Panchamasali Lingayat quota: 'ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಸದನದ ಮುಂದಿಡುತ್ತೇವೆ'- ಸಿಎಂ ಸಿದ್ದರಾಮಯ್ಯ!
2ಎ ಮೀಸಲಾತಿ ವಿಚಾರವಾಗಿ ಪಂಚಮಸಾಲಿ (Panchmasali) ಸಮುದಾಯ ನಾಳೆ ಸುವರ್ಣ ಸೌಧ ಮುತ್ತಿಗೆಗೆ ಸಜ್ಜಾಗಿದೆ. ಈ ವಿಚಾರವಾಗಿ ಇಂದು ಸದನದ ಒಳಗೂ ಮತ್ತು ಹೊರಗೂ ವ್ಯಾಪಕ ಗದ್ದಲವಾಗುತ್ತಿದೆ.

ಬೆಳಗಾವಿ: ಬೊಮ್ಮಾಯಿ ಸರ್ಕಾರ ಪಂಚಮಸಾಲಿಗಳನ್ನು 2ಎ ಸೇರಿಸಿಲ್ಲ.. ಇದರ ಆಧಾರದ ಮೇಲೆ ಸರ್ವೋಚ್ಛ ನ್ಯಾಯಾಲಯ ಆದೇಶ ಹೊರಡಿಸಿದ್ದು, ಇದರ ಪ್ರತಿಯನ್ನು ನಾಳೆಯೇ ಸದನ ಮುಂದೆ ಮಂಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸವಾಲೆಸೆದಿದ್ದಾರೆ.
2ಎ ಮೀಸಲಾತಿ ವಿಚಾರವಾಗಿ ಪಂಚಮಸಾಲಿ (Panchmasali) ಸಮುದಾಯ ನಾಳೆ ಸುವರ್ಣ ಸೌಧ ಮುತ್ತಿಗೆಗೆ ಸಜ್ಜಾಗಿದೆ. ಈ ವಿಚಾರವಾಗಿ ಇಂದು ಸದನದ ಒಳಗೂ ಮತ್ತು ಹೊರಗೂ ವ್ಯಾಪಕ ಗದ್ದಲವಾಗುತ್ತಿದ್ದು, ಇದೀಗ ಬಿಜೆಪಿ ನಾಯಕರ ವಾಗ್ದಾಳಿಗೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿದ್ದು, ಈ ವಿಚಾರವಾಗಿ ಹಿಂದಿನ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡೆವಿಟ್ ಹಾಗೂ ನ್ಯಾಯಾಲಯದ ಆದೇಶವನ್ನು ಸದನದ ಮುಂದೆ ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
'ಪಂಚಮಸಾಲಿಗಳನ್ನು 2ಎ ಸೇರಿಸಲು ಬಹಳ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಪಂಚಮಸಾಲಿಗಳು ಮೀಸಲಾತಿ ಕೇಳಲು ನಾನು ಅಡ್ಡಿಯಾಗಿಲ್ಲ. ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಎಂದು ವಿಂಗಡಸಲಾಗಿದೆ.
ವೀರಶೈವ ಲಿಂಗಾಯಿತ ಹಾಗೂ ಪಂಚಮಸಾಲಿ ಜಾತಿಗಳು 3ಬಿ ಅಡಿ ಮೀಸಲಾತಿ ಪಡೆಯುತ್ತಿವೆ. ಪಂಚಮಸಾಲಿಗಳನ್ನು 2ಎ ಸೇರಿಸಲು ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದು ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಆಯೋಗದ ಮುಂದೆ ಮೀಸಲಾತಿ ವಿಚಾರವನ್ನು ಮಂಡಿಸುವಂತೆ ಪಂಚಮಸಾಲಿ ಹೋರಟಗಾರರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಿಂದಲೇ ಎಡವಟ್ಟು
ಅಂತೆಯೇ ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ, 'ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಪಂಚಮಸಾಲಿಗಳನ್ನು 2ಎ ಸೇರಿಸಿಲ್ಲ ಬದಲಾಗಿ, ಅಲ್ಪಸಂಖ್ಯಾತ ಮುಸ್ಲಿಂರಿಗೆ ನೀಡಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, 3ಎ ಹಾಗೂ 3ಬಿಗೆ ತಲಾ ಶೇ.2 ರಂತೆ ಮೀಸಲಾತಿ ಹಂಚಿಕೆ ಮಾಡಿತ್ತು.
ಇದನ್ನು ಆಕ್ಷೇಪಿಸಿ ಮುಸ್ಲಿಂರು ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಹಿಂದಿನ ರಾಜ್ಯ ಸರ್ಕಾರ ಮುಸ್ಲಿಂರ ಮೀಸಲಾತಿ ರದ್ದು ಪಡಿಸಿಲ್ಲ. ಯತಾಸ್ಥಿತಿ ಮುಂದುವರಿಸಿಕೊಂಡು ಹೋಗುವುದಾಗಿ ಅಫಿಡೆವಿಡ್ ಸಲ್ಲಿಸಿದೆ. ಇದರ ಆಧಾರದ ಮೇಲೆ ಸರ್ವೋಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಇದರ ಪ್ರತಿಯನ್ನು ನಾಳೆಯೇ ಸದನ ಮುಂದೆ ಮಂಡಿಸುವುದಾಗಿ' ಹೇಳಿದರು.
ಮೀಸಲಾತಿ ಹೋರಾಟಕ್ಕೆ ಷರತ್ತುಬದ್ಧ ಅನುಮತಿ: ಗೃಹ ಸಚಿವ ಪರಮೇಶ್ವರ್
ಇನ್ನು ಮೀಸಲಾತಿ ಹೋರಾಟಕ್ಕೆ ಸರ್ಕಾರ ಅನುಮತಿ ನೀಡಲು ಸಿದ್ಧವಾಗಿದೆ ಎಂದು ಹೇಳಿದ ಗೃಹಸಚಿವ ಡಾ.ಜಿ ಪರಮೇಶ್ವರ್ ಈ ಕುರಿತು ಸದನಕ್ಕೆ ಮಾಹಿತಿ ನೀಡಿದರು.
'ಸುಮಾರು 5000 ಟ್ರ್ಯಾಕ್ಟರ್ಗಳೊಂದಿಗೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಈ ರೀತಿಯಾಗಿ ಸಾವಿರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ಗಳು ಆಗಮಿಸಿದರೆ ಕಾನೂನು ಸುವ್ಯವಸ್ಥೆ ಧಕ್ಕೆ ಬರುತ್ತದೆ.
ಈ ಹಿನ್ನಲೆಯಲ್ಲಿ ಟ್ರ್ಯಾಕ್ಟರ್ಗಳೊಂದಿಗೆ ಹೋರಾಟಕ್ಕೆ ಅವಕಾಶ ನೀಡಲು ಸರ್ಕಾರ ನಿರಾಕರಿಸಿದೆ. ನಿಯಮಿತ ಸಂಖ್ಯೆಯಲ್ಲಿ ಟೆಂಪೋ, ಟ್ಯಾಕ್ಸಿ, ಕಾರುಗಳ ಮೂಲಕ ಹೋರಾಟಗಾರರು ಆಗಮಿಸಿ ಶಾಂತವಾಗಿ ಪ್ರತಿಭಟನೆ ನಡೆಸಲು ಯಾವುದೇ ಅಡ್ಡಿಯಿಲ್ಲ. ಸರ್ಕಾರ ಇದಕ್ಕೆ ಅನುಮತಿ ನೀಡಲಿದೆ. ಈ ವಿಚಾರವಾಗಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ' ಎಂದು ಡಾ.ಜಿ.ಪರಮೇಶ್ವರ ಸದನಕ್ಕೆ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



