ಮತದಾರರ ಪಟ್ಟಿಯಿಂದ ಹೆಸರು ತೆಗೆದು ನಮ್ಮನ್ನು ಗುರಿ ಮಾಡಲಾಗಿದೆ: ಅಲ್ಪಸಂಖ್ಯಾತ ಸಮುದಾಯಗಳ ಆರೋಪ
ಮತದಾರರ ಪಟ್ಟಿಯಿಂದ ಹೆಸರು ತೆಗೆದಿರುವ ವಿಚಾರ ತಿಳಿದ ಸಾವಿರಾರು ಮತದಾರರು ಬಿಬಿಎಂಪಿ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು: ಮತದಾರರ ಪಟ್ಟಿಯಿಂದ ಹೆಸರು ತೆಗೆದಿರುವ ವಿಚಾರ ತಿಳಿದ ಸಾವಿರಾರು ಮತದಾರರು ಬಿಬಿಎಂಪಿ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮತದಾರರ ಪಟ್ಟಿಯಿಂದ ಬೆಂಗಳೂರು ನಗರದ 28 ಕ್ಷೇತ್ರಗಳ ಆರು ಲಕ್ಷಕ್ಕೂ ಅಧಿಕ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ವರದಿಯಾಗಿದ್ದು, ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಎನ್‌ಜಿಒ ಚಿಲುಮೆ ಟ್ರಸ್ಟ್ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಗುರಿಯಾಗಿಸಿದೆ ಎಂದು ಮತದಾರರು ಆರೋಪಿಸಿದ್ದಾರೆ.
ರಹಮತ್ ನಗರದ ನಿವಾಸಿ ನುಸ್ರತ್ ಭಾನು ಅವರು ಮಾತನಾಡಿ, ಎನ್‌ಜಿಒ ಮತ್ತು ಬಿಬಿಎಂಪಿ ಅಧಿಕಾರಿಗಳು ನಮ್ಮ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ. ನಾನು ಮತ್ತು ನನ್ನ ನೆರೆಹೊರೆಯವರು 50 ವರ್ಷಗಳಿಂದ ಮತದಾನ ಮಾಡುತ್ತಿದ್ದು, ಈ ಭಾಗದ ಕೆಲವು ತರಕಾರಿ ಮಾರಾಟಗಾರರು ತಮ್ಮ ಹೆಸರನ್ನು ಪಟ್ಟಿಯಿಂದ ಅಳಿಸಿದ್ದರಿಂದ ಆಘಾತಕ್ಕೊಳಗಾಗಿದ್ದಾರೆ. ಕಳೆದ 80 ವರ್ಷಗಳಿಂದ ಇಲ್ಲಿ ನಮ್ಮ ಮನೆಗಳಿವೆ. ಈ ಹಗರಣದ ಹಿಂದೆ ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದಾರೆ ಮತ್ತು ಅವರು ನಮ್ಮ ಪ್ರದೇಶದಲ್ಲಿ 65 ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿದ್ದಾರೆ ಎಂದು ನಾನು ಭಾವಿಸುತ್ತೇನೆಂದು ಹೇಳಿದ್ದಾರೆ.
ಸುಲ್ತಾನಪಾಳ್ಯದ ಇಂಜಿನಿಯರ್ ಸೈಯದ್ ಮೆಹಬೂಬ್ ಮಾತನಾಡಿ, ನಮ್ಮ ಹೆಸರು ತೆಗೆದು ನಮ್ಮ ಹಕ್ಕನ್ನು ಕಸಿದುಕೊಂಡಿದ್ದಾರೆ. ನಾನು ಚುನಾವಣಾ ಆಯೋಗದ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇನೆ ಮತ್ತು ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದ್ದೇನೆ ಮತ್ತು ನನ್ನ ಹೆಸರನ್ನು ತೆಗೆದುಹಾಕಲಾಗಿದೆ ಎಂಬುದು ಖಚಿತವಾಗಿದೆ. ಕಳೆದ 15 ವರ್ಷಗಳಿಂದ ರಜೆ ಹಾಕಿ ಮತದಾನ ಮಾಡಿದ್ದೇನೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿಯಿಂದ ಅಭಿಯಾನ ಆರಂಭ
ಈ ನಡುವೆ ರಾಜ್ಯದಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕರಡು ಮತದಾರರ ಪಟ್ಟಿಯ ಪರಿಶೀಲನೆ ನಡೆಸಿದರು.
ವಿವಿಧ ವಿಧಾನಸಭಾ ಕ್ಷೇತ್ರಗಳ ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಾರ್ವಜನಿಕರು, ಮತದಾರರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕೈಗೊಂಡಿರುವ ವಿಶೇಷ ಅಭಿಯಾನವನ್ನು ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.
ಈ ಸಂಬಂಧ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರು ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು, ತಿದ್ದುಪಡಿ, ಸ್ಥಳಾಂತರಗೊಂಡಿದ್ದಲ್ಲಿ ನಮೂನೆ 6, 6ಎ, 7, 8 ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 20ರಿಂದ ಡಿಸೆಂಬರ್ 3ರವೆರೆಗೆ ಹಾಗೂ ಡಿಸೆಂಬರ್ 8 ರಂದು ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಮತದಾರರು ಅಭಿಯಾನದ ಸದುಪಯೋಗ ಪಡೆದುಕೊಂಡು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ತುಷಾರ್ ಗಿರಿನಾಥ್ ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


