ಮಂಗಳೂರು ಕಾಲೇಜಿನ 99 ಮೆಡಿಕಲ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಹೈಕೋರ್ಟ್ ನಿರ್ದೇಶನ
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, "ಕೋಟಾದ ಪ್ರಕಾರ ಬೇರೊಂದು ಖಾಸಗಿ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಲಾಗುವುದು. ಸೀಟು ಮರು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶಬೇಕಿದೆ" ಎಂದು ಕೋರಿದರು.

ಬೆಂಗಳೂರು: ಮಂಗಳೂರಿನ ಜಿಆರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಾದ 99 ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳು ಪರೀಕ್ಷೆ ಇರುವ ಕಾರಣ ಅವರನ್ನು, ರಾಜ್ಯದ ಇತರೆ ಖಾಸಗಿ ಕಾಲೇಜುಗಳಿಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ (ಡಿಎಂಇ) ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ
2023-24ನೇ ಸಾಲಿನ ಎಂಬಿಬಿಎಸ್ ಕೋರ್ಸ್ ಗೆ ಪಡೆದಿರುವ ಪ್ರವೇಶಾತಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು ಅಕ್ರಮ ಎಂದು ಸಾರಿದೆ. ಹೀಗಾಗಿ, ನಮ್ಮನ್ನು ಬೇರೊಂದು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಬೇಕು ಮತ್ತು ಇದೇ ಅಕ್ಟೋಬರ್‌ನಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಡಿ.ಎಸ್. ಧಾತ್ರಿ ಸೇರಿದಂತೆ ಕಾಲೇಜಿನ 98 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ಜಿ. ನರೇಂದರ್ ಮತ್ತು ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ, ಅಕ್ಟೋಬರ್ 3 ರೊಳಗೆ ವಿದ್ಯಾರ್ಥಿಗಳ ಸೀಟು ವಿತರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಪೀಠ ಹೇಳಿದೆ. ಅರ್ಜಿದಾರರ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡುವಲ್ಲಿ ಗಂಭೀರ ದೋಷ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ರಾಜ್ಯ ಸರ್ಕಾರಿ ವಕೀಲರು ಹಾಜರಾಗಿ, ಅರ್ಜಿದಾರ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜಿಗೆ ದಾಖಲಿಸಿಕೊಳ್ಳಲಾಗಿದೆ. ಸರ್ಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜುಗಳಲ್ಲಿನ ಶುಲ್ಕ ಬಹಳ ವ್ಯತ್ಯಾಸವಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕೋಟಾದ ಪ್ರಕಾರ ಬೇರೊಂದು ಖಾಸಗಿ ಕಾಲೇಜಿನಲ್ಲಿ ಪ್ರವೇಶಾತಿ ಕಲ್ಪಿಸಲಾಗುತ್ತದೆ. ರಾಜ್ಯದಲ್ಲಿ ಸುಮಾರು 24 ಖಾಸಗಿ ಕಾಲೇಜುಗಳಿವೆ. ವಿದ್ಯಾರ್ಥಿಗಳಿಗೆ ಸೀಟು ಮರು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶ ಬೇಕಿದೆ. 24 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೀಟು ಮರು ವಿತರಣೆ ಅಂತಿಮಗೊಳಿಸಿ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಎನ್‌ಎಂಸಿ ಪರವಾಗಿ ವಾದ ಮಂಡಿಸಿದ ವಕೀಲರು, ವಿದ್ಯಾರ್ಥಿಗಳ ವರ್ಗಾವಣೆಗೆ ಅನುಮತಿ ನೀಡುವ ಕುರಿತು ಎನ್‌ಎಂಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸೀಟು-ಮರು ವಿತರಣೆಯ ಪ್ರಕ್ರಿಯೆ ನಂತರದ ಕ್ರಮಗಳನ್ನು ಮತ್ತು ಅದನ್ನು ಪೂರ್ಣಗೊಳಿಸುವ ವೇಳಾಪಟ್ಟಿಯನ್ನು ದಾಖಲೆಯಲ್ಲಿ ಇರಿಸುವಂತೆ ಅಫಿಡವಿಟ್ ಸಲ್ಲಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ವಕೀಲರಿಗೆ ಸೂಚಿಸಿತು.
ನಿಗದಿತ ಅವಧಿ ಮೀರಿ ಕಾಲೇಜು ಮೇಲ್ಮನವಿ ಸಲ್ಲಿಸಿರುವುದರಿಂದ ಅದನ್ನು ತಿರಸ್ಕರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ತಿಳಿಸಿದರು.
ಯುಜಿ ಕೋರ್ಸ್‌ನ ವಾರ್ಷಿಕ 150 ಸೀಟುಗಳ ಒಂದು ಬ್ಯಾಚ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಎನ್‌ಎಂಸಿ ಸೆಪ್ಟೆಂಬರ್ 13, 2023 ರಂದು ಅನುಮತಿ ನೀಡಿದೆ ಎಂದು ಕಾಲೇಜು ಹೇಳಿಕೊಳ್ಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


