ರಾಜ್ಯ

ಸಾತನೂರು ಭೀಕರ ರಸ್ತೆ ಅಪಘಾತ ಪ್ರಕರಣ: ಮೃತಪಟ್ಟ 6 ಮಂದಿ ಪೈಕಿ ಇಬ್ಬರು ವಿಧಾನಸೌಧ ಸಿಬ್ಬಂದಿಗಳು!

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಕ್ವಾಲೀಸ್ ಕಾರಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟು, ಬಸ್ಸಿನಲ್ಲಿದ್ದ 18 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಮ್ಮಾಳೆ ಗ್ರಾಮದ ಬಳಿ ನಡೆದಿದೆ.

ಸಾತನೂರು ಭೀಕರ ರಸ್ತೆ ಅಪಘಾತ ಪ್ರಕರಣ: ಮೃತಪಟ್ಟ 6 ಮಂದಿ ಪೈಕಿ ಇಬ್ಬರು ವಿಧಾನಸೌಧ ಸಿಬ್ಬಂದಿಗಳು!
ಸಂಗ್ರಹ ಚಿತ್ರ
Published On :

ಕನಕಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಕ್ವಾಲೀಸ್ ಕಾರಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟು, ಬಸ್ಸಿನಲ್ಲಿದ್ದ 18 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಮ್ಮಾಳೆ ಗ್ರಾಮದ ಬಳಿ ಕನಕಪುರ-ಮಳವಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಕಾರಿನಲ್ಲಿದ್ದವರು ಮಹದೇಶ್ವರ ಬೆಟ್ಟದಿಂದ ಹಲಗೂರು ಮಾರ್ಗವಾಗಿ ಸಂಜೆ 4.45ರ ಸುಮಾರಿಗೆ ಕನಕಪುರ ಕಡೆಗೆ ವಾಪಸ್ಸಾಗುತ್ತಿದ್ದರು. ಕನಕಪುರದಿಂದ ಮಳವಳ್ಳಿ ಕಡೆಗೆ ಸಾರಿಗೆ ಬಸ್ ಹೊರಟಿತ್ತು.

ಕಾರಿನ ಚಾಲಕ ಕಾರನ್ನು ವೇಗವಾಗಿ ಚಾಲನೆ ಮಾಡುತ್ತಿದ್ದ. ಈ ವೇಳೆ ನಿಯಂತ್ರಣ ಕಳೆದುಕೊಂಡು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಆನೇಕಲ್ ತಾಲೂಕಿನ ಚಂದಾಪುರ ಮೂಲಕ ನಾಗೇಶ್, ಪುಟ್ಟರಾಜು, ಜ್ಯೋತಿರ್ಲಿಂಗ, ಗೋವಿಂದ, ಶಾಂತ ಕುಮಾರ್ ಮತ್ತು ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಸ್ಸಿನಲ್ಲಿದ್ದ 18 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಹಾಗೂ ಬಸ್‌ ಮುಖಾಮುಖಿ ಡಿಕ್ಕಿಯಿಂದಾಗಿ ಕಾರಿನ ಅರ್ಧ ಭಾಗ ಬಸ್‌ನ ಅಡಿಗೆ ತೂರಿಕೊಂಡು ಹೋಗಿತ್ತು. ಈ ವೇಳೆ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟರು.

ಸ್ಥಳಕ್ಕೆ ಜೆಸಿಬಿ ಹಾಗೂ ಕ್ರೇನ್‌ಗಳನ್ನು ತರಿಸಲಾಯಿತು. ಕಾರಿನ ಭಾಗಗಳು ಸಂಪೂರ್ಣ ನಜ್ಜು ಗುಜ್ಜಾಗಿದ್ದರಿಂದ ಮೃತ ದೇಹಗಳನ್ನು ಹೊರಗೆ ತೆಗೆಯಲು ಕಷ್ಟವಾಗುತ್ತಿತ್ತುಯ ಒಂದು ಕಡೆ ಜೆಸಿಬಿಯಿಂದ ಕಾರಿನ ಕೆಲ ಭಾಗಗಳನ್ನು ಹಿಡಿದುಕೊಂಡು, ಕ್ರೇನ್‌ನಿಂದ ಇನ್ನೊಂದು ಭಾಗದಲ್ಲಿ ಹಗ್ಗವನ್ನು ಕಟ್ಟಿ ಎಳೆಯಲಾಗುತ್ತಿತ್ತು. ಹೀಗೆ, ಕಾರಿನ ನಜ್ಜುಗುಜ್ಜಾದ ಭಾಗವನ್ನು ಅಗಲಿಸಿ, ಪ್ರತ್ಯೇಕಗೊಳಿಸಿ ಮೃತ ದೇಹಗಳನ್ನು ಹೊರಗೆ ತೆಗೆಯಲಾಯಿತು.

ಘಟನೆಯಲ್ಲಿ ಮೃತಪಟ್ಟ ಶಾಂತಕುಮಾರ್ ಮತ್ತು ನಾಗೇಶ್ ಅವರು ಶಾಸಕರ ಭವನದಲ್ಲಿ ನೌಕರರಾಗಿದ್ದು, ಕುಮಾರ್ ಅವರು ಅಲ್ಲಿಯೇ ಲಾಂಡ್ರಿ ಕೆಲಸ ಮಾಡುತ್ತಿದ್ದರು. ಗೋವಿಂದ ಅವರು ಅಲಂಕಾರ್ ಪ್ಲಾಜಾದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು, ಪುಟ್ಟರಾಜು ಆಟೊ ಚಾಲಕರಾಗಿದ್ದಾರೆಂದು ತಿಳಿದುಬಂದಿದೆ.

ಘಟನೆಯಲ್ಲಿ ಕನಕಪುರ ಡಿಪೊದ ಬಸ್ ಚಾಲಕ ಬಿ.ಟಿ. ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ. ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಗಳ ಪ್ರಕಾರ ಕಾರು ಚಾಲಕನ ಬೇಜವಾಬ್ದಾರಿತನದ ಚಾಲನೆಯೇ ಘಟನೆಗೆ ಕಾರಣ ಎಂದು ತಿಳಿಸಿದ್ದಾರೆಂದು ಐಜಿಪಿ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.

ರಾಮನಗರ ವಿಭಾಗದ ಕನಕಪುರ ಡಿಪೋದ ಬಸ್ ಕನಕಪುರದಿಂದ ಹಲಗೂರು ಕಡೆಗೆ ಸಾಗುತ್ತಿತ್ತು. ಕೆಮ್ಮಾಳೆ ಗೇಟ್ ಬಳಿ, ಬಸ್ ಚಾಲಕ ಬಿಟಿ ನಾಗರಾಜ್ ಅವರು ಚಾಲಕನೊಬ್ಬ ಕಾರನ್ನು ನಿರ್ಲಕ್ಷ್ಯದ ರೀತಿಯಲ್ಲಿ ಚಲಾಯಿಸುತ್ತಿರುವುದನ್ನು ಗಮನಿಸಿದ್ದರು. ಈ ವೇಳೆ ಆತನ ಕಾರನ್ನು ನಿಯಂತ್ರಿಸುವ ಯತ್ನ ನಡೆಸಿದ್ದರು. ಆದರೆ, ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಸಾರಿಗೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಸಂಬಂಧ ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.