ರಾಜ್ಯ

ಕಾಂಗ್ರೆಸ್ ಬೆದರಿಕೆ: ರಾಜ್ಯಪಾಲರಿಂದ ಬುಲೆಟ್ ಫ್ರೂಪ್ ಕಾರು ಬಳಕೆ; ಅಗತ್ಯ ಬಿದ್ದರೆ ಮುಲಾಜಿಲ್ಲದೆ HDK ಬಂಧಿಸುತ್ತೇವೆ: CM; ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: HDK! ಇವು ಇಂದಿನ ಪ್ರಮುಖ ಸುದ್ದಿಗಳು 21-08-24

ಕಾಂಗ್ರೆಸ್ ಬೆದರಿಕೆ: ರಾಜ್ಯಪಾಲರಿಂದ ಬುಲೆಟ್ ಫ್ರೂಪ್ ಕಾರು ಬಳಕೆ; ಅಗತ್ಯ ಬಿದ್ದರೆ ಮುಲಾಜಿಲ್ಲದೆ HDK ಬಂಧಿಸುತ್ತೇವೆ: CM; ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: HDK! ಇವು ಇಂದಿನ ಪ್ರಮುಖ ಸುದ್ದಿಗಳು 21-08-24
Published On :

1. ಗಣಿ ಗುತ್ತಿಗೆ: ಅಗತ್ಯ ಬಿದ್ದರೆ ಮುಲಾಜಿಲ್ಲದೆ ಕುಮಾರಸ್ವಾಮಿಯನ್ನು ಬಂಧಿಸುತ್ತೇವೆ: ಸಿಎಂ

ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ತಾರತಮ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮ ಗಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಬಂಧಿಸುವ ಪರಿಸ್ಥಿತಿ ಸದ್ಯಕ್ಕಿಲ್ಲ. ಅಂತಹ ಪರಿಸ್ಥಿತಿ ಬಂದರೆ ಅವರನ್ನು ಮುಲಾಜಿಲ್ಲದೆ ಬಂಧಿಸುತ್ತೇವೆ ಎಂದಿದ್ದಾರೆ. ಆಲಮಟ್ಟಿಗೆ ಬಾಗಿನ ಅರ್ಪಿಸಲು ತೆರಳುವ‌ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಕುಮಾರಸ್ವಾಮಿ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ತನ್ನ ವಿರುದ್ದ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

2. ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: HDK

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪನಿಗೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ಗುತ್ತಿಗೆ ಮುಂಜೂರು ಮಾಡಿದ್ದ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ಎಸ್ಐಟಿ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿದೆ. ಇನ್ನು ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ನಾನು ಹೆದರುವುದಿಲ್ಲ. ಪ್ರಕರಣದ ತನಿಖೆ ಪೂರ್ಣಗೊಂಡಿದ್ದರೆ, ಲೋಕಾಯುಕ್ತ ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಹಿರಿಯ ಐಪಿಎಸ್ ಅಧಿಕಾರಿ ಯು.ವಿ ಸಿಂಗ್ ಅವರು ಸಿದ್ಧಪಡಿಸಿರುವ ಲೋಕಾಯುಕ್ತ ವರದಿಯಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮಾಜಿ ಸಿಎಂ ಎನ್. ಧರಂ ಸಿಂಗ್ ಮತ್ತು ನನ್ನ ಹೆಸರನ್ನು ಉಲ್ಲೇಖಿಸಲಾಗಿದೆ ಎಂದ ಕುಮಾರಸ್ವಾಮಿ ನಾನು ಭ್ರಷ್ಟನಾಗಿದ್ದರೆ ನಾನೇಕೆ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸುತ್ತಿದ್ದೆ ಎಂದು ಪ್ರಶ್ನಿಸಿದ್ದಾರೆ.

3. Congress ನಾಯಕರ ಬೆದರಿಕೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಲೆಟ್ ಫ್ರೂಪ್ ಕಾರು ಬಳಕೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದ್ದು ಎಚ್ಚರಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಭದ್ರತೆ ಹೆಚ್ಚಿಸಲಾಗಿದ್ದು, ಬುಲೆಟ್ ಪ್ರೂಫ್ ಕಾರನ್ನು ನೀಡಲಾಗಿದೆ. ಈ ಹಿಂದೆಯೇ ರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರು ನೀಡಲಾಗಿತ್ತು. ಆದರೆ ರಾಜ್ಯಪಾಲರು ಅದನ್ನು ಬಳಸದೆ ಸರ್ಕಾರಕ್ಕೆ ವಾಪಸ್ ಮಾಡಿದ್ದರು. ಈಗ ಕಾಂಗ್ರೆಸ್ಸಿಗರು ರಾಜ್ಯಪಾಲರ ವಿರುದ್ದ ಪ್ರತಿಭಟನೆ ನಡೆಸಿರುವುದರಿಂದ ರಾಜ್ಯಪಾಲರಿಗೆ ಭದ್ರತಾ ಆತಂಕ ಎದುರಾದ ಹಿನ್ನೆಲೆಯಲ್ಲಿ ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ಬಳಸಲು ಮುಂದಾಗಿದ್ದಾರೆ. ಮತ್ತೊಂದೆಡೆ ರಾಜ್ಯಪಾಲ ವಿರುದ್ಧ ಕಾಂಗ್ರೆಸ್ಸಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲೆ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ.

4. ದಾವಣಗೆರೆಯ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿ

ರಾಜ್ಯಾದ್ಯಂತ ಮಳೆ ಅಬ್ಬರಿಸುತ್ತಿದ್ದು ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಆಸ್ಪತ್ರೆಯ ಒಳಗೆ ಮಳೆ ನೀರು ನುಗ್ಗಿದ್ದರಿಂದ ರೋಗಿಗಳು ಪರದಾಡಿದ್ದಾರೆ. ಜನರಲ್ ವಾರ್ಡ್, ಐಸಿಯು ವಾರ್ಡ್ ಗಳಿಗೂ ನೀರು ನುಗ್ಗಿದ್ದು ಇಡೀ ಆಸ್ಪತ್ರೆ ಸಂಪೂರ್ಣ ಜಲಾವೃತವಾಗಿದೆ. ನೀರನ್ನು ಹೊರಹಾಕಲು ಸಿಬ್ಬಂದಿ ಹರಸಾಹಸಪಟ್ಟರು. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿ, ಔಷಧ ವಿತರಣಾ ಕೊಠಡಿ, ಹೆರಿಗೆ ವಾರ್ಡ್ ಗೆ ನೀರು ನುಗ್ಗಿದ್ದು, ವಾರ್ಡ್ ನಲ್ಲಿದ್ದ ಬಾಣಂತಿಯರು ಹಾಗೂ ಐಸಿಯು ಘಟಕದಲ್ಲಿನ ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕಾಗಿ ಬಂತು. ಅಕ್ಕಪಕ್ಕದ ಪ್ರದೇಶಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪಕ್ಕದ ಕ್ರೀಡಾಂಗಣದಿಂದ ಆಸ್ಪತ್ರೆಗೆ ನೀರು ನುಗ್ಗಿದೆ.

5. ಶಿವಮೊಗ್ಗದಲ್ಲಿ ಎಲ್​ಪಿಜಿ ಸಿಲಿಂಡರ್ ಸ್ಫೋಟ; ಬೇಕರಿ ಬೆಂಕಿಗಾಹುತಿ

ಬೇಕರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಎಲ್​ಪಿಜಿ ಸಿಲಿಂಡರ್ ಸ್ಫೋಟವಾದ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನ ಎಸ್​ಎಲ್​ವಿ ಅಯ್ಯಂಗಾರ್ ಬೇಕರಿಯಲ್ಲಿ ನಡೆದಿದೆ. ಕೆಲವೇ ನಿಮಿಷದಲ್ಲಿ 3 ಬಾರಿ ಸ್ಫೋಟವಾಗಿದ್ದು, ಬೇಕರಿಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಬೇಕರಿಯಲ್ಲಿದ್ದ ಎಲ್ಲ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಬೇಕರಿ ಮಾಲೀಕನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಈ ಕುರಿತು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.