ರಾಜ್ಯ

ಒತ್ತುವರಿದಾರರಿಗೆ ಸಹಕರಿಸಿದ ಆರೋಪ:‌ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್​ ಅಜಿತ್ ರೈ ಅಮಾನತು

ಮಳೆನೀರು ಚರಂಡಿ ಒತ್ತುವರಿದಾರರಿಗೆ ನ್ಯಾಯಾಲಯದ ತಡೆಯಾಜ್ಞೆ ಪಡೆಯಲು ಸಹಕರಿಸಿದ ಆರೋಪದ ಮೇಲೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್‌ಕುಮಾರ್ ರೈ ಅವರನ್ನು ಕಂದಾಯ ಇಲಾಖೆ ಅಮಾನತುಗೊಳಿಸಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.

ಒತ್ತುವರಿದಾರರಿಗೆ ಸಹಕರಿಸಿದ ಆರೋಪ:‌ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್​ ಅಜಿತ್ ರೈ ಅಮಾನತು
ಸಂಗ್ರಹ ಚಿತ್ರ
Published On :

ಬೆಂಗಳೂರು: ಮಳೆನೀರು ಚರಂಡಿ ಒತ್ತುವರಿದಾರರಿಗೆ ನ್ಯಾಯಾಲಯದ ತಡೆಯಾಜ್ಞೆ ಪಡೆಯಲು ಸಹಕರಿಸಿದ ಆರೋಪದ ಮೇಲೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್‌ಕುಮಾರ್ ರೈ ಅವರನ್ನು ಕಂದಾಯ ಇಲಾಖೆ ಅಮಾನತುಗೊಳಿಸಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.

ಮಹದೇವಪುರ ಕ್ಷೇತ್ರದ ಸರ್ಜಾಪುರ ಬಳಿಯ ರೈನ್ ಬೋ ಲೇಔಟ್ ಸೇರಿದಂತೆ ಹಲವಡೆ ರಾಜಕಾಲುವೆ ಒತ್ತುವರಿ ಮಾಡಲಾಗಿತ್ತು. ಒತ್ತುವರಿ ತೆರವು ಮಾಡದೇ, ಒತ್ತುವರಿದಾರರಿಗೆ ಕೋರ್ಟ್​ನಿಂದ ಸ್ಟೇ ತರಲು ತಹಶೀಲ್ದಾರ್​ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಕಾನೂನು ಉಲ್ಲಂಘನೆಯಾಗಿದ್ದು, ಹಾಗಾಗಿ ತಹಶೀಲ್ದಾರ್​​ ಅಮಾನತು ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಜತೆಗೆ ಇಲಾಖೆಯ ವಿಚಾರಣೆಗೂ ಆದೇಶಿಸಲಾಗಿದೆ.

ರೈ ವಿರುದ್ಧದ ದುರ್ನಡತೆ ಹಾಗೂ ಕರ್ತವ್ಯ ಲೋಪಗಳಿಗಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.

ಅಮಾನತು ಹೊರತುಪಡಿಸಿ, ಸದರಿ ಅಧಿಕಾರಿಯವರ ಹುದ್ದೆಯ ಮೇಲಿನ ಸ್ಥಾನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು (ತಹಶೀಲ್ದಾರ್ ಗ್ರೇಡ್-2) ಹುದ್ದೆಗೆ ವರ್ಗಾಯಿಸಲಾಗಿದ್ದು, ಇನ್ನು ಮುಂದೆ ಸಕ್ಷಮ ಪ್ರಾಧಿಕಾರದಿಂದ ಅನುಮತಿಯಿಲ್ಲದೆ ರೈ ಅವರು ಕಚೇರಿಯ ಆವರಣದಿಂದ ಹೊರಹೋಗುವಂತಿಲ್ಲ.

ಕಳೆದ ಮೂರು ತಿಂಗಳಲ್ಲಿ ಮಹದೇವಪುರರಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ನಗರದ ಮಾನವನ್ನು ಹರಾಜು ಹಾಕಿತ್ತು. ಇದರಿಂದ ಜಾಗತಿಕವಾಗಿ ಪ್ರಸಿದ್ಧಿಯಾಗಿರುವ ವಿಪ್ರೋಸಂಸ್ಥೆ ಸೇರಿದಂತೆ ಅನೇಕ ಐಟಿ-ಬಿಟಿ ಸಂಸ್ಥೆಗಳುಯ ಕೂಡ ಜಲಾವೃತ ಆಗಿದ್ದವು. ಈ ಘಟನೆಯಿಂದ ಸರ್ಕಾರಕ್ಕೆ ಭಾರಿ ಮುಖಭಂಗ ಉಂಟಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್. ಅಶೋಕ್‌ ಹಾದಿಯಾಗಿ ರಾಜಧಾನಿಯ ಎಲ್ಲ ಸಚಿವರು ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿಗೆ ಸೂಚನೆ ನೀಡಲಾಗಿತ್ತು. ಬಿಬಿಎಂಪಿ ವತಿಯಿಂದ ಮಹದೇವಪುರ ದಲ್ಲಿ ಕಳೆದ ಮೂರು ತಿಂಗಳಿಂದ ಒತ್ತವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದರೂ, ಇದಕ್ಕೆ ಕಾನೂನಾತ್ಮಕವಾಗಿ ಒಂದಲ್ಲಾ ಒಂದು ತೊಡಕು ಉಂಟಾಗುತ್ತಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಾಲಿಕೆ ಅಧಿಕಾರಿಗಳು ಬೇಧಿಸಿದಾಗ ಸ್ಥಳೀಯ ತಹಶೀಲ್ದಾರ್‍‌ ಎಸ್. ಅಜಿತ್‌ ಕುಮಾರ್‍‌ ರೈ ಒತ್ತುವರಿದಾರರಿಗೆ ಸಹಕಾರ ನೀಡುವ ಮೂಲಕ ಕಾನೂನಾತ್ಮಕವಾಗಿ ತೆರವು ಮಾಡದಂತೆ ನೋಡಿಕೊಂಡಿದ್ದಾರೆ.

ಒತ್ತುವರಿ ತೆರವು ಕಾರ್ಯಕ್ಕೆ ತಹಶೀಲ್ದಾರ್‍‌ ವತಿಯಿಂದ ನಿರಂತರ ತಕರಾರು ಉಂಟಾಗುವಂತೆ ಮಾಡಿದ್ದಾರೆ. ಜತೆಗೆ, ಒತ್ತುವರಿದಾರರು ನ್ಯಾಯಾಲಯಗಳಿಂದ ಸ್ಟೇ ಆದೇಶ ತರಲು ಕೂಡ ನೆರವಾಗಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.