ರಾಜ್ಯ

'ಕ್ರಿಮಿನಲ್ ಟ್ರ್ಯಾಕಿಂಗ್ ವ್ಯವಸ್ಥೆ' ಬಲಪಡಿಸಲು ಹೊಸ ಕಾನೂನು ಸಹಾಯಕವಾಗಲಿದೆ: ಸಚಿವ ಆರಗ ಜ್ಞಾನೇಂದ್ರ

ಅಪರಾಧಿಗಳ ಅಳತೆಯ, ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ, ಡಿಎನ್ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಪಡೆಯುವ ಸಂಬಂಧ 2021ನೇ ಸಾಲಿನ ಬಂದಿಗಳ ಗುರುತಿಸುವಿಕೆ ವಿಧೇಯಕ ಸೇರಿದಂತೆ 3 ವಿಧೇಯಕಗಳನ್ನು ಸುಧೀರ್ಘ ಚರ್ಚೆಯ ಬಳಿಕ ಸದನವು ಅಂಗೀಕರಿಸಿತು.

'ಕ್ರಿಮಿನಲ್ ಟ್ರ್ಯಾಕಿಂಗ್ ವ್ಯವಸ್ಥೆ' ಬಲಪಡಿಸಲು ಹೊಸ ಕಾನೂನು ಸಹಾಯಕವಾಗಲಿದೆ: ಸಚಿವ ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ
Published On :

ಬೆಂಗಳೂರು: ಅಪರಾಧಿಗಳ ಅಳತೆಯ, ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ, ಡಿಎನ್ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಪಡೆಯುವ ಸಂಬಂಧ 2021ನೇ ಸಾಲಿನ ಬಂದಿಗಳ ಗುರುತಿಸುವಿಕೆ ವಿಧೇಯಕ ಸೇರಿದಂತೆ 3 ವಿಧೇಯಕಗಳನ್ನು ಸುಧೀರ್ಘ ಚರ್ಚೆಯ ಬಳಿಕ ಸದನವು ಅಂಗೀಕರಿಸಿತು.

2021ನೇ ಸಾಲಿನ ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021ನೇ ಸಾಲಿನ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಮತ್ತು 2021ನೇ ಸಾಲಿನ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ ಚರ್ಚೆ ಬಳಿಕ ಅಂಗೀಕರಿಸಲಾಯಿತು.

ವಿಧೇಯಕಗಳ ಕುರಿತು ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ ಅವರು ಹೊಸ ಕಾನೂನು 'ಕ್ರಿಮಿನಲ್ ಟ್ರ್ಯಾಕಿಂಗ್ ವ್ಯವಸ್ಥೆ ಬಲಪಡಿಸಲು ಸಹಾಯ ಮಾಡಲಿದೆ. 2021ನೇ ಸಾಲಿನ ಬಂದಿಗಳ ಗುರುತಿಸುವಕೆ ವಿಧೇಯಕದಲ್ಲಿ ಆರೋಪಿಗಳ ಅಳತೆಯ, ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ, ಡಿಎನ್ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. 

ಈ ಹಿಂದೆ ಒಂದು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಶಿಕ್ಷೆಗೊಳಗಾಗುವ ಅಪರಾಧಿಗಳಿಂದ ಸಂಗ್ರಹಿಸಲಾಗುತ್ತಿತ್ತು. ಇದೀಗ ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ಶಿಕ್ಷೆಗೊಳಗಾಗುವ ಅಪರಾಧಿಗಳ ಗುರುತನ್ನು ಸಂಗ್ರಹಿಸಲಾಗುತ್ತದೆ. ಅಲ್ಲದೆ, ಈ ಕಾರ್ಯಕ್ಕೆ ಮ್ಯಾಜಿಸ್ಟ್ರೇಟ್ ಬದಲು ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಡಿಸಿಪಿಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಹೇಳಿದರು. 

ಬಳಿಕ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ಮಸೂದೆ ಉದ್ದೇಶವನ್ನು ವಿವರಿಸಿದ ಅವರು, ಕೈದಿಗಳ ಮಾನವ ಶಕ್ತಿ ಸಂಪನ್ಮೂಲ ವ್ಯರ್ಥವಾಗಬಾರದು. ಅವರು ಮನಸ್ಸು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ಮನಪರಿವರ್ತನೆಗೂ ಕಾರಣವಾಗುವ ಸ್ಥಿತಿ ಸೃಷ್ಟಿಸಬೇಕು. ಇದರಿಂದ ಹೊಸ ಜೀವನ ಆರಂಭಿಸಲು ಅವರಿಗೆ ಸಹಕಾರಿಯಾಗುತ್ತದೆ. ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ಅಲ್ಲಿನ ಬಂದೀಖಾನೆಗಳಲ್ಲಿ ವರ್ಷಕ್ಕೆ ಸುಮಾರು ರೂ.600 ಕೋಟಿಯಷ್ಟು ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಇದರಿಂದ ಕೈದಿಗಳು ಹೆಚ್ಚು ಸಂಪಾದನೆ ಮಾಡುತ್ತಾರೆ. ಅವರು ಶಿಕ್ಷೆ ಮುಗಿಸಿ ಹೊರಗೆ ಹೋಗುವಾಗ, ಹಣವನ್ನು ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ನಮ್ಮ ರಾಜ್ಯದಲ್ಲಿ ಜಮೀನು ಇದೆ, ಉಪಕರಣಗಳು ಇವೆ. ಇವೆಲ್ಲವನ್ನೂ ಸುವ್ಯವಸ್ಥಿತ ರೀತಿಯಲ್ಲಿ ನಡೆಸಲು ಮಂಡಳಿ ಅಗತ್ಯವಿದೆ ಎಂದು ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.