ಕಾವೇರಿ ನೀರು ವಿವಾದ: ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಸಂಪುಟ ನಿರ್ಧಾರ
5 ಸಾವಿರ ಕ್ಯೂಸೆಕ್ ನಂತೆ ತಮಿಳುನಾಡಿಗೆ ನಿತ್ಯ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದು, ಪ್ರಸ್ತುತ ಬಿಡುಗಡೆ ಮಾಡುತ್ತಿರುವ ಮಾದರಿಯಲ್ಲೇ ಸೆ.26ರವರೆಗೆ ನಿತ್ಯ 3,500 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಬೆಂಗಳೂರು: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನಂತೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದು, ಇದರ ನಡುವೆ ರಾಜ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಬಿಡುಗಡೆ ಮಾಡುತ್ತಿರುವ ಮಾದರಿಯಲ್ಲೇ ಸೆ.26ರವರೆಗೆ ನಿತ್ಯ 3,500 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಕಾವೇರಿ ನದಿ ನೀರು ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಆಗಿರುವ ವಿಚಾರಣೆಯನ್ನು ಎಎಜಿ ಸಂಪುಟ ಸಭೆಯಲ್ಲಿ ವಿವರಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲಾಗುವುದು. ಸೆ.26ರವರೆಗೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುವುದು. 8000 ಕ್ಯುಸೆಕ್ಸ್ ಒಳಹರಿವು ಇದೆ. ಈಗಾಗಲೇ 3,000-3,500 ಕ್ಯುಸೆಕ್ಸ್ ನೀರು ಹರಿದು ಹೋಗುತ್ತಿದೆ. ಸೆ.26 ತನಕ ನೀರು ಬಿಡಲಾಗುತ್ತದೆ. ನಾವು ರೈತರ ಹಿತರಕ್ಷಣೆಯನ್ನೂ ಮಾಡುತ್ತೇವೆ. ಕುಡಿಯುವ ನೀರಿನ ರಕ್ಷಣೆಯನ್ನು ಮಾಡುತ್ತೇವೆ ಎಂದು ಹೇಳಿದರು.
ನಮ್ಮ ಸರ್ಕಾರ ರೈತರ ಪರವಾಗಿದೆ. ಬೇರೆ ಪಕ್ಷಗಳು ರಾಜಕೀಯ ಮಾಡಲಿ, ಆದರೆ ನಾವು ರೈತರ ಪರ ಕೆಲಸ ಮಾಡುತ್ತೇವೆ. ಗಡಿ ಭಾಗದ ರೈತರಿಗೆ ನೀರು ಬಿಡಲು ಬದ್ಧರಾಗಿದ್ದೇವೆ. ಕುಡಿಯುವ ನೀರಿನ ಅಗತ್ಯತೆಯ ಕುರಿತಂತೆಯೂ ಚಿಂತನೆ ನಡೆಸಲಾಗಿದೆ. ಈಗಾಗಲೇ ತಮಿಳುನಾಡಿಗೆ ಶೇ.34ರಷ್ಟು ನೀರನ್ನು ಬಿಡುಗಡೆ ಮಾಡಿದ್ದೇವೆಂದು ತಿಳಿಸಿದರು.
ಕಾವೇರಿ ವಿಚಾರವಾಗಿ ಮಾತುಕತೆ ನಡೆಸಲು ತಮಿಳುನಾಡು ಸರ್ಕಾರವನ್ನೂ ಆಹ್ವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪವಾಗಿದ್ದು, ತಮಿಳುನಾಡು ಸರ್ಕಾರ ಈ ಯೋಜನೆಯನ್ನು ನಿಲ್ಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಆದರೆ, ಗುರುವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೌಖಿಕವಾಗಿ ಮೇಕೆದಾಟಿಗೆ ಏಕೆ ಅಡ್ಡ ಬರುತ್ತೀರ. ಕರ್ನಾಟಕ ಅವರ ಭೂಮಿಯಲ್ಲಿ ಯೋಜನೆಯನ್ನು ಮಾಡುತ್ತಿದೆ ಎಂದು ತಮಿಳುನಾಡಿಗೆ ತಾಕೀತು ಮಾಡಿದ್ದಾರೆ.
ಹೀಗಾಗಿ ಮೇಕೆದಾಟು ಯೋಜನೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಪಡೆಯುವುದು ಸೇರಿ ಬೇಕಾದ ಇತರೆ ಕ್ರಮ ಕೈಗೊಳ್ಳಲಿದ್ದೇವೆ. ಯೋಜನೆಗೆ ಇನ್ನೂ ಪರಿಸರ ಅನುಮತಿ ಮತ್ತು ಇತರ ಅನುಮೋದನೆಗಳು ಸಿಗಬೇಕಿದೆ. ಈ ಯೋಜನೆಯು ಎರಡೂ ರಾಜ್ಯಗಳಿಗೆ ಮಹತ್ವದ್ದಾಗಿದೆ ಎಂಬುದನ್ನು ನ್ಯಾಯಾಲಯ ಅರಿತುಕೊಂಡಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


