ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಒದಗಿಸಲು 132 ಕೋಟಿ ರೂ. ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ
ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಗಳನ್ನು ಒದಗಿಸಲು 132 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರು: ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಗಳನ್ನು ಒದಗಿಸಲು 132 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಶಾಲಾ ಮಕ್ಕಳಿಗೆ ಒಂದು ಜೊತೆ ಕಪ್ಪು ಶೂ ಮತ್ತು ಎರಡು ಬಿಳಿ ಸಾಕ್ಸ್ ಗಳನ್ನು ನೀಡಲಾಗುವುದು ಎಂದು ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ ತಿಳಿಸಿದರು. ಸುಮಾರು 43 ಲಕ್ಷದ 37 ಸಾವಿರ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಗಳನ್ನು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ರಾಜ್ಯದ ವಿವಿಧ ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಒದಗಿಸುವ ಹೊಸ ಉದ್ಯೋಗ ನೀತಿಗೆ ಸಂಪುಟ ಅನುಮೋದನೆ ನೀಡಿದೆ. ಕೈಗಾರಿಕೆಗಳ ಬಂಡವಾಳ ಹೂಡಿಕೆ ಆಧಾರದ ಮೇಲೆ ಕನ್ನಡಿಗರಿಗೆ ಇಂತಿಷ್ಟೇ ಹುದ್ದೆಗಳನ್ನು ನೀಡಬೇಕು ಎಂಬ ಅಂಶಗಳನ್ನು ಹೊಸ ಉದ್ಯೋಗ ನೀತಿಯಲ್ಲಿ ಅಳವಡಿಸಲಾಗಿದೆ. ಇದರಿಂದ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುತ್ತವೆ. ಉದ್ಯಮಗಳಿಗೆ ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆಯೇ ಇಲ್ಲವೇ ಎಂಬ ಬಗ್ಗೆಯೂ ಕೈಗಾರಿಕಾ ಇಲಾಖೆ ನಿಗಾ ವಹಿಸಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸನ್ನಡತೆ ಕೈದಿಗಳ ಬಿಡುಗಡೆಗೆ ಇದ್ದ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಮಕ್ಕಳು, ಶಿಶುಗಳು, ಮಹಿಳೆಯರ ಮೇಲೆ ಅಪರಾಧ ಪ್ರಕರಣ ಎಸಗಿರುವವರನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡದಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಂಪುಟ ತೀರ್ಮಾನಿಸಿದೆ. ಹಾಗೆಯೇ ಒದಕ್ಕಿಂತ ಹೆಚ್ಚು ಕೊಲೆ ಪ್ರಕರಣದ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡದಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿರುವುದಾಗಿ ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಬಹು ಮಹಡಿ ಕಟ್ಟಡ ಯೋಜನೆಯಡಿ ವಸತಿ ಇಲಾಖೆ ನಿರ್ಮಿಸಿರುವ 2 ಬೆಡ್ ರೂಂಗಳ ಅಪಾರ್ಟ್ ಮೆಂಟ್ ಗಳಿಗೆ ನಿಗದಿಪಡಿಸಲಾಗಿದ್ದ 15 ಲಕ್ಷ ರೂ. ಮೊತ್ತವನ್ನು 14 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಇದರಿಂದ ಈ ಮನೆಗಳಿಗೆ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆಯಿದೆ. ಮೈಸೂರಿನ ವಿಮಾನ ನಿಲ್ದಾಣದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


