ಹಾಸನ ಜಿಲ್ಲೆಯ ಸುತ್ತಮುತ್ತ ಲಘು ಭೂಕಂಪನ
ಜಿಲ್ಲೆಯ ಹಳೇಬೀಡು, ಅಡಗೂರು, ಸಾಲಗಾಮೆ ಹಾಗೂ ಹಾಸನದ ಕೆಲವೆಡೆಗಳಲ್ಲಿ ಶುಕ್ರವಾರ ಸಂಜೆ ಭೂಮಿ ಅದುರಿದ ಅನುಭವವಾಗಿದೆ.

ಹಾಸನ: ಜಿಲ್ಲೆಯ ಹಳೇಬೀಡು, ಅಡಗೂರು, ಸಾಲಗಾಮೆ ಹಾಗೂ ಹಾಸನದ ಕೆಲವೆಡೆಗಳಲ್ಲಿ ಶುಕ್ರವಾರ ಸಂಜೆ ಭೂಮಿ ಅದುರಿದ ಅನುಭವವಾಗಿದೆ.
ಹಾಸನ ನಗರ ಮಾತ್ರವಲ್ಲದೆ ವಿಶ್ವವಿಖ್ಯಾತ ಬೇಲೂರು ತಾಲೂಕಿನ ಹಳೆಬೀಡು ಸಮೀಪದ ದ್ಯಾವಪ್ಪನಹಳ್ಳಿ, ನಿಂಗಪ್ಪನಕೊಪ್ಪಲು ಸೇರಿ ಹಲವೆಡೆ ಭೂಕಂಪನ ಅನುಭವವಾಗಿದೆ. ಇದರಿಂದ ಆತಂಕಗೊಂಡ ನಿವಾಸಿಗಳು ಮನೆಯ ಹೊರಗಡೆ ಓಡಿ ಬಂದಿದ್ದಾರೆ. ಜನರು ನೀಡಿದ ಮಾಹಿತಿ ಮೇಲೆ ಸ್ಥಳಕ್ಕೆ ಹಳೆಬೀಡು ಪೊಲೀಸರು ಭೇಟಿ ನೀಡಿದ್ದಾರೆ.
ಹಾಸನ ನಗರ ಸುತ್ತಮುತ್ತ 5 ಗಂಟೆ 28 ನಿಮಿಷದ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಬೇಲೂರು ಸುತ್ತಮುತ್ತ ಸಂಜೆ 6 ಗಂಟೆ 10 ನಿಮಿಷದ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಹಾಸನದಲ್ಲಿ ಭೂಕಂಪನದ ರಿಕ್ಟರ್ ಮಾಪನದಲ್ಲಿ 2.3 ತೀವ್ರತೆ ದಾಖಲಾಗಿದೆ.
ಸಾಲಗಾಮೆ ಹೋಬಳಿಯ, ರಾಯಪುರದ ಬಳಿ 2.3 ರಷ್ಟು ಕಂಪನ ದಾಖಲಾಗಿದ್ದು, ಈ ಕಂಪನಕ್ಕೆ ಜನರು ಹೆದರುವ ಅವಶ್ಯಕತೆಯಿಲ್ಲ. ಇದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಹಾಸನ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆಯಾಗಿದ್ದ ಕಾರಣ ಗ್ರಾಮಾಂತರ ಪ್ರದೇಶಗಳಲ್ಲಿ ದನಕರುಗಳನ್ನು ಕೊಟ್ಟಿಗೆಗೆ ಕಟ್ಟಲಾಗುತ್ತಿತ್ತು. ಭೂಮಿ ಲಭುವಾಗಿ ಕಂಪಿಸುತ್ತಿದ್ದಂತೆಯೇ ದನಕರು ಹಾಗೂ ಕೋಳಿ, ಪಕ್ಷಿಗಳು ವಿಚಲಿತಗೊಂಡು ಕೂಗಲಾರಂಭಿಸಿದವು. ಕ್ಷಣಮಾತ್ರಕ್ಕೆ ಏನೆಂದು ಅರ್ಥವಾಗದ ಜನರು ಕೂಡ ಭೂಮಿಯಲ್ಲಿ ಲಘುವಾದ ಕಂಪನದ ಅನುಭವವಾಯಿತೇ ವಿನಃ ಇದು ಭೂಕಂಪನ ಎನ್ನುವ ಕೊಂಚ ಅರಿವು ಕೂಡ ಇರಲಿಲ್ಲ.
ಸೆಪ್ಟೆಂಬರ್ 4ನೇ ತಾರೀಖಿನಂದು ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಕಂಪವಾಗಿತ್ತು. ಅಂದು ರಿಕ್ಟರ್ ಮಾಪನದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿತ್ತು. ಬಳಿಕ ಸರಿಯಾಗಿ ಒಂದು ವಾರದ ಅಂತರದಲ್ಲಿ ಮತ್ತೆ ಭೂಮಿ ನಡುಗಿದ ಅನುಭವ ಆಗಿತ್ತು.
ಒಂದು ವಾರದ ಹಿಂದೆ ಭೂಕಂಪ ಆಗಿರುವ ಬಗ್ಗೆ ಹಾಗೂ ಅದರ ತೀವ್ರತೆ ಬಗ್ಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದೀಗ ಮತ್ತೆ ಹಾಸನದಲ್ಲಿ ಇಂತಹ ಅನುಭವ ಆಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


