ಷದ ತೇಜಸ್ವರ್ ಮೃತಪಟ್ಟಿದ್ದರು. ಇದೀಗ 9 ಗಾಯಾಳುಗಳ ಪೈಕಿ 8 ಅಯ್ಯಪ್ಪ ಮಾಲಾಧಾರಿಗಳ ಸಾವಾಗಿದ್ದು, ಪ್ರಕಾಶ್ ಬಾರಕೇರ ಅವರ ಮಗ ವಿನಾಯಕ್ ಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


