ವಿಜಯಪುರ ಜಿಲ್ಲಾಸ್ಪತ್ರೆಯಿಂದ ಮಾರಾಟವಾಗಿದ್ದ ಮಗು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಪತ್ತೆ!
ವಿಜಯಪುರದಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸುದ್ದಿಯಾಗಿದ್ದ ನವಜಾತ ಶಿಶು ಮಾರಾಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ವಿಜಯಪುರ: ವಿಜಯಪುರದಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸುದ್ದಿಯಾಗಿದ್ದ ನವಜಾತ ಶಿಶು ಮಾರಾಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಮಾರಾಟವಾಗಿದ್ದ ಮಗು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದು, ಏತನ್ಮಧ್ಯೆ ಮಗು ಮಾರಾಟಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣ ನಿವಾಸಿ, ಹಾಲಿ ವಿಜಯಪುರ ಆದರ್ಶ ನಗರ ನಿವಾಸಿ ಮಹಮ್ಮದ್ ರಫೀಕ್ ಸಲೀಂ ಸಾಬ್ ಹವಾಲ್ದಾರ್ (27) ಬಂಧಿತ ಆರೋಪಿ ಎಂದು ಎಸ್ಪಿ ಎಚ್. ಡಿ. ಆನಂದ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ರಫೀಕ್'ಗೆ ಇಬ್ಬರು ಮಕ್ಕಳಿದ್ದು, 25 ವರ್ಷದ ಮಹಿಳೆಯೊಬ್ಬರು ಮದರ್ ಆ್ಯಂಡ್ ಚೈಲ್ಡ್ ಆಸ್ವತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಅಲ್ಲಿನ ಸ್ಟಾಫ್ ನರ್ಸ್ ಕಸ್ತೂರಿ ಎಂಬುವವರೊಂದಿಗೆ ಮಹಿಳೆ ಮಗು ಮಾರಾಟ ಕುರಿತು ಮಾತನಾಡುತ್ತಿರುವುದನ್ನು ಆರೋಪಿ ಕೇಳಿಸಿಕೊಂಡಿದ್ದಾನೆ. ಬಳಿಕ ನೇರವಾಗಿ ಮಹಿಳೆಯನ್ನೇ ಸಂಪರ್ಕಿಸಿ ರೂ.6,000 ನೀಡಿ ಮಗುವನ್ನು ನೇರವಾಗಿ ಖರೀದಿಸಿದ್ದಾನೆ.
ಹಲವು ವರ್ಷಗಳು ಕಳೆದರು ಸಂಬಂಧಿಕರೊಬ್ಬರಿಗೆ ಮಕ್ಕಳಾಗದ ಕಾರಣ ಅವರಿಗಾಗಿ ಮಗುವನ್ನು ಖರೀದಿ ಮಾಡಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಅವಧಿಪೂರ್ವ ಜನನವಾಗಿದ್ದ ಹಿನ್ನೆಲೆಯಲ್ಲಿ ಆರೋಪಿ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದ ಎಂದು ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ವಿಚಾರ ಬಹಿರಂಗಗೊಂಡಿದೆ.
ಆಗಸ್ಟ್ 19 ರಂದು ಘಟನೆ ನಡೆದಿದ್ದು, ನರ್ಸ್ ಸಹಾಯದೊಂದಿಗೆ ತಾಯಿಯೇ ಮಗುವನ್ನು ಮಾರಾಟ ಮಾಡಿರುವುದು ಇದೀಗ ತಿಳಿದುಬಂದಿದೆ. ಪ್ರಕರಣದಲ್ಲಿ ಜಿಲ್ಲಾಸ್ಪತ್ರೆಯ ಸ್ಟಾಫ್ ನರ್ಸ್ ಕಸ್ತೂರಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್ ಎಲ್ ಲಕ್ಕಮ್ಮಣವರ ಆದೇಶಿಸಿದ್ದು, ಸ್ಟಾಫ್ ನರ್ಸ್ ಕಸ್ತೂರಿಯ ಪತಿ ಮಂಜುನಾಥನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


