ಆಧಾರ್ ಅಕ್ರಮದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ, ಸರ್ಕಾರದ ಹೆಚ್ಚಿನ ಜಾಗ್ರತೆ ಅಗತ್ಯ: ಕರ್ನಾಟಕ ಹೈಕೋರ್ಟ್
ಆಧಾರ್ ಅಕ್ರಮದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಸಿದೆ.

ಬೆಂಗಳೂರು: ಆಧಾರ್ ಅಕ್ರಮದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಸಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್, ’ಆಧಾರ್ ಗುರುತಿನ ಚೀಟಿ ನೋಂದಣಿ ಪ್ರಕ್ರಿಯೆಯಲ್ಲಿ ನಡೆಯುವ ಅಕ್ರಮಗಳು ರಾಷ್ಟ್ರೀಯ ಭದ್ರತೆಗೆ ಒದಗುವ ಅಪಾಯ‘ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ’ಇಂತಹ ಕೃತ್ಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಎಚ್ಚರಿಸಿದೆ.
ಆಧಾರ್ ಕಿಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೆ.ಪಿ. ನಗರದ ಮೆಸರ್ಸ್ ‘ಎಡುರೇಸ್‘ ಕಂಪನಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕುರಿತ ಸಮಗ್ರ ತನಿಖೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಸ್ತು ಎಂದಿದೆ. ಈ ಸಂಬಂಧ 2017ರಲ್ಲಿ ತನಿಖೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಿದೆ.
’ಕಿಟ್‌ಗಳಿಗೆ 40 ಸಾವಿರದಿಂದ 2 ಲಕ್ಷ ರೂವರೆಗೆ ಪಡೆಯಲಾಗಿದೆ ಮತ್ತು ಪ್ರತಿ ಆಧಾರ್ ಕಾರ್ಡ್‌ಗೆ 100ರಿಂದ 200 ರೂ ಪಡೆಯಲಾಗಿದೆ ಎಂಬ ಆರೋಪವಿದೆ. ಆಧಾರ್ ಪ್ರಾಧಿಕಾರದ ಅಧಿಕಾರಿಗಳೇ ಈ ಬಗ್ಗೆ ಪರಿಶೀಲನೆ ನಡೆಸಿ, ದೂರು ದಾಖಲಿಸಿದ್ದಾರೆ. ಆದ್ದರಿಂದ, ಅರ್ಜಿದಾರರು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತುಪಡಿಸಲು ವಿಚಾರಣಾ ನ್ಯಾಯಾಲಯದ ವಿಚಾರಣೆ ಎದುರಿಸಲೇಬೇಕಿದೆ ಎಂದು ಆದೇಶಿಸಿದೆ.
ಆದ್ದರಿಂದ, ಹೊರಡಿಸಲಾದ ನೋಟಿಸ್ ಮತ್ತು ಸಂಗ್ರಹಿಸಲಾಗಿರುವ ಹಣದ ಸಮರ್ಥನೆ ಕುರಿತಾಗಿ ಅರ್ಜಿದಾರರು ತಪ್ಪಿಲ್ಲದೆ ಹೊರಬರುವುದು ವಿಚಾರಣೆಯ ವಿಷಯವಾಗಿದೆ. ಆಧಾರ್ ಕಿಟ್ ಮಾರಾಟ ಮಾಡಲು ಐದು ಆಯ್ಕೆಗಳ ಅಡಿಯಲ್ಲಿ ಸಂಗ್ರಹಿಸಲಾಗಿರುವ ಹಣ ರೂ. 40,000 ದಿಂದ 1,85,000 ವರೆಗೆ ಇದ್ದು ʼನಮ್ಮ ಕೇಂದ್ರʼದಲ್ಲಿ ಆಧಾರ್ ನೋಂದಣಿಗಾಗಿ ಪಡೆಯುವ ಹಣ ರೂ.100/- ರಿಂದ ರೂ .200/- ವರೆಗೆ ಇರುತ್ತದೆ ಎಂದು ಅಭಿಪ್ರಾಯಪಟ್ಟಿತು.
ಕೇಂದ್ರ ಸರ್ಕಾರ ಪರ ವಾದ ಮಂಡಿಸಿದ್ದ ಸಹಾಯಕ ಸಾಲಿಸಿಟರ್ ಜನರಲ್ ಶಾಂತಿಭೂಷಣ್ ಮತ್ತು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಜಿ.ನಮಿತಾ ಕಲ್ಲೇಶ್, ಈ ಪ್ರಕರಣದಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಅಧಿಕಾರಿಗಳು ‘ನಮ್ಮ ಕೇಂದ್ರ’ಕ್ಕೆ ನಾಗರಿಕರ ಸೋಗಿನಲ್ಲಿ ಭೇಟಿ ನೀಡಿ, ಪರಿಶೀಲಿಸಿದಾಗ ಅಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ ಎಂಬ ಅಂಶವನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಈ ಪ್ರಕರಣದಲ್ಲಿ ನೆರೆ ರಾಷ್ಟ್ರಗಳ ಪ್ರಜೆಗಳಿಗೂ ಮನಬಂದಂತೆ ಆಧಾರ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಆರೋಪಗಳ ಕುರಿತು ಸಮಗ್ರ ವಿಚಾರಣೆ ನಡೆಯಬೇಕಿದ್ದು, ಎಫ್‌ಐಆರ್ ರದ್ದುಪಡಿಸದೆ ತನಿಖೆ ನಡೆಯಲು ಆದೇಶಿಸಬೇಕು ಎಂದು ಕೋರಿದ್ದರು.
ಅರ್ಜಿದಾರರ ಪರವಾಗಿ ವಕೀಲ ಮೂರ್ತಿ ನಾಯಕ್ ವಾದಿಸಿದ್ದರು.
ಏನಿದು ಪ್ರಕರಣ?:
ಯುಐಡಿಎಐ ಜೊತೆ ಮುಂಬೈ ಮೂಲದ ಯುಟಿಲಿಟಿ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಕರ್ನಾಟಕದಲ್ಲಿ ಅಧಾರ್ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ಅನುಮತಿ ಪಡೆದಿತ್ತು. ಅಂತೆಯೇ ಯುಟಿಲಿಟಿ ಸಂಸ್ಥೆಯು, ಸಿಬ್ಬಂದಿಯನ್ನು ಪಡೆಯುವ ನಿಟ್ಟಿನಲ್ಲಿ ಎಡುರೇಸ್ ಕಂಪೆನಿಗೆ 2015ರ ಏಪ್ರಿಲ್ 15ರಂದು ಉಪ ಗುತ್ತಿಗೆ ನೀಡಿತ್ತು. ಇದರ ಅನುಸಾರ ಎಡುರೇಸ್ ಜೆ.ಪಿ. ನಗರದಲ್ಲಿ ‘ನಮ್ಮ ಕೇಂದ್ರ’ ಹೆಸರಿನಲ್ಲಿ ಕೇಂದ್ರವೊಂದನ್ನು ಆರಂಭಿಸಿ ಅಲ್ಲಿ ಅಕ್ರಮವಾಗಿ ಆಧಾರ್ ಕಿಟ್‌ಗಳನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಪರಿಶೀಲನೆ ನಡೆಸಿದ್ದ ಯುಐಡಿಎಐ ಅಧಿಕಾರಿಗಳು 2017ರ ಏಪ್ರಿಲ್ 6ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಎಡುರೇಸ್ ಕಂಪೆನಿ ಸಿಇಒ ಆರ್.ಪಿ.ನರೇಶ್ ಕುಮಾರ್ ಹಾಗೂ ಮುಂಬೈನ ’ಯುಟಿಲಿಟಿ’ ಸಂಸ್ಥೆಯ ಪ್ರತಿನಿಧಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 465 (ಫೋರ್ಜರಿ), 468 (ವಂಚನೆ ಉದ್ದೇಶದಿಂದ ಫೋರ್ಜರಿ), 471 (ವಂಚನೆಗಾಗಿ ದಾಖಲೆಗಳ ಬಳಕೆ), 420 (ವಂಚನೆ), 120–ಬಿ (ಅಪರಾಧಿಕ ಒಳಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Related Article
ಅರ್ಕಾವತಿ ಬಡಾವಣೆ ವಿವಾದ: ಬಿಡಿಎ ಅಧಿಸೂಚನೆ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್; ಮೂವರ ಸಮಿತಿ ರಚಿಸಿದ ನ್ಯಾಯಾಲಯ
ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ರದ್ಧುಗೊಳಿಸಿದ ಕರ್ನಾಟಕ ಹೈಕೋರ್ಟ್
ಮಂಗಳೂರು ಪಾಲಿಕೆ ವಿರುದ್ಧ ಕ್ರಮಕ್ಕೆ ಕೆಎಸ್ಪಿಸಿಬಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ
ಕರ್ನಾಟಕ ಹೈಕೋರ್ಟ್'ನ 10 ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿದ ಕೇಂದ್ರ ಸರ್ಕಾರ
ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ಥಿ ನೇಮಕಕ್ಕೆ ಕೊಲಿಜಿಯಂ ಶಿಫಾರಸು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


