ರಾಜ್ಯ

ನಟ ನಂದಮೂರಿ ತಾರಕರತ್ನ ಸ್ಥಿತಿ ಇನ್ನೂ ಗಂಭೀರ: ನಗರದ ನಾರಾಯಣ ಹೃದಯಾಲಯದಲ್ಲಿ ಮುಂದುವರೆದ ಚಿಕಿತ್ಸೆ

ಟಾಲಿವುಡ್ ಖ್ಯಾತ ನಟ ಹಾಗೂ ರಾಜಕಾರಣಿ ನಂದಮೂರಿ ತಾರಕರತ್ನಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ, ಅವರ ಸ್ಥಿತಿ ಇನ್ನೂ ಗಂಭೀರವಾಗಿದ್ದು, ನಗರದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ನಟ ನಂದಮೂರಿ ತಾರಕರತ್ನ ಸ್ಥಿತಿ ಇನ್ನೂ ಗಂಭೀರ: ನಗರದ ನಾರಾಯಣ ಹೃದಯಾಲಯದಲ್ಲಿ ಮುಂದುವರೆದ ಚಿಕಿತ್ಸೆ
ನಟ ಜೂನಿಯರ್ ಎನ್ ಟಿಆರ್ ಭಾನುವಾರ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರೊಂದಿಗೆ ಮಾತುಕತೆ ನಡೆಸಿದರು.
Published On :

ಬೆಂಗಳೂರು: ಟಾಲಿವುಡ್ ಖ್ಯಾತ ನಟ ಹಾಗೂ ರಾಜಕಾರಣಿ ನಂದಮೂರಿ ತಾರಕರತ್ನಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ, ಅವರ ಸ್ಥಿತಿ ಇನ್ನೂ ಗಂಭೀರವಾಗಿದ್ದು, ನಗರದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಜನವರಿ 27 ರಂದು ಚಿತ್ತೂರು ಸಮೀಪದ ಕುಪ್ಪನ್‌ನಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಟನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ಕುಪ್ಪಂನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಅವರ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಉನ್ನತ ಚಿಕಿತ್ಸೆಗಾಗಿ ಬೇರೆಡೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಇದರಂತೆ ಶನಿವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ರಸ್ತೆ ಮೂಲಕ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು.

ಈಗಲೂ ನಟನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ನಟ ನಂದಮೂರಿ ಬಾಲಕೃಷ್ಣ, ನಟ ಶಿವರಾಜ್ ಕುಮಾರ್, ಜೂನಿಯರ್ ಎನ್'ಟಿಆರ್ ಅವರು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರೊಂದಿಗೆ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದರು.

ಈ ನಡುವೆ ನೂರಾರು ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿದ್ದು, ನಟನ ಆರೋಗ್ಯದ ಸ್ಥಿತಿ ಕುರಿತು ತಿಳಿಯಲು ಕಾತುರದಿಂದ ಕಾಯುತ್ತಿರುವುದು ಭಾನುವಾರ ಕಂಡು ಬಂದಿತು.

ಆಸ್ಪತ್ರೆಯ ಆವರಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಹಾಗೂ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಜೂನಿಯರ್ ಎನ್ ಟಿಆರ್ , ನಮ್ಮ ತಾತ ಹಾಗೂ ಅಸಂಖ್ಯಾತ ಜನರ ಆಶೀರ್ವಾದ ತಾರಕ ರತ್ನ ಅವರ ಮೇಲಿದೆ. ಅವರ ಇಚ್ಛಾಶಕ್ತಿ ಮತ್ತು ಸುಧಾರಿತ ಚಿಕಿತ್ಸೆಯ ಜೊತೆಗೆ, ಈ ಪ್ರಸ್ತುತ ಪರಿಸ್ಥಿತಿಯಿಂದ ಹೊರಬರಲು ಅವರಿಗೆ ಅಭಿಮಾನಿಗಳಿಂದ ಪ್ರಾರ್ಥನೆಯ ಅಗತ್ಯವಿದೆ ಎಂದು ಹೇಳಿದರು.

ತಾರಕ ರತ್ನ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಆದರೆ ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿಸಿದರು.

ಇನ್ನು ಆಸ್ಪತ್ರೆಯು ನಟನ ಆರೋಗ್ಯದ ಕುರಿತು ಬುಲೆಟಿನ್ ಬಿಡುಗಡೆ ಮಾಡಿಲ್ಲವಾದರೂ, ನಟನ ಸ್ಥಿತಿ ಗಂಭೀರವಾಗಿದೆ ಎಂದು ನಾರಾಯಣ ಹೃದಯಾಲಯದ ಮೂಲಗಳು ಮಾಹಿತಿ ನೀಡಿವೆ.

ನಿಮ್ಹಾನ್ಸ್‌ನ ವೈದ್ಯರು ಕೂಡ ನಾರಾಯಣ ಹೃದಯಾಲಯದಲ್ಲಿ ತಮ್ಮ ಸಹವರ್ತಿಗಳೊಂದಿಗೆ ತಾರಕರತ್ನ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರಾಜ್ಯದಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲಾಗುತ್ತದೆ ಎಂದು ಡಾ.ಸುಧಾಕರ್ ಅವರು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.