ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ಭೇಟಿ
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರು ಇಂದು ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರು ಇಂದು ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಲವು ಹೈ ಸೆಕ್ಯೂರಿಟಿ ಬ್ಯಾರಕ್ ಗಳ ಪರಿಶೀಲನೆ ಹಾಗೂ ಮೊಬೈಲ್ ಅಥವಾ ಇನ್ನಿತರ ನಿಷೇಧಿತ ವಸ್ತುಗಳನನ್ನು ಜೈಲಿನೊಳಗೆ ಸಾಗಿಸಲಾಗಿದೆಯೇ ಎಂಬುದರ ಬಗ್ಗೆ ವಿಚಾರಣೆ ಮಾಡುವುದಲ್ಲದೆ, ಸ್ವತಃ ತಪಾಸಣೆ ಸಚಿವರೇ ಜೈಲಿಗೆ ಹೋಗಿ ತಪಾಸಣೆಗೆ ಇಳಿದಿದ್ದಾರೆ.
ತಮ್ಮ ಭೇಟಿಯ ಸಮಯದಲ್ಲಿ, ಕಾರಾಗೃಹದಲ್ಲಿ, ಮಹಿಳಾ ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಚಿವರು ಕೈದಿಗಳ ಜತೆಗೆ ಸಂವಾದ ನಡೆಸಲಿದ್ದಾರೆ. ಭೇಟಿಯ ನಂತರ, ಸಚಿವರು ಸುದ್ದಿಗೋಷ್ಟಿ ನಡೆಸುವ ಸಾಧ್ಯತೆ ಇದೆ.
ಕೈದಿಗಳ ಅಕ್ರಮ ಚಟುವಟಿಕೆ ಹಿನ್ನಲೆಯಲ್ಲಿ ಭೇಟಿ
ಕೈದಿಗಳ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ದಿಢೀರ್ ಭೇಟಿ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಜೈಲು ಸಿಬ್ಬಂದಿ ಜತೆ ತೆರಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕೈದಿಗಳ ಬ್ಯಾರಕ್ಗಳನ್ನು ತಪಾಸಣೆ ನಡೆಸಿದರು. ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಕೈದಿಗಳಿಗೆ ಸೂಚನೆ ನೀಡಿದರು. ಅತಿ ಭದ್ರತಾ ಬ್ಯಾರಕ್ ಗಳಿಗೆ ಭೇಟಿ ನೀಡಿ, ಮಾದಕ ವಸ್ತು ಹಾಗೂ ಮೊಬೈಲ್ ಬಳಕೆ ಕುರಿತು ತಪಾಸಣೆ ಮಾಡಿದರು.
ವೈರಲ್ ಆಗಿದ್ದ ಹರ್ಷ ಕೊಲೆ ಪ್ರಕರಣದ ಆರೋಪಿಗಳ ವಿಡಿಯೋ
ಇನ್ನು ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ನ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಬೆಂಗಳೂರು ಜೈಲಿನಿಂದ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಇದು ರಾಜ್ಯಮಟ್ಟದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ಹರ್ಷನ ಕೊಲೆ ಆರೋಪಿಗಳು ಜೈಲಿನಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.
ಚಾಮರಾಜಪೇಟೆ ಬಂದ್: ಶಾಂತಿಯುತ ಪ್ರತಿಭಟನೆಗೆ ಅವಕಾಶ
ಇದಕ್ಕೂ ಮುನ್ನ ಈದ್ಗಾ ಮೈದಾನ ವಿವಾದ ಕುರಿತಂತೆ ಚಾಮರಾಜಪೇಟೆ ನಾಗರಿಕ ಒಕ್ಕೂಟ ಇಂದು ಚಾಮರಾಜಪೇಟೆ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರ್ ಟಿ ನಗರದಲ್ಲಿ ಮಾತನಾಡಿದ ಸಚಿವರು, 'ಚಾಮರಾಜಪೇಟೆಯಲ್ಲಿ ಗೃಹ ಇಲಾಖೆ ವತಿಯಿಂದ ಪೊಲೀಸರು ಎಲ್ಲ ಬಂದೋಬಸ್ತ್ ಮಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಇದೆ. ಆದರೆ ಯಾರೂ ಕಾನೂನು ಸುವ್ಯವಸ್ಥೆಯನ್ನೆ ಕೈಗೆ ತೆಗೆದುಕೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಬಳಿಕ ಸ್ಥಳಕ್ಕೆ ಭೇಟಿ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಚಾಮರಾಜಪೇಟೆಗೆ ಭೇಟಿ ನೀಡಲ್ಲ. ಪೊಲೀಸರು ಇದ್ದಾರೆ ಎಲ್ಲ ರೀತಿಯ ಬಂದೋಬಸ್ತ್ ಮಾಡಿದ್ದಾರೆ. ಅಂತೆಯೇ ಸರ್ಕಾರ ಯಾಕೆ ಬೆಂಬಲ ಕೊಡಬೇಕು ಎಂದು ಪ್ರಶ್ನೆ ಮಾಡಿದ ಅವರು, ಅದು ಜನರ ಆಪೇಕ್ಷೆ, ಬಿಬಿಎಂಪಿ ನಿರ್ಣಯ ಮಾಡುತ್ತೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


