ಬೆಂಗಳೂರಿನಲ್ಲಿ ಹಿರಿಯ ನಾಗರಿಕರ ಆರೈಕೆ ಕೇಂದ್ರದ ಅಗತ್ಯವಿದೆ: ಇಂಧನ ಸಚಿವ ಕೆಜೆ ಜಾರ್ಜ್
ತಲಘಟ್ಟಪುರ ಮೆಟ್ರೋ ನಿಲ್ದಾಣದ ಸಮೀಪ ಕನಕಪುರ ರಸ್ತೆಯಲ್ಲಿನ ಲಿಂಗಧೀರನಹಳ್ಳಿಯಲ್ಲಿ ಹಿರಿಯ ನಾಗರಿಕರಿಗಾಗಿ ನಿರ್ಮಿಸಲಾಗಿರುವ ಫೀಲ್ ಆಟ್ ಹೋಮ್ ಎರಡನೇ ಕೇಂದ್ರವನ್ನು ಇಂಧನ ಸಚಿವ ಕೆಜೆ ಜಾರ್ಜ್ ಉದ್ಘಾಟಿಸಿದರು.

ಬೆಂಗಳೂರು: ತಲಘಟ್ಟಪುರ ಮೆಟ್ರೋ ನಿಲ್ದಾಣದ ಸಮೀಪ ಕನಕಪುರ ರಸ್ತೆಯಲ್ಲಿನ ಲಿಂಗಧೀರನಹಳ್ಳಿಯಲ್ಲಿ ಹಿರಿಯ ನಾಗರಿಕರಿಗಾಗಿ ನಿರ್ಮಿಸಲಾಗಿರುವ ಫೀಲ್ ಆಟ್ ಹೋಮ್ ಎರಡನೇ ಕೇಂದ್ರವನ್ನು ಇಂಧನ ಸಚಿವ ಕೆಜೆ ಜಾರ್ಜ್ ಉದ್ಘಾಟಿಸಿದರು.
ಬಿಸಿ ಶಿವಣ್ಣ ಪ್ರತಿಷ್ಠಾನ(ಬಿಸಿಎಸ್ಎಫ್)ವು ಅಲ್ಮಾನ್ಸ್ ಐಟಿ ಸೊಲ್ಯುಷನ್ಸ್ ಎಲ್ಎಲ್ಪಿ ಸಂಸ್ಥೆ ಹಾಗೂ ಮತ್ತಿತ್ತರ ದಾನಿಗಳ ನೆರವಿನೊಂದಿಗೆ ಹೊಸ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಕೆಜೆ ಜಾರ್ಜ್, ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ವೃದ್ಧಿಸುತ್ತಿದ್ದೆ. ವಿಶ್ವಸಂಸ್ಥೆಯ ಇತ್ತೀಚಿನ ವರದಿಯೊಂದು 2036ರ ಹೊತ್ತಿಗೆ ಭಾರತದಲ್ಲಿನ ಹಿರಿಯ ನಾಗರಿಕರ ಜನಸಂಖ್ಯೆ ಶೇ.15ಕ್ಕೆ ಏರಲಿದೆ ಎಂದು ವರದಿ ನೀಡಿದೆ.
ನಗರೀಕರಣ ಮತ್ತು ಸಾಮಾಜಿಕ ಸಂರಚನೆಯಲ್ಲಿನ ಬದಲಾವಣೆಗಳಿಂದಾಗಿ ವೃದ್ಧರು ಮಾನಸಿಕ ತಿರಸ್ಕಾರ ಮತ್ತು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು ಪರದಾಡುವಂತೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಿರಿಯ ನಾಗರಿಕರು ತಮ್ಮ ಜೀವನವನ್ನು ಘನತೆ ಮತ್ತು ಒತ್ತಡ ಮುಕ್ತವಾಗಿ ಮುಂದುವರಿಸಲು ಅವರಿಗೆ ಸುರಕ್ಷಿತ ಮತ್ತು ಪೂರಕವಾದ ವಾತಾವರಣ ಕಲ್ಪಿಸಲು ಹಿರಿಯ ನಾಗರಿಕರ ವಾಸ್ತವ್ಯ ಮತ್ತು ಕಾಳಜಿ ಕೇಂದ್ರದ ಅಗತ್ಯವಿದೆ. ಫೀಲ್ ಆಟ್ ಹೋಮ್ನ ಈ ಆರೈಕೆ ಕೇಂದ್ರವು ಹಿರಿಯರ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡನ್ನು ಗಮನಿಸಿ ವೈವಿಧ್ಯಮಯವಾದ ಸೇವೆಗಳು ಮತ್ತು ಸೌಲಭ್ಯಗಳನ್ನು ನೀಡುತ್ತದೆ ಎಂದು ಹೇಳಿದರು.
ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಎಂ, ಶಿವರಾಜ್ ಮಾತನಾಡಿ, ಹಿರಿಯ ನಾಗರಿಕರ ಕಾಳಜಿ ಕೇಂದ್ರದ ವೃತ್ತಿಪರ ನೆರವು ಪಡೆದರೆ ನಮ್ಮಲ್ಲಿ ತಪ್ಪಿತಸ್ಥ ಭಾವನೆ ಬರುವಂತೆ ನಮ್ಮನ್ನು ರೂಪಿಸಲಾಗಿದೆ. ಜೀವಿತಾವಧಿ ಹೆಚ್ಚಿರುವುದು, ಬದಲಾಗುತ್ತಿರುವ ಕುಟುಂಬದ ವಿನ್ಯಾಸ, ಮಹಿಳೆಯರು ಉದ್ಯೋಗಕ್ಕೆ ಸೇರುತ್ತಿರುವುದು, ಮಕ್ಕಳು ಬೇರೆ ನಗರಗಳಿಗೆ, ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳುತ್ತಿರುವುದು ಮುಂತಾದ ಕಾರಣಗಳು ಆರೈಕೆ ಕೇಂದ್ರಗಳ ಅಗತ್ಯ ಹೆಚ್ಚುವಂತೆ ಮಾಡಿದೆ. ನಾವು ಆರೈಕೆ ಕೇಂದ್ರಗಳ ನೆರವು ಪಡೆಯುವ ಮೂಲಕ ನಮ್ಮ ಹಿರಿಯರನ್ನು ತೊರೆಯುತ್ತಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಾದ ಸಮಯವಿದು ಎಂದು ಹೇಳಿದರು.
ಹೊಸ ಕೇಂದ್ರದಲ್ಲಿ 54 ಹಿರಿಯ ನಾಗರಿಕರು ವಾಸ್ತವ್ಯ ಮಾಡಬಹುದು. ವಯೋಸಹಜ ಸಮಸ್ಯೆಗಳಿಗೆ ನೆರವು ನೀಡಲು ವೃತ್ತಿಪರ, ಸಮರ್ಪಣಾ ಭಾವದ ಆರೈಕೆಗಾರರು ಲಭ್ಯರಿದ್ದಾರೆ. ದಿನದ 24 ಗಂಟೆಯೂ ಪ್ಯಾರಾ ಮೆಡಿಕಲ್ ಸರ್ವಿಸ್, ಚಿಕಿತ್ಸಾ ಬೆಡ್ ಗಳು ಮತ್ತು ಪ್ರಾಥಮಿಕ ವೈದ್ಯಕೀಯ ಸೌಲಭ್ಯಗಳು ಮನೆಯಂತಹ ವಾತಾವರಣದಲ್ಲಿ ಸಿಗಲಿದೆ. ಫೀಲ್ ಆಟ್ ಹೋಮ್ ಎಂಬ ತನ್ನ ಹೆಸರಿಗೆ ಅನ್ವಯಿಸುವಂತೆ ಹಿರಿಯ ನಾಗರಿಕರಿಗೆ ಅವರ ಆಯ್ಕೆಗೆ ಅನುಗುಣವಾಗಿ ಡಯಟ್ ಆಹಾರ ನೀಡುವ ಸೌಕರ್ಯವಿದೆ. ಅದೇ ರೀತಿ ಅಲ್ಪಕಾಲೀನ ಮತ್ತು ದೀರ್ಘಾವಧಿ ವಾಸ್ತವ್ಯದ ಅವಕಾಶವಿದೆ. ಇದರ ಜೊತೆಗೆ ಸಮಗ್ರವಾದ ಡೇ ಕೇರ್ ಸೌಲಭ್ಯವನ್ನೂ ಸಹ ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


