ಮೈಸೂರು ದಸರಾ: ಅಂಬಾರಿ ಬಸ್ ನಲ್ಲಿ ಕುಳಿತು, ವಿದ್ಯುತ್ ದೀಪಾಲಂಕಾರ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ!
ಮಹಾನವಮಿ ದಿನವಾದ ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ನಗರದಲ್ಲಿ ದಸರಾ ಪ್ರಯುಕ್ತ ವಿಶೇಷವಾಗಿ ಅಳವಡಿಸಿರುವ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಿದರು.

ಮೈಸೂರು: ಮಹಾನವಮಿ ದಿನವಾದ ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ನಗರದಲ್ಲಿ ದಸರಾ ಪ್ರಯುಕ್ತ ವಿಶೇಷವಾಗಿ ಅಳವಡಿಸಿರುವ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಿದರು.
ದಸರಾ ಪ್ರಯುಕ್ತ ಕಳೆದ 9 ದಿನಗಳಿಂದ ಸಾಂಸ್ಕೃತಿಕ ನಗರಿ ಬಗೆಬಗೆಯ ವಿದ್ಯುತ್ ದೀಪಾಲಂಕಾರಗಳಿಂದ ಮಿನುಗುತ್ತಿದ್ದು, ಅಂಬಾರಿ ಬಸ್ ನಲ್ಲಿ ಕುಳಿತು ವಿವಿಧೆಡೆ ಸಂಚರಿಸಿದ ಸಿಎಂ ಸಿದ್ದರಾಮಯ್ಯ, ನಗರದ ಸೌಂದರ್ಯವನ್ನು ಕಣ್ತುಂಬಿಕೊಂಡರು. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ, ಸಚಿವ ಬೈರತಿ ಬಸವರಾಜ ಮತ್ತಿತರರು ಮುಖ್ಯಮಂತ್ರಿಗೆ ಸಾಥ್ ನೀಡಿದರು.ಇದಕ್ಕೂ ಮುನ್ನಾ, ಪಂಜಿನ ಕವಾಯತು ಮೈದಾನದಲ್ಲಿ ಮೈನವಿರೇಳಿಸಿದ ವೈಮಾನಿಕ ಸಾಹಸ ಪ್ರದರ್ಶನವನ್ನು ಮುಖ್ಯಮಂತ್ರಿ ವೀಕ್ಷಿಸಿದರು.
ಜಂಬೂಸವಾರಿಗೆ ಅಂತಿಮ ಸಿದ್ಧತೆ: ಇತಿಹಾಸ ಪ್ರಸಿದ್ಧ ಜಂಬೂ ಸವಾರಿಗೆ ಅಂತಿಮ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಮಂಗಳವಾರ ಮಧ್ಯಾಹ್ನ 1.46 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಕಂಬಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಚಿನ್ನದ ಅಂಬಾರಿಯಲ್ಲಿನ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಮೈಸೂರಿನ ಅಂಬಾವಿಲಾಸ ಅರಮನೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಅರಮನೆ ಆವರಣದಲ್ಲಿ ಗಣ್ಯಾತಿಗಣ್ಯರು ದಸರಾ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸಾಗುವ ರಾಜ ಬೀದಿಗಳು ಸಹ ಪ್ರವಾಸಿಗರು ಜಂಬೂಸವಾರಿ ವೀಕ್ಷಿಸಲು ಬ್ಯಾರಿಕೇಡ್ ಗಳನ್ನು ಹಾಕಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ದಸರಾ ಮಹೋತ್ಸವದ ಜಂಬೂಸವಾರಿ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಅರಮನೆ, ಜಂಬೂ ಸವಾರಿ ಮಾರ್ಗ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ ಲಕ್ಷಾಂತರ ಮಂದಿ ಸೇರುವುದರಿಂದ ಯಾವುದೇ ಅನಾಹುತವಾಗದಂತೆ ಕಟ್ಟೇಚ್ಚರ ವಹಿಸಿದ್ದಾರೆ. ಆರು ಸಾವಿರ ಮಂದಿ ಪೊಲೀಸರನ್ನು ವಿಜಯ ದಶಮಿ ದಿನದಂದು ಭದ್ರತೆಗೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ರಮೇಶ್ ಬಾನುತ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


