ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 1,250 ರೂ. ಪ್ರೋತ್ಸಾಹ ಧನ: ರಾಜ್ಯ ಸರ್ಕಾರ ಘೋಷಣೆ
ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ನೆರವಿಗಾಗಿ ರಾಜ್ಯ ಸರ್ಕಾರ ಧಾವಿಸಿದ್ದು, ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 1,250 ರೂಪಾಯಿ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದೆ.

ಬೆಂಗಳೂರು: ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ನೆರವಿಗಾಗಿ ರಾಜ್ಯ ಸರ್ಕಾರ ಧಾವಿಸಿದ್ದು, ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 1,250 ರೂಪಾಯಿ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದೆ.
ಸದನ ಸಮಾವೇಶಗೊಂಡಾಗ ಕೊಬ್ಬರಿ ಬೆಲೆ ಕುಸಿತ ಚರ್ಚೆಗೆ ಸಂಬಂಧಿಸಿದಂತೆ ಉತ್ತರ ನೀಡಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು, ಇಂದಿನಿಂದ ಕೊಬ್ಬರಿ ಖರೀದಿಗೆ 1,250 ರೂ.ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು. ಇದೇ ವೇಳೆ ಈ ಹಿಂದೆ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಮಾರಾಟ ಮಾಡಿದವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರವು ಪ್ರತೀ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 11,750 ರೂ. ಬೆಂಬಲ ಬೆಲೆ ನಿಗದಿ ಪಡಿಸಿದೆ. ಇದರ ಜೊತೆಗೆ ರಾಜ್ಯಸರ್ಕಾರ 1,250 ರೂ. ಪ್ರೋತ್ಸಾಹ ಧನ ನೀಡಲಿದೆ ಎಂದು ಹೇಳಿದರು.
ನಿನ್ನೆಯವರೆಗೆ ಕೇಂದ್ರ ಸರ್ಕಾರದ ಏಜೆನ್ಸಿ ನ್ಯಾಪೆಡ್ ಮೂಲಕ ರಾಜ್ಯ ಏಜೆನ್ಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ 45,038 ಮೆಟ್ರಿಕ್ ಟನ್ ಉಂಡೆ ಕೊಬ್ಬರಿ ಖರೀದಿಸಲಾಗಿದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 6.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 26.06 ಲಕ್ಷ ಮೆಟ್ರಿಕ್ ಟನ್ ತೆಂಗು ಹಾಗೂ ಕೊಬ್ಬರಿ ಉತ್ಪಾದನೆಯಾಗಿದೆ. ಎಂಎಸ್ಸಿ ಅಡಿ ಕೊಬ್ಬರಿ ಖರೀದಿಗೆ 37,632 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನಿನ್ನೆಯವರೆಗೆ 31,641 ರೈತರು ಪ್ರಯೋಜನ ಪಡೆದಿದ್ದಾರೆ. ಜುಲೈ 26ರವರೆಗೂ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ ಎಂದರು.
ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 7,700 ರಿಂದ 8,020 ರೂ.ವರೆಗೆ ಮಾರಾಟವಾಗುತ್ತಿದೆ. ರಾಜ್ಯ ಸರ್ಕಾರವು ಕೊಬ್ಬರಿ ಖರೀದಿ ಪ್ರಮಾಣ ಹೆಚ್ಚಳ ಹಾಗೂ ಖರೀದಿ ಅವ ವಿಸ್ತರಣೆಗೆ ಕೇಂದ್ರ ಸರ್ಕಾರವನ್ನು ಕೋರಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಖರೀದಿ ಪ್ರಮಾಣ ಹೆಚ್ಚಳ ಹಾಗೂ ಅವ ವಿಸ್ತರಣೆಗೆ ಅನುಮತಿ ನೀಡಿದ ಬಳಿಕ ನೋಂದಾಯಿಸುವವರಿಗೂ ಪ್ರೋತ್ಸಾಹ ಧನ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದಿಂದ ಇದುವರೆಗೆ 1,000 ರೂ. ಮಾತ್ರ ಪ್ರೋತ್ಸಾಹ ಧನ ನೀಡಲಾಗಿತ್ತು. ಇದೇ ಮೊದಲ ಬಾರಿಗೆ 1,250 ರೂ. ಪ್ರೋತ್ಸಾಹ ಧನ ಕೊಡಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಪ್ರತೀ ಕ್ವಿಂಟಾಲ್ ಕೊಬ್ಬರಿಗೆ 16,500 ರೂ.ವರೆಗೆ ಹೆಚ್ಚಿಸಬೇಕು. ಉತ್ಪಾದನೆಯ ಶೇ.25 ರಿಂದ ಶೇ.50ರಷ್ಟು ಖರೀದಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


