ಕೊಪ್ಪಳ: ಹುಲಿಹೈದರ್ ಗ್ರಾಮದಲ್ಲಿ ಗುಂಪು ಘರ್ಷಣೆ; 2 ಸಾವು, 6 ಮಂದಿಗೆ ಗಾಯ, ಪ್ರತಿಭಟನೆ
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾರಾಮಾರಿಯಲ್ಲಿ ಕನಿಷ್ಛ ಇಬ್ಬರು ಸಾವನ್ನಪ್ಪಿ 6 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾರಾಮಾರಿಯಲ್ಲಿ ಕನಿಷ್ಛ ಇಬ್ಬರು ಸಾವನ್ನಪ್ಪಿ 6 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಯಂಕಪ್ಪ ತಳವಾರ (60), ಭಾಷಾಸಾಬ್ (22) ಎಂದು ಗುರುತಿಸಲಾಗಿದೆ. ಅಂತೆಯೇ ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಧರ್ಮಣ್ಣ ಹರಿಜನ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸಿಆರ್ಪಿಸಿ ಸೆಕ್ಷನ್ 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಈ ನಿಷೇಧಾಜ್ಞೆಯು ಆಗಸ್ಟ್ 20ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲ್ಲಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ. ಗ್ರಾಮದ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ತಹಶೀಲ್ದಾರ್ ಧನಂಜಯ ಮಾಲಗತ್ತಿ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಧರ್ಮಣ್ಣ ಅವರನ್ನು ಪ್ರಸ್ತುತ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಿಂಸಾಚಾರ ಖಂಡಿಸಿ ಮುಸ್ಲಿಂ ಮಹಿಳೆಯರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಹೂ ತರಲು ಹೋಗಿದ್ದಾಗ ನಮ್ಮ ಹುಡುಗನಿಗೆ ಹೊಡೆದರು ಎಂದು ಹೇಳಿದ ಮಹಿಳೆಯರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಗಲಾಟೆಯ ನಂತರ ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂಥ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ.
ಮುಂಜಾನೆ 9 ಗಂಟೆಯ ವೇಳೆಯಲ್ಲಿ ಗಲಭೆ ನಡೆದಿದ್ದು, ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್, ಟಾಟಾ ಏಸ್ ಸೇರಿದಂತೆ ಹಲವು ವಾಹನಗಳನ್ನು ಜಖಂ ಮಾಡಲಾಗಿದೆ. ಬೈಕ್ಗಳ ಮೇಲೆ ಕಲ್ಲು ಎತ್ತಿಹಾಕಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


