ಹರಕೆ ಹೊತ್ತು ಕಳ್ಳತನ: ಮಹಿಳೆಯರ ಸರ ಕದ್ದು ಮಲೆಮಹದೇಶ್ವರ ಬೆಟ್ಟದಲ್ಲಿ ಮುಡಿಕೊಟ್ಟ ಇಬ್ಬರು ಖದೀಮರ ಬಂಧನ
ನಗರದಲ್ಲಿ ಮಹಿಳೆಯರ ಸರಗಳ್ಳತನ ಮಾಡಿ ಬಳಿಕ ಮಲೆಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ತೆರಳಿ ಮುಡಿಕೊಟ್ಟು ಹರಕೆ ತೀರಿಸಿದ್ದ ಇಬ್ಬರು ಸರಗಳ್ಳರನ್ನು ಗಿರಿನಗರ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ನಗರದಲ್ಲಿ ಮಹಿಳೆಯರ ಸರಗಳ್ಳತನ ಮಾಡಿ ಬಳಿಕ ಮಲೆಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ತೆರಳಿ ಮುಡಿಕೊಟ್ಟು ಹರಕೆ ತೀರಿಸಿದ್ದ ಇಬ್ಬರು ಸರಗಳ್ಳರನ್ನು ಗಿರಿನಗರ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಮಂಜುುನಾಥ ಮತ್ತು ಉತ್ತರಹಳ್ಳಿಯ ಯತೀಶ್ ಬಂಧಿತ ಆರೋಪಿಗಳು. ಆರೋಪಿಗಳಿಂದ ರೂ.3.4 ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಗಿರಿನಗರ ನಿವಾಸಿ ಶ್ಯಾಮಲಾ ಎಂಬುವವರ ಮೇಲೆ ನಿಗಾ ಇಟ್ಟಿದ್ದ ಆರೋಪಿಗಳು, ಆಗಸ್ಟ್ 13ರಂದು ವಾಕಿಂಗ್ ಹೋದ ಸಂದರ್ಭದಲ್ಲಿ ಬೈಕ್ ಬಂದಿದ್ದ ದುಷ್ಕರ್ಮಗಳು, ಚಿನ್ನದ ಸರ ಕಸಿದು ಪರಾರಿಯಾಗಿದ್ದರು. ಬಳಿಕ ತಮ್ಮ ಕಳ್ಳತನ ಯಶಸ್ವಿಯಾದ ಹಿನ್ನೆಲೆಯಲ್ಲಿ ಆರೋಪಿಗಳು ಹರಕೆಯಂತೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ, ಮುಡಿ ಕೊಟ್ಟು. ವಿಶೇಷ ಪೂಜೆ ಸಲ್ಲಿಸಿದ್ದರು. ಇಬ್ಬರೂ ಆರೋಪಿಗಳ ವಿರುದ್ಧ ಕಳ್ಳತನ ಪ್ರಕರಣಗಳಿವೆ. ಅಪರಾಧ ಪ್ರಕರಣಗಳಲ್ಲಿ ಪರಿಚಯಗೊಂಡಿದ್ದ ಇಬ್ಬರು, ನಂತರ ಕೈಜೋಡಿಸಿಕೊಂಡು ಮತ್ತಷ್ಟು ಅಪರಾಧ ಕೃತ್ಯಗಳಿಗೆ ಕೈಹಾಕಿದ್ದರು. ಅಪರಾಧದ ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುವುದನ್ನು ರೂಢಿಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೃತ್ಯದ ಬಗ್ಗೆ ಸುಳಿವು ಸಿಗಬಾರದೆಂದು ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿದ್ದರು. ಮಹಿಳೆಯ ಸರ ಕಿತ್ತುಕೊಂಡು ಹಲವೆಡೆ ಸುತ್ತಾಡಿದ್ದ ಅವರು, ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿದ್ದರು. ಅಲ್ಲಿಂದ 2 ಕಿ.ಮೀ ನಡೆದುಕೊಂಡು ನಿರ್ಜನ ಪ್ರದೇಶದ ಮೂಲಕ ಪರಾರಿಯಾಗಿದ್ದರು. ಮೊಬೈಲ್ ಸಹ ಬಳಕೆ ಮಾಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಸರ ಕಳೆದುಕೊಂಡ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಸುಳಿವು ಸಿಕ್ಕಿತ್ತು. ಈ ಸುಳಿವು ಆಧರಿಸಿ ನಿಗಾವಹಿಸಿದ್ದ ಪೊಲೀಸರು, ಆರೋಪಿಗಳು ಹರಕೆ ತೀರಿಸಿ ನಗರಕ್ಕೆ ಬರುತ್ತಿದ್ದಂತೆ ಬಂಧನಕ್ಕೊಳಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


