Video: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಣೆ, ವಿವಾದ ಸ್ಫೋಟ
ಸಕ್ಕರೆನಾಡು ಮಂಡ್ಯದಲ್ಲಿ ಎರಡು ದಿನಗಳಿಂದ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದ್ದು, ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಪ್ರಗತಿಪರರು ಧ್ವನಿ ಎತ್ತಿದ್ದರು.

ಮಂಡ್ಯ: ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಇದೀಗ ರಾಜ್ಯದಲ್ಲಿ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.
ಹೌದು.. ಸಕ್ಕರೆನಾಡು ಮಂಡ್ಯದಲ್ಲಿ ಎರಡು ದಿನಗಳಿಂದ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದ್ದು, ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಪ್ರಗತಿಪರರು ಧ್ವನಿ ಎತ್ತಿದ್ದರು.
ಆದರೆ ಪ್ರತಿವರ್ಷದಂತೆ ಈ ಬಾರಿ ಕೂಡ ಸಸ್ಯಹಾರವನ್ನು ನೀಡಲಾಗುತ್ತಿತ್ತು. ಆದರೆ ಆದರೆ ಕೊನೆಯ ದಿನವಾದ ಇಂದು ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ ಮಾಡಲಾಗಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬಾಡೂಟಕ್ಕಾಗಿ ಜಟಾಪಟಿ
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆಗಾಗಿ ಜಟಾಪಟಿ ಉಂಟಾಗಿದ್ದು, ಪ್ರಗತಿಪರರು ಮೊಟ್ಟೆ, ಚಿಕನ್, ಕಬಾಬ್, ಕೋಳಿ ಸಾಂಬಾರ್, ರಾಗಿ ಮುದ್ದೆ ಹಂಚಿಕೆ ಮಾಡಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದು, ಈ ಮಧ್ಯೆ ಪೊಲೀಸರು ಮತ್ತು ಪ್ರಗತಿಪರರ ನಡುವೆ ವಾಗ್ವಾದ ಉಂಟಾಗಿದೆ. ಮಾಂಸಾಹಾರ ವಿತರಣೆ ವೇಳೆ ನೂಕು ನುಗ್ಗಲು ಉಂಟಾಗಿ ಗಲಾಟೆ ನಡೆದಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸ್ ಸಿಬ್ಬಂದಿ ಕೊನೆಗೂ ಮಾಂಸಾಹಾರ ವಶಕ್ಕೆ ಪಡೆದುಕೊಂಡಿದ್ದಾರೆ.
ವಿವಾದದ ನಡುವೆಯೂ ಮಾಂಸಾಹಾರ ವಿತರಣೆ
ಇನ್ನು ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಪ್ರಗತಿಪರರು ಮಾಂಸಾಹಾರ ವಿತರಣೆಗೆ ಪಟ್ಟು ಹಿಡಿದ್ದರು. ಈ ವಾದ-ವಿವಾದಗಳ ನಡುವೆಯೇ ಪ್ರಗತಿಪರರು ಸಮ್ಮೇಳದ ಊಟದ ಕೌಂಟರ್ನಲ್ಲೇ ಮಾಂಸಾಹಾರ ವಿತರಣೆ ಮಾಡಿದ್ದಾರೆ. ಈ ವೇಳೆ ಮಾಂಸಾಹಾರಕ್ಕಾಗಿ ಸಮ್ಮೇಳನಕ್ಕೆ ಆಗಮಿಸಿದ್ದ ಜನರು ಮುಗಿಬಿದ್ದರಿಂದ ನೂಕುನುಗ್ಗಲು ಉಂಟಾಯಿತು. ಈ ವೇಳೆ ಸಾರ್ವಜನಿಕರಿಂದ ಪೊಲೀಸರು ಮಾಂಸದೂಟವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಹಿತ್ಯಾಸಕ್ತರ ಬೇಸರ
ಬಾಡೂಟ ಹಂಚಿದ ವಿಚಾರಕ್ಕೆ ಸಾಹಿತ್ಯಾಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಬಾಡೂಟಕ್ಕಾಗಿ ಹೋರಾಟ ಮಾಡುವ ಸ್ಥಳವಲ್ಲ. ಇಲ್ಲಿ ಸಾಹಿತ್ಯ, ಭಾಷೆ ಬಗ್ಗೆ ಚರ್ಚೆ ಮಾಡಬೇಕು. ಮಂಡ್ಯ ಬಾಡೂಟ ಫೇಮಸ್ ಅಂತ ಈ ಸ್ಥಳದಲ್ಲಿ ಬಾಡೂಟ ಹಂಚಿದ್ದು ಸರಿಯಲ್ಲ. ಸಸ್ಯಹಾರ ಊಟ ಮಾಡಲು ಸಾಕಷ್ಟು ಜನರು ಬರುತ್ತಿದ್ದಾರೆ. ಮಾಂಸದೂಟ ಮಾಡಿಸಿದ್ದರೆ ಅದನ್ನ ನಿರ್ವಹಣೆ ಮಾಡುವುದು ಕಷ್ಟವಾಗುತಿತ್ತು ಎಂದಿದ್ದಾರೆ.
ಸಸ್ಯಾಹಾರ ವಿತರಣೆ
ಇಂದು ಸಾಹಿತ್ಯ ಸಮ್ಮೇಳನದಲ್ಲಿ ಮುದ್ದೆ, ಸೊಪ್ಪಿನ ಸಾಂಬಾರ್, ಅನ್ನ-ರಸಂ, ಮಜ್ಜಿಗೆ, ಸಂಡಿಗೆ ಹಾಗೂ ಬಾದುಷಾವನ್ನು ಬಾಣಸಿಗರು ಸಿದ್ದಪಡಿಸಿದ್ದರು. ಸಮ್ಮೇಳನದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



