ಕಸಾಪ ನಾಯಕತ್ವ ಬಿಕ್ಕಟ್ಟು: ಅತಂತ್ರ ಸ್ಥಿತಿಯಲ್ಲಿ ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ..!
2025ರ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಈ ಸಮ್ಮೇಳನವು, ಸದ್ಯ ಪರಿಷತ್ತಿನಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದ ಕಾರಣ ಸಮ್ಮೇಳನಕ್ಕಾಗಿ ಸಾಹಿತ್ಯಾಸಕ್ತರು ಮತ್ತಷ್ಟು ಕಾಯುವ ಪರಿಸ್ಥಿತಿ ಎದುರಾಗಿದೆ.

ಬಳ್ಳಾರಿ: ಬಳ್ಳಾರಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮತ್ತಷ್ಟು ವಿಳಂಬವಾಗುವುದು ಅಧಿಕೃತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಸದ್ಯ ಉಂಟಾಗಿರುವ ಆಡಳಿತಾತ್ಮಕ ಮತ್ತು ನಾಯಕತ್ವದ ಬಿಕ್ಕಟ್ಟೇ ಈ ಮಹತ್ವದ ಸಾಂಸ್ಕೃತಿಕ ಉತ್ಸವ ನೆನೆಗುದಿಗೆ ಬೀಳಲು ಪ್ರಮುಖ ಕಾರಣವಾಗಿದೆ.
2025ರ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಈ ಸಮ್ಮೇಳನವು, ಸದ್ಯ ಪರಿಷತ್ತಿನಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದ ಕಾರಣ ಸಾಹಿತ್ಯಾಸಕ್ತರು ಸಮ್ಮೇಳನಕ್ಕಾಗಿ ಮತ್ತಷ್ಟು ಕಾಯುವ ಪರಿಸ್ಥಿತಿ ಎದುರಾಗಿದೆ.
ಕಳೆದ 88ನೇ ಕನ್ನಡ ಸಾಹಿತ್ಯ ಸಮ್ಮೇಳನವು 2024ರ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆದಿತ್ತು. ಬಳ್ಳಾರಿಯಲ್ಲಿ ನಡೆಯಬೇಕಿದ್ದ ಮುಂದಿನ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಹೆಸರನ್ನೂ ಅಂತಿಮಗೊಳಿಸಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಅಧ್ಯಕ್ಷ ಮಹೇಶ್ ಜೋಶಿ ಅವರ ಅಧಿಕಾರಾವಧಿಯಲ್ಲಿ ಹಣಕಾಸಿನ ಅಕ್ರಮಗಳು ಮತ್ತು ಅಧಿಕಾರ ದುರ್ಬಳಕೆಯ ಆರೋಪಗಳು ಕೇಳಿಬಂದಿದ್ದವು. ಈ ಬೆಳವಣಿಗೆಗಳ ಬಳಿಕ ರಾಜ್ಯ ಸರ್ಕಾರವು 2025ರ ಸೆಪ್ಟೆಂಬರ್‌ನಲ್ಲಿ ಚುನಾಯಿತ ಆಡಳಿತ ಮಂಡಳಿಯನ್ನು ಬದಿಗಿಟ್ಟು ಆಡಳಿತಾಧಿಕಾರಿಯನ್ನು ನೇಮಿಸಿತ್ತು.
ಪ್ರಸ್ತುತ ಪರಿಷತ್ತಿನಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲ. ಬದಲಿಗೆ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಯ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಸಮ್ಮೇಳನವನ್ನು ಕರೆಯಲು ಚುನಾಯಿತ ಆಡಳಿತ ಮಂಡಳಿ ಅಗತ್ಯವಿದೆ ಎಂದು ಮೂಲಗಳು ಹೇಳಿವೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 4.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಮತದಾರರಿದ್ದಾರೆ. ಆದರೆ, ಮೂರು ವರ್ಷಗಳ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಮತದಾನದ ಅರ್ಹತೆ ಇದೆ. ಸದ್ಯ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರ ಇತ್ತೀಚೆಗೆ ಚುನಾವಣಾಧಿಕಾರಿಯನ್ನು ನೇಮಿಸಿದೆ. ಪರಿಷತ್ತಿನ ಹಿಂದಿನ ಚುನಾವಣೆಗಳು 2021ರಲ್ಲಿ ನಡೆದಿದ್ದವು. ಆಗ ಮಹೇಶ್ ಜೋಶಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷರ ಅಧಿಕಾರಾವಧಿ ಐದು ವರ್ಷಗಳಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



