ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ನಿಧನರಾಗಿದ್ದು ಅವರಿಗೆ 104 ವರ್ಷ ವಯಸ್ಸಾಗಿತ್ತು.

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ನಿಧನರಾಗಿದ್ದು ಅವರಿಗೆ 104 ವರ್ಷ ವಯಸ್ಸಾಗಿತ್ತು.
ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಚ್.ಎಸ್.ದೊರೆಸ್ವಾಮಿ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ದೊರೆಸ್ವಾಮಿ ಅವರಿಗೆ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಸೇರಿದಂತೆ ವಿವಿಧ ವಯೋಸಹಜ ಸಮಸ್ಯೆಗಳು ಇದ್ದವು. ಕೆಲದಿನಗಳ ಹಿಂದೆ ಹೃದಯ ಸಮಸ್ಯೆ ಸಂಬಂಧ ಜಯದೇವ ಆಸ್ಪತ್ರೆಗೆ ದಾಖಲಾದ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅವರಿಗೆ ಜ್ವರ, ನೆಗಡಿ ಹಾಗೂ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆಗ ಕೊರೋನಾ ಸೋಂಕಿತರಾಗಿರುವುದು ಖಚಿತಪಟ್ಟಿತ್ತು. 7 ದಿನಗಳಲ್ಲಿ ಅವರು ಚೇತರಿಸಿಕೊಂಡು ಜಯನಗರದಲ್ಲಿರುವ ನಿವಾಸಕ್ಕೆ ತೆರಳಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ರವಿಕೃಷ್ಣಾರೆಡ್ಡಿ ಅವರು, 'ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾತ್ರಿಯಿಂದ ಆರೋಗ್ಯ ಸ್ವಲ್ಪ ಹದಗೆಟ್ಟು ಇಂದು ಬೆಳಿಗ್ಗೆ ಉಸಿರಾಟಕ್ಕೆ ತೊಂದರೆ ಆಗಿತ್ತು. ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಬಂದ ಸ್ವಲ್ಪ ಹೊತ್ತಿಗೆ ಹೃದಯಾಘಾತ ಆಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು ಎಂದು ಹೇಳಿದ್ದಾರೆ.
ಎಚ್.ಎಸ್.ದೊರೆಸ್ವಾಮಿ ಅವರ ಪೂರ್ತಿ ಹೆಸರು ಹಾರೊಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ. ಏಪ್ರಿಲ್ 10, 1918ರಲ್ಲಿ ಜನಿಸಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬ್ರಿಟಿಷರ ಕಾಲದಲ್ಲಿ ಕನ್ನಡದದ ಜನಪ್ರಿಯ ಪತ್ರಿಕೆ ಎನಿಸಿದ್ದ ‘ಪೌರವಾಣಿ’ ವರದಿಗಾರರಾಗಿ ಜನಪ್ರಿಯರಾಗಿದ್ದರು. ಸಾಹಿತ್ಯ ಮಂದಿರದ ಮೂಲಕ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದರು. ಇತಿಹಾಸಕಾರ ರಾಮಚಂದ್ರ ಗುಹಾ ಅವರು ದೊರೆಸ್ವಾಮಿ ಅವರನ್ನು ಗೌರವಿಸುತ್ತಿದ್ದರು. ‘ದೊರೆಸ್ವಾಮಿ ಅಂದ್ರೆ ಕರ್ನಾಟಕದ ಸಾಕ್ಷಿಪ್ರಜ್ಞೆ’ ಎಂದು ಗುಹಾ ಬಣ್ಣಿಸಿದ್ದರು.
ಅಂದಿನ ಮೈಸೂರು ಪ್ರಾಂತ್ಯದಲ್ಲಿದ್ದ ಕನಕಪುರ ತಾಲ್ಲೂಕು ಹಾರೋಹಳ್ಳಿ ದೊರೆಸ್ವಾಮಿ ಅವರ ಜನ್ಮಸ್ಥಳ. ಕೇವಲ 5 ವರ್ಷದವರಿದ್ದಾಗ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡರು. ತಾತ ಶ್ಯಾನುಭೋಗ ಶಾಮಣ್ಣ ಅವರ ಪಾಲನೆಯಲ್ಲಿ ದೊರೆಸ್ವಾಮಿ ದೊಡ್ಡವರಾದರು. ದೊರೆಸ್ವಾಮಿ ಅವರ ಅಣ್ಣ ಸೀತಾರಾಮ್ ಬೆಂಗಳೂರಿನ ಮೇಯರ್ ಆಗಿದ್ದರು. ವಿದ್ಯಾಭ್ಯಾಸ ಮುಗಿದ ನಂತರ ಜೂನ್ 1942ರಲ್ಲಿ ಬೆಂಗಳೂರಿನ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಬ್ರಿಟಿಷರ ಆಡಳಿತಕ್ಕೆ ಧಕ್ಕೆ ತರುವ ಉದ್ದೇಶದಿಂದ ದಾಖಲೆಗಳನ್ನು ಸುಟ್ಟುಹಾಕಲೆಂದು ಪೋಸ್ಟ್ಬಾಕ್ಸ್ಗಳು ಮತ್ತು ರೆಕಾರ್ಡ್ ರೂಮ್ಗಳಲ್ಲಿ ಟೈಮ್ಬಾಂಬ್ಗಳನ್ನು ಸ್ಫೋಟಿಸಿದ್ದರು. ಕಾರ್ಮಿಕ ಚಳವಳಿಗಳಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದರು.
ದೊರೆಸ್ವಾಮಿ ಅವರು ತಮ್ಮ 19ನೇ ವಯಸ್ಸಿನಲ್ಲಿ ಲಲಿತಮ್ಮ ಅವರನ್ನು ಮದುವೆಯಾಗಿದ್ದರು. ಲಲಿತಮ್ಮ ಅವರು 2019ರ ಡಿಸೆಂಬರ್ 17ರಂದು ನಿಧನರಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


