ಕೈಗೆಟುಕುವ ದರದಲ್ಲಿ ಇಂಧನ ಒದಗಿಸಲು ಹಲವು ಕ್ರಮಗಳ ಕೈಗೊಳ್ಳಲಾಗಿದೆ: ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ
ದೇಶದಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಇಂಧನ ಒದಗುವಂತೆ ಮಾಡಲು ಹಲವು ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರು: ದೇಶದಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಇಂಧನ ಒದಗುವಂತೆ ಮಾಡಲು ಹಲವು ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸೋಮವಾರ ಹೇಳಿದ್ದಾರೆ.
ಇಂಧನ ಸಪ್ತಾಹ ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಪರಿಸರ ಸ್ನೇಹಿ ಇಂಧನ ಬಳಕೆಗೆ ಹೊಸ ವೇಗ ನೀಡುವ ಪ್ರಯತ್ನ ಇದಾಗಿದೆ ಎಂದು ಹೇಳಿದರು, ಅಲ್ಲದೆ, ಅಮೃತ ಕಾಲ ಮತ್ತು ವಸುಧೈವ ಕುಟುಂಬಕಂ ಆಶಯಗಳನ್ನು ಮತ್ತೊಮ್ಮೆ ವಿವರಿಸಿದರು.
ಭಾರತದಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಇಂಧನ ಒದಗುವಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 2030ರ ಒಳಗೆ ಭಾರತದಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಪರಿಶ್ರಮ ಹಾಕುತ್ತಿದೆ. ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸರ ಸ್ನೇಹಿ ಇಂಧನಕ್ಕೆ ನಾವು ಆದ್ಯತೆ ನೀಡಿದ್ದೇವೆ. ಆದರೆ ಅಭಿವೃದ್ಧಿಯ ವಿಚಾರದಲ್ಲಿ ರಾಜಿಯಾಗುತ್ತಿಲ್ಲ ಎಂದು ವಿವರಿಸಿದರು.
ಸೂರ್ಯನ ಬೆಳಕಿನಿಂದ ಅಡುಗೆ ಮಾಡುವ ಸೋಲಾರ್ ಕುಕ್ಟಾಪ್ಗಳ ಬಳಕೆಗೆ ಇಂದು ಚಾಲನೆ ಸಿಗಲಿದೆ. ಈ ತಂತ್ರಜ್ಞಾನವನ್ನು ಭಾರತ ಹಂಚಿಕೊಳ್ಳಲಿದೆ. ಇದನ್ನು ಯಥಾವತ್ತಾಗಿ ಏಷ್ಯಾದ ಇತರ ದೇಶಗಳೂ ಬಳಸಬಹುದಾಗಿದೆ. ತ್ಯಾಜ್ಯ ಪೆಟ್ ಬಾಟಲಿಗಳಿಂದ ಹಲವು ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಪರಿಸರ ಮಾಲಿನ್ಯ ತಗ್ಗಿಸಲು ಇದು ನೆರವಾಗಲಿದೆ ಎಂದು ಹೇಳಿದರು.
ಜೈವಿಕ ಇಂಧನಕ್ಕೆ ಭಾರತ ಸರ್ಕಾರವು ಉತ್ತೇಜನ ನೀಡುತ್ತಿದೆ. ಕೆಲವು ಪೆಟ್ರೋಲ್ ಪಂಪ್ಗಳಲ್ಲಿ ಜೈವಿಕ ಇಂಧನ ಬೆರೆತ ಪೆಟ್ರೋಲಿಯಂ ಉತ್ಪನ್ನಗಳು ಲಭ್ಯವಾಗಲಿವೆ. ಇಂದು ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಹೊಸ ತಂತ್ರಜ್ಞಾನದ ಮೂಲಕ ನಿರ್ಮಾಣವಾದ ಪರಿಸರ ಸ್ನೇಹಿ ವಾಹನಗಳಿಗೂ ಪ್ರಧಾನಿ ಇಂದು ಹಸಿರು ನಿಶಾನೆ ತೋರಿಸಲಿದ್ದಾರೆ.
ಪರಿಸರ ಮಾಲಿನ್ಯ ತಗ್ಗಿಸುವುದನ್ನು ನಮ್ಮ ಸರ್ಕಾರ ಆದ್ಯತೆಯಾಗಿ ಪರಿಗಣಿಸಿದೆ. ಹಸಿರು ಇಂಧನದ ಬಗ್ಗೆ ಬಜೆಟ್ ಭಾಷಣದಲ್ಲಿಯೂ ಪ್ರಸ್ತಾಪಿಸಲಾಗಿತ್ತು. ದೊಡ್ಡ ಮೊತ್ತದ ಅನುದಾನವನ್ನು ಈ ಕ್ಷೇತ್ರಕ್ಕೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಶೂನ್ಯ ಇಂಗಾಲ ಹೊರಸೂಸುವಿಕೆ ಆಶಯ ಸಾಕಾರಗೊಳಿಸಲು ನಾವು ಶ್ರಮಿಸಬೇಕಿದೆ. ಅದು ನಮ್ಮ ಆದ್ಯತೆಯಾಗಬೇಕು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


