ರಾಜ್ಯ

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಕರ್ನಾಟಕದಲ್ಲಿ ಸಾಮಾನ್ಯವಾಗಿ ವಾರ್ಷಿಕ ಸುಮಾರು 13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಎರಡೂ ಜಲಾನಯನ ಪ್ರದೇಶಗಳಲ್ಲಿ ತೀವ್ರ ಬರ ಆವರಿಸಿರುವುದರಿಂದ ಭತ್ತದ ಬಿತ್ತನೆ ಪ್ರದೇಶ 4 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!
ಬಾಸ್ಮತಿ ಅಕ್ಕಿ — online desk
Published On :

ಬೆಂಗಳೂರು: ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರಗಾಲದ ಬಿಸಿ ಇದೀಗ ನೇರವಾಗಿ ಜನರಿಗೆ ತಟ್ಟುತ್ತಿದೆ. ಮುಂಗಾರು ಮಳೆಯ ತೀವ್ರ ಕೊರತೆ ಮತ್ತು ಜಲಾಶಯಗಳು ಬತ್ತಿ ಹೋಗಿರುವುದರಿಂದ ರಾಜ್ಯದಲ್ಲಿ ಅಕ್ಕಿ ಉತ್ಪಾದನೆ ಕುಸಿದಿದ್ದು, ಕಳೆದ ಮೂರು ತಿಂಗಳುಗಳಲ್ಲಿ ಪ್ರಮುಖ ಅಕ್ಕಿ ತಳಿಗಳ ಬೆಲೆ ಪ್ರತಿ ಕೆಜಿಗೆ ರೂ.25 ರಿಂದ ರೂ.30 ರಷ್ಟು ಭಾರಿ ಏರಿಕೆ ಕಂಡಿದೆ.

ದೇಶದ ಪ್ರಮುಖ ಭತ್ತ ಉತ್ಪಾದಕ ರಾಜ್ಯಗಳಲ್ಲೊಂದಾದ ಕರ್ನಾಟಕದಲ್ಲಿ ಈ ಬಾರಿ ಉತ್ಪಾದನೆ ಕುಸಿಯುವ ನಿರೀಕ್ಷೆಯಿದೆ. ಜೂನ್‌ನಲ್ಲಿ ಭತ್ತದ ಬಿತ್ತನೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ನವೆಂಬರ್‌ನಲ್ಲಿ ಕೊಯ್ಲು ಆರಂಭವಾಗಲಿದೆ. ಹೀಗಾಗಿ ಮುಂಬರುವ ತಿಂಗಳಲ್ಲಿ ಅಕ್ಕಿಯ ಪೂರೈಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹಾಗೂ ಉದ್ಯಮ ತಜ್ಞರು ಅಂದಾಜಿಸಿದ್ದಾರೆ.

ತುಂಗಭದ್ರಾ ಮತ್ತು ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ಭತ್ತವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಮೈಸೂರು, ಮಂಡ್ಯ ಸೇರಿದಂತೆ ಮಲೆನಾಡಿನ ಕೆಲವು ಭಾಗಗಳಲ್ಲಿ ಭತ್ತದ ಕೃಷಿ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಸಾಮಾನ್ಯವಾಗಿ ವಾರ್ಷಿಕ ಸುಮಾರು 13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಎರಡೂ ಜಲಾನಯನ ಪ್ರದೇಶಗಳಲ್ಲಿ ತೀವ್ರ ಬರ ಆವರಿಸಿರುವುದರಿಂದ ಭತ್ತದ ಬಿತ್ತನೆ ಪ್ರದೇಶ 4 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಸಗಟು ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ಬೆಲೆ ಕೆಜಿಗೆ ರೂ.50ರಿಂದ ರೂ.75-80ಕ್ಕೆ ಏರಿಕೆಯಾಗಿದೆ. ಇದೇ ರೀತಿ ಕೆಜಿಗೆ ಸುಮಾರು ರೂ.75ರಷ್ಟಿದ್ದ ಕೋಲಂ ಅಕ್ಕಿಯ ಬೆಲೆ ಇದೀಗ ರೂ.100ರ ಸಮೀಪಕ್ಕೆ ತಲುಪಿದೆ.

ಕೃಷಿ ತಂತ್ರಜ್ಞಾನಿಗಳ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ಮಾಜಿ ಕೃಷಿ ಸಲಹೆಗಾರ ಎ.ಬಿ. ಪಾಟೀಲ್ ಮಾತನಾಡಿ, ಭತ್ತವು ಅತಿ ಹೆಚ್ಚು ನೀರು ಬಳಕೆಯಾಗುವ ಬೆಳೆಗಳಲ್ಲಿ ಒಂದಾಗಿದೆ. ಒಂದು ಕೆಜಿ ಭತ್ತ ಉತ್ಪಾದಿಸಲು 3,500ರಿಂದ 4,000 ಲೀಟರ್‌ವರೆಗೆ ನೀರು ಬೇಕಾಗುತ್ತದೆ. ಅಣೆಕಟ್ಟುಗಳಲ್ಲಿ ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಲುವೆಗಳ ಕೊನೆಯ ಭಾಗದಲ್ಲಿರುವ ರೈತರಿಗೆ ನೀರು ಸಿಗದ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ರೈತರು ಭತ್ತದ ಬದಲು ಬೇಳೆಕಾಳು, ಎಣ್ಣೆಕಾಳು ಅಥವಾ ರಾಗಿ ಬೆಳೆಗಳನ್ನು ಬೆಳೆಯುವುದು ಉತ್ತಮ ಎಂದು ಸಲಹೆ ನೀಡಿದರು.

ಕೃಷಿ ಹವಾಮಾನ ತಜ್ಞ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಎಂ.ಬಿ. ರಾಜೇಗೌಡ ಅವರು ಮಾತನಾಡಿ, ಕರ್ನಾಟಕದಲ್ಲಿ ಸಾಮಾನ್ಯವಾಗಿ ಜೂನ್-ಜುಲೈನಲ್ಲಿ ಭತ್ತದ ಬಿತ್ತನೆ ನಡೆಯುತ್ತದೆ. ಅಕ್ಟೋಬರ್‌ನಿಂದ ನವೆಂಬರ್‌ವರೆಗೆ, ಕೆಲವೊಮ್ಮೆ ಡಿಸೆಂಬರ್‌ವರೆಗೂ ಕೊಯ್ಲು ನಡೆಯುತ್ತದೆ. ಆದರೆ ಈ ಬಾರಿ ಬಿತ್ತನೆ ಪ್ರಮಾಣ ತೀವ್ರವಾಗಿ ಕುಸಿದಿದೆ ಎಂದು ತಿಳಿಸಿದರು.

ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಕಾರಣ ಅಣೆಕಟ್ಟುಗಳು ಬರಿದಾಗುತ್ತಿವೆ. ಕೃಷ್ಣರಾಜ ಸಾಗರ ಜಲಾಶಯದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸರ್ಕಾರ ಆದ್ಯತೆ ನೀಡಿರುವುದರಿಂದ ನೀರಾವರಿ ಕಾಲುವೆಗಳಿಗೆ ನೀರು ಹರಿಸುವ ಸಾಧ್ಯತೆ ಇಲ್ಲ. ಹೀಗಾಗಿ ರೈತರು ಭತ್ತದ ಬಿತ್ತನೆ ಕೈಗೊಂಡಿಲ್ಲ ಎಂದು ಹೇಳಿದರು.

ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ರೈತರು ಸಾಮಾನ್ಯ ವರ್ಷಗಳಲ್ಲಿ ಎರಡು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಈ ಬಾರಿ ಪರಿಸ್ಥಿತಿ ಅತ್ಯಂತ ಹದಗೆಟ್ಟಿರುವುದರಿಂದ ಒಂದೇ ಒಂದು ಬೆಳೆಯನ್ನೂ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಈ ಭಾಗದಲ್ಲಿ ಏಪ್ರಿಲ್-ಮೇ ಹಾಗೂ ಅಕ್ಟೋಬರ್-ನವೆಂಬರ್‌ನಲ್ಲಿ ಭತ್ತದ ಕೊಯ್ಲು ನಡೆಯುತ್ತದೆ. ಈ ಎರಡು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ನೈಋತ್ಯ ಮುಂಗಾರು ಉತ್ತಮವಾಗಿದ್ದರೆ ಈಶಾನ್ಯ ಮುಂಗಾರು ಕೈಕೊಡುತ್ತದೆ, ಇಲ್ಲವೇ ಇದಕ್ಕೆ ವಿರುದ್ಧವಾಗಿರುತ್ತದೆ. ಹೀಗಾಗಿ ಕನಿಷ್ಠ ಒಂದು ಹಂಗಾಮಿನಲ್ಲಾದರೂ ರೈತರಿಗೆ ಉತ್ತಮ ಬೆಳೆ ಪಡೆಯುವ ಅವಕಾಶ ಸಿಗುತ್ತಿತ್ತು. ಆದರೆ, ಈ ಬಾರಿ ಎಲ್‌ನಿನೊ ಪರಿಣಾಮದಿಂದ ಬಿತ್ತನೆ, ಕೃಷಿ ಚಟುವಟಿಕೆ ಹಾಗೂ ಉತ್ಪಾದನೆ ಮೇಲೆ ಭಾರೀ ಹೊಡೆತ ಬಿದ್ದಿದೆ ಎಂದು ರೈತರು ಹೇಳಿದ್ದಾರೆ.

ಅಕ್ಕಿ ಗಿರಣಿದಾರರು ಕೂಡ ಭತ್ತದ ಖರೀದಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆಲವು ತಿಂಗಳ ಹಿಂದೆ ಕ್ವಿಂಟಲ್‌ಗೆ ರೂ.3,000 ಇದ್ದ ಭತ್ತದ ಬೆಲೆ ಈಗ ರೂ.4,400ಕ್ಕೆ ಏರಿಕೆಯಾಗಿದೆ. ಈಗಿನ ನಮ್ಮ ಖರೀದಿ ಬೆಲೆ ಈ ಹಿಂದೆ ನಾವು ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಬೆಲೆಗೆ ಸಮನಾಗಿದೆ ಎಂದು ಗಿರಣಿ ಮಾಲೀಕರೊಬ್ಬರು ಹೇಳಿದ್ದಾರೆ.

ಈ ಹಿಂದೆ ಅವರು ವ್ಯಾಪಾರಿಗಳಿಗೆ ಕ್ವಿಂಟಲ್‌ಗೆ ರೂ.4,600ರಿಂದ ರೂ.5,300ಕ್ಕೆ ಅಕ್ಕಿ ಮಾರಾಟ ಮಾಡುತ್ತಿದ್ದರು. ಇದೀಗ ಅದೇ ಅಕ್ಕಿಯನ್ನು ರೂ.7,500ಕ್ಕೆ ಮಾರಾಟ ಮಾಡಬೇಕಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಲಹೆಗಾರ ರಮೇಶ್ ಚಂದ್ರ ಲಹೋಟಿ ಮಾತನಾಡಿ, ಅಕ್ಕಿಯ ಬೆಲೆ ಸರಾಸರಿ ಕೆಜಿಗೆ ರೂ.25ರಿಂದ ರೂ.30ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಒಂದು ತಿಂಗಳಿಂದ ಆರು ವಾರಗಳ ಅವಧಿಯಲ್ಲಿ ಬೆಲೆ ಮತ್ತಷ್ಟು ರೂ.10ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.