ಮೇಕೆದಾಟು: ತಮಿಳುನಾಡಿಗೆ ಹಿನ್ನಡೆ, ತುರ್ತು ವಿಚಾರಣೆಗೆ 'ಸುಪ್ರೀಂ' ನಕಾರ, ವಿಚಾರಣೆ ಮುಂದೂಡಿಕೆ!
ಮೇಕೆದಾಟು ಯೋಜನೆ ವಿಚಾರದಲ್ಲಿ ಮತ್ತೆ ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ತುರ್ತು ವಿಚಾರಣೆಗೆ ನಕಾರಾ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿದೆ.

ನವದೆಹಲಿ: ಮೇಕೆದಾಟು ಯೋಜನೆ ವಿಚಾರದಲ್ಲಿ ಮತ್ತೆ ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ತುರ್ತು ವಿಚಾರಣೆಗೆ ನಕಾರಾ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿದೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ಣಯ ಪರಿಗಣಿಸಬಾರದು ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಅರ್ಜಿಯ ತುರ್ತು ವಿಚಾರಣೆಗೆ ಕೋರ್ಟ್ ನಿರಾಕರಿಸಿದ್ದು, ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿದೆ.
ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನೋಟಿಸ್ ನೀಡಿರುವ ಸುಪ್ರೀಂಕೋರ್ಟ್, ವಿಚಾರಣೆ ಮುಗಿಯುವವರೆಗೆ ಚರ್ಚೆ ನಡೆಸದಂತೆ CWMAಗೆ ಕೇಳಲು 2 ರಾಜ್ಯಗಳಿಗೂ ಸೂಚಿಸಿದೆ. ಇನ್ನು ಕಳೆದ ವಾರ ತಮಿಳುನಾಡು ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚಿಸದಂತೆ ಸೂಚಿಸಲು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು.
ಕರ್ನಾಟಕ ಸರ್ಕಾರದ ಪ್ರಸ್ತಾಪಿತ ಮೇಕೆದಾಟು ಯೋಜನೆಯ ಯೋಜನಾ ವರದಿಗೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಯಾವುದೇ ಆದೇಶ ಅಥವಾ ನಿರ್ದೇಶನವನ್ನು ನೀಡದಂತೆ ತಮಿಳುನಾಡು ಸರ್ಕಾರ ಕಳೆದ ವಾರ ಅರ್ಜಿ ಸಲ್ಲಿಸಿತ್ತು. ಅರ್ಜಿ ಕುರಿತು ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿತ್ತು.
ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ಸಭೆ ಸೇರಲಿದೆ. ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ವಕೀಲರೊಂದಿಗೆ ಚರ್ಚೆ ನಡೆಸಿದ್ದರು. "ನ್ಯಾಯಾಲಯದಲ್ಲಿ ನಮ್ಮ ವಾದಗಳು ನ್ಯಾಯೋಚಿತವಾಗಿವೆ ಮತ್ತು ನ್ಯಾಯಾಲಯದಿಂದ ಅನುಕೂಲಕರ ಆದೇಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ಹೇಳಿದ್ದರು.
ದೊರೈಮುರುಗನ್ ಜೂನ್ 22 ರಂದು ದೆಹಲಿಗೆ ಪಕ್ಷದ ನಾಯಕರ ನಿಯೋಗದೊಂದಿಗೆ ತೆರಳಿದ್ದರು. ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿರುವುದರಿಂದ ಅಣೆಕಟ್ಟು ಯೋಜನೆ ಕುರಿತು ಯಾವುದೇ ಚರ್ಚೆಗೆ ಅವಕಾಶ ನೀಡದಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದರು.
ತಮಿಳುನಾಡು ನಡೆಗೆ ಸಿಎಂ ಬಸವರಾಜ ಬೊಮ್ಮಾಯಿ ಖಂಡನೆ
ಮೇಕೆದಾಟು ಯೋಜನೆಗೆ ತಡೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ನಡೆಗೆ ಸಿಎಂ ಬಸವರಾಜ ಬೊಮ್ಮಾಯಿ ಖಂಡನೆ ವ್ಯಕ್ತಪಡಿಸಿದ್ದರು. ಕೇಂದ್ರಕ್ಕೆ ಸೂಚನೆ ನೀಡುವಂತೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ಸುಪ್ರೀಂಗೆ ತಮಿಳುನಾಡು ಸಲ್ಲಿಸಿರುವ ಅರ್ಜಿ ಸರಿಯಾದ ಕ್ರಮವಲ್ಲ. ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಕೊಟ್ಟಿತ್ತು. ನೋಟಿಸ್ಗೆ ನಾವು ಸಮರ್ಥವಾದ ಉತ್ತರ ಕೊಟ್ಟಿದ್ದೇವೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರಾಧಿಕಾರ ರಚಿಸಲಾಗಿದೆ. ಕಾವೇರಿ ನದಿ ನೀರು ಹಂಚಿಕೆಗೆ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


