ದೊರೆಸ್ವಾಮಿ ನಿಧನ: ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಸೇರಿ ಗಣ್ಯರ ಕಂಬನಿ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಇಂದು ನಗರದ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಿರಿಯ ಜೀವದ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಎಂ ಬಿ,ಎಸ್, ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಇಂದು ನಗರದ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಿರಿಯ ಜೀವದ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಎಂ ಬಿ,ಎಸ್, ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
"ಸ್ವಾತಂತ್ರ್ಯ ಹೋರಾಟಗಾರರು, ಪತ್ರಕರ್ತರು, ಶತಾಯುಷಿಗಳಾದ ಶ್ರೀ ಹೆಚ್. ಎಸ್. ದೊರೆಸ್ವಾಮಿಯವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. ತಮ್ಮ ಜೀವನದುದ್ದಕ್ಕೂ ಸಮಾಜದ ಏಳಿಗೆಗೆ ದುಡಿದ ಒಬ್ಬ ಮಹಾನ್ ಸಾಮಾಜಿಕ ಹೋರಾಟಗಾರರನ್ನು ಕಳೆದುಕೊಂಡು ನಮ್ಮ ರಾಜ್ಯ ಇಂದು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿ ದೊರೆಯಲಿ." ದೇವೇಗೌಡ ಟ್ವೀಟ್ ಮೂಲಕ ಹೇಳಿದ್ದಾರೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿ "ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ." ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ "ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ, ಬದುಕಿನ ಕೊನೆಯ ದಿನಗಳವರೆಗೂ ಮುಂಚೂಣಿಯಲ್ಲಿ ನಿಂತು ಜನಪರ ಧ್ವನಿಯಾಗುತ್ತಿದ್ದ ಶತಾಯುಷಿ, ಸ್ವತಂತ್ರ ಹೋರಾಟಗಾರ, ನಿಸ್ಟೂರವಾದಿ ದೊರೆಸ್ವಾಮಿಯವರ ನಿಧನವು ಈ ನಾಡಿಗೆ ತುಂಬಲಾರದ ನಷ್ಟ
"ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ನೋವಿನಲ್ಲಿ ನಾವೂ ಬಾಗಿಗಳಾಗಿದ್ದೇವೆ." ಎಂದು ತಮ್ಮ ಗೌರವ ಸೂಚಿಸಿದ್ದಾರೆ.
"ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಷಿ ಎಚ್.ಎಸ್. ದೊರೆಸ್ವಾಮಿಯವರ ನಿಧನ ನನಗೆ ಆಘಾತ ಉಂಟುಮಾಡಿದೆ. ಮನೆ ಹಿರಿಯನನ್ನು ಕಳೆದುಕೊಂಡ ದು:ಖ ನನ್ನದಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ನಮ್ಮನ್ನು ಅಗಲಿ ಹೋದ ಎಚ್.ಎಸ್.ದೊರೆಸ್ವಾಮಿ ಅವರು ನಮ್ಮೆಲ್ಲರಆತ್ಮ ಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ, ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು.
ಇಳಿ ವಯಸ್ಸಿನಲ್ಲಿಯೂ ಜಗ್ಗದೆ, ಕುಗ್ಗದೆ ಅನ್ಯಾಯ-ಅಕ್ರಮ ಕಂಡಾಗ ಬೀದಿಗಿಳಿಯುತ್ತಿದ್ದ ಅವರು ಎಲ್ಲರ ಪಾಲಿನ ಸ್ಪೂರ್ತಿಯಾಗಿದ್ದರು" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದು "ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಗಾಂಧಿವಾದಿ, ಪ್ರಾತಃಸ್ಮರಣೀಯರು ಹಾಗೂ ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ದೊರೆಸ್ವಾಮಿ ಅವರ ನಿಧನದಿಂದ ಶತಮಾನದ ಮಹಾನ್ ಹೋರಾಟಗಾರರನ್ನು ಕಳೆದುಕೊಳ್ಳುವ ಮೂಲಕ ನಾಡು ಹಾಗೂ ದೇಶ ಬಡವಾಗಿದೆ." ಎಂದಿದ್ದಾರೆ.
"ಶತಾಯುಷಿಯಾಗಿದ್ದರೂ ದಣಿವರಿಯದ ಅವರ ಹೋರಾಟದ ಕಿಚ್ಚು ಮತ್ತು ಸಾಮಾಜಿಕ ಬದ್ಧತೆ ಅನನ್ಯ. ಹತ್ತಾರು ಬಾರಿ ಅವರನ್ನು ಭೇಟಿ ಮಾಡಿ ಚರ್ಚಿಸಿ, ಮಾರ್ಗದರ್ಶನ ಮತ್ತು ಆಶೀರ್ವಾದ ಪಡೆದಿದ್ದೇನೆ. ಅದು ನನ್ನ ಭಾಗ್ಯ.
"ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದೊರೆಸ್ವಾಮಿ (104) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು ನನ್ನ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ.
"ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ನಂತರ ಸೆರೆವಾಸ ಅನುಭವಿಸಿದ್ದ ದೊರೆಸ್ವಾಮಿಯವರ ಬದುಕಿನ ಆದರ್ಶ, ಮೌಲ್ಯಗಳು ಎಲ್ಲರಿಗೂ ಸ್ಪೂರ್ತಿ.ಇಂತಹ ಮಹಾನ್ ಚೇತನ ಎರಡು ಶತಮಾನಗಳ ಕಾಲಘಟ್ಟದಲ್ಲಿ ನಮ್ಮೆಲ್ಲರಿಗೂ ಹೋರಾಟದ ಸ್ಪೂರ್ತಿಯ ಸೆಲೆಯಾಗಿ ಮುಂಚೂಣಿಯ ಮಾರ್ಗದರ್ಶಕರಾಗಿದ್ದರು ಎಂಬುದನ್ನು ಅತ್ಯಂತ ವಿನೀತ ಭಾವದಿಂದ ಸ್ಮರಿಸಿಕೊಳ್ಳುತ್ತೇನೆ. " ಎಂದು ಹೇಳಿರುವ ಕುಮಾರಸ್ವಾಮಿ ಮೃತರ ಕುಟುಂಬದ ಸದಸ್ಯರು, ಅವರ ಅಸಂಖ್ಯ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


