ರಾಜ್ಯ

ಕೆಐಎಡಿಬಿ ಹಂಚಿಕೆಯಿಂದ 4,248 ಕೋಟಿ ರೂಪಾಯಿ ಬಾಕಿ: ನಾಲ್ಕು ತಿಂಗಳಲ್ಲಿ ವಸೂಲಿಗೆ ಎಂಬಿ ಪಾಟೀಲ್ ಗಡುವು!

ಉದ್ಯಮ ಸ್ಥಾಪನೆಯ ಉದ್ದೇಶಕ್ಕೆಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ(ಕೆಐಎಡಿಬಿ) ಇದುವರೆಗೆ ಹಂಚಿರುವ ನಿವೇಶನಗಳಿಂದ 4,248 ಕೋಟಿ ರೂ.ಗಳಷ್ಟು ಬೃಹತ್ ಬಾಕಿ ಹಣ ಬರಬೇಕಿದೆ.

ಕೆಐಎಡಿಬಿ ಹಂಚಿಕೆಯಿಂದ 4,248 ಕೋಟಿ ರೂಪಾಯಿ ಬಾಕಿ: ನಾಲ್ಕು ತಿಂಗಳಲ್ಲಿ ವಸೂಲಿಗೆ ಎಂಬಿ ಪಾಟೀಲ್ ಗಡುವು!
ಎಂಬಿ ಪಾಟೀಲ್
Published On :

ಬೆಂಗಳೂರು: ಉದ್ಯಮ ಸ್ಥಾಪನೆಯ ಉದ್ದೇಶಕ್ಕೆಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ(ಕೆಐಎಡಿಬಿ) ಇದುವರೆಗೆ ಹಂಚಿರುವ ನಿವೇಶನಗಳಿಂದ 4,248 ಕೋಟಿ ರೂ.ಗಳಷ್ಟು ಬೃಹತ್ ಬಾಕಿ ಹಣ ಬರಬೇಕಿದೆ. ಇದನ್ನು ಮುಂದಿನ ನಾಲ್ಕು ತಿಂಗಳಲ್ಲಿ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ ಗಡುವು ವಿಧಿಸಿದ್ದಾರೆ.

ಖನಿಜ‌ ಭವನದಲ್ಲಿ ಕೆಐಎಡಿಬಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಎಂಬಿ ಪಾಟೀಲ್ ಅಧಿಕಾರಿಗಳಿಗೆ ಈ ಎಚ್ಚರಿಕೆ ನೀಡಿದ್ದಾರೆ. ಇದರಲ್ಲಿ ವಿಫಲರಾದರೆ ಮಂಡಳಿಯ ಕಾರ್ಯದರ್ಶಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಕೆಐಎಡಿಬಿ ಆರಂಭವಾದಾಗಿನಿಂದಲೂ ಈ ಸಮಸ್ಯೆ ಇದೆ. ಈಗಿನ ಅಂಕಿಅಂಶಗಳ ಪ್ರಕಾರ, ಮಂಡಳಿಯು ಸಾಮಾನ್ಯ ವರ್ಗದವರಿಗೆ ಮಂಜೂರು ಮಾಡಿರುವ 5,932 ಕೈಗಾರಿಕಾ ಘಟಕಗಳಿಂದ 2,825 ಕೋಟಿ ರೂ. ಬರಬೇಕಾಗಿದೆ. ಎಸ್ಸಿ- ಎಸ್ಟಿ ವರ್ಗಗಳ ಅಡಿಯಲ್ಲಿ 741 ಕೋಟಿ ರೂ. ಬಾಕಿ ಉಳಿದಿದೆ. ಇದರ ಜತೆಗೆ ಎಸ್ಸಿ- ಎಸ್ಟಿ ವರ್ಗಗಳಿಗೆ ನೀಡುವ ಸಬ್ಸಿಡಿ ಬಾಬ್ತಿನಲ್ಲಿ 680 ಕೋಟಿ ಇದೆ ಎಂದು ಸಚಿವರು ವಿವರಿಸಿದರು.

ಕೆಐಎಡಿಬಿಯಿಂದ ನಿವೇಶನಗಳನ್ನು ಪಡೆದಿರುವವರಲ್ಲಿ ಎಷ್ಟೋ ಜನ ಈ ನಿವೇಶನಗಳನ್ನು ಹಾಗೆಯೇ ಬಿಟ್ಟುಕೊಂಡಿದ್ದಾರೆ. ಉದ್ಯಮ ಸ್ಥಾಪಿಸಿ ಇನ್ನೇನು ತಮ್ಮ ಹೆಸರಿಗೆ ನಿವೇಶನ ಮಾಡಿಸಿಕೊಳ್ಳುವ ಕೊನೆ ಹಂತದಲ್ಲಿ ಇರುವವರೇ  2,100 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಇಂಥವರ ವಿರುದ್ಧ ನಾಲ್ಕು ತಿಂಗಳೊಳಗೆ ಕಠಿಣ ಕ್ರಮ ಜರುಗಿಸಿ ಬಾಕಿ ಹಣ ವಸೂಲಿ ಮಾಡಲೇಬೇಕು. ಕಾನೂನು ಕ್ರಮದ ಜತೆಗೆ ನಿವೇಶನ ಮಂಜೂರಾತಿಯನ್ನೇ ರದ್ದುಪಡಿಸಬೇಕಾದ ನಿಷ್ಠುರತೆಯನ್ನು ಪ್ರದರ್ಶಿಸಲೇಬೇಕಾಗಿದೆ ಎಂದು ಅವರು ವಿವರಿಸಿದರು.

ಕೆಐಎಡಿಬಿ ಮೊದಲಿನಿಂದಲೇ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತ ಬರಬೇಕಾಗಿತ್ತು. ಆಗ ಈ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಈ ವಿಚಾರದಲ್ಲಿ ಮಂಡಳಿಯ ಕಾರ್ಯದರ್ಶಿಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಮಹೇಶ್, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.