ಜಾರಕಿಹೊಳಿ ಸಿಡಿ ಪ್ರಕರಣ: ತನಿಖೆಯ ಆದೇಶ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ 3 ಅಧಿಕಾರಿಗಳು!
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನಾಧರಿಸಿ ಎಫ್‍ಐಆರ್ ದಾಖಲಿಸದ ಸಂಬಂಧ ತನಿಖೆ ನಡೆಸಲು ನಗರದ 8ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿ ಮೂವರು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನಾಧರಿಸಿ ಎಫ್‍ಐಆರ್ ದಾಖಲಿಸದ ಸಂಬಂಧ ತನಿಖೆ ನಡೆಸಲು ನಗರದ 8ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿ ಮೂವರು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆಂದು ತಿಳಿದುಬಂದಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ತನಿಖೆಯ ಆದೇಶವನ್ನು ರದ್ದುಗೊಳಿಸಬೇಕೆಂದು ಮೂವರು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಖಾಸಗಿ ದೂರು ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್, ಇನ್ಸ್‍ಪೆಕ್ಟರ್ ಮಾರುತಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ಕರ್ತವ್ಯಲೋಪ ಎಸಗಿಲ್ಲ. ಅಲ್ಲದೆ, ದೂರುದಾರರು ಸಂತ್ರಸ್ಥೆಗೆ ಸಂಬಂಧಿಸಿದ ವಿವರಗಳನ್ನು ಆರಂಭದಲ್ಲಿ ಒದಗಿಸಿರಲಿಲ್ಲ. ಪ್ರಕರಣದಲ್ಲಿ ಆರೋಪಿತ ಮಾಜಿ ಸಚಿವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ ಖಾಸಗಿ ದೂರು ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ತಮ್ಮ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿರುವ ಆದೇಶ ರದ್ದು ಮಾಡಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ.
8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ನವೆಂಬರ್ 23 ರಂದು, ಜನಾಧಿಕಾರ ಸಂಘರ್ಷ ಪರಿಷತ್ತಿನ (ಜೆಎಸ್‌ಪಿ) ಅಧ್ಯಕ್ಷ ಆದರ್ಶ್ ಆರ್ ಅಯ್ಯರ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್‌ಗೆ ಸಲ್ಲಿಸಿದ ಖಾಸಗಿ ದೂರನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಆರ್‌ಪಿಸಿಯ 156(3) ಸೆಕ್ಷನ್ ಅಡಿಯಲ್ಲಿ ತನಿಖೆ ನಡೆಸಲು ಆದೇಶಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


