ಮುಂದಿನ 15 ದಿನಗಳಲ್ಲಿ ಹೊಸಮರಳು ನೀತಿ ಜಾರಿ: ಮುರುಗೇಶ್ ನಿರಾಣಿ
ಹೊಸ ಮರಳು ನೀತಿ ಹಾಗೂ ಗಣಿ ನೀತಿಯು ಇನ್ನು 15 ದಿನದೊಳಗೆ ಜಾರಿಗೆ ಬರಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ಆರ್.ನಿರಾಣಿ ತಿಳಿಸಿದ್ದಾರೆ.

ಮೈಸೂರು: ಹೊಸ ಮರಳು ನೀತಿ ಹಾಗೂ ಗಣಿ ನೀತಿಯು ಇನ್ನು 15 ದಿನದೊಳಗೆ ಜಾರಿಗೆ ಬರಲಿದೆ. ಈಗಾಗಲೇ ಈ ಸಂಬಂಧ ಕರಡು ಪ್ರತಿಯನ್ನು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟವರಿಗೆ ಕಳುಹಿಸಲಾಗಿದ್ದು, ಈ ಕುರಿತು ವ್ಯಕ್ತವಾಗುವ ಅನಿಸಿಕೆ, ಅಭಿಪ್ರಾಯಗಳನ್ನು ಪಡೆದು ನೂತನ ಮರಳು ನೀತಿ ಹಾಗೂ ಗಣಿ ನೀತಿಯನ್ನು ಜಾರಿಗೆ ತರಲಾಗುವುದೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ಆರ್.ನಿರಾಣಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಶೇ.30ರಷ್ಟು ಅನುದಾನ ಕೋವಿಡ್‌ಗೆ ಬಳಕೆ ಮಾಡಲಾಗುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ಘೋಷಣೆ ಮಾಡಿದ್ದಾರೆ. 2017ರಿಂದ 2021ರ ಅವಧಿಯಲ್ಲಿ ಇಲಾಖೆ 35 ಕೋಟಿ ರು. ಆದಾಯ ಗಳಿಸಿದೆ. ಈ ಪೈಕಿ 16 ಸಾವಿರ ಕೋಟಿ ರು. ಈಗ ಉಳಿತಾಯ ಆಗಿದೆ. ಇದರಲ್ಲಿ ಶೇ.30ರಷ್ಟು ಹಣವನ್ನು ಕೋವಿಡ್ ಖರ್ಚಿಗೆ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಶೇ.30ರಷ್ಟು ಹಣ ಬಳಸಿಕೊಳ್ಳಲು ಇಲಾಖೆಯ ಕಾಯ್ದೆಗಳಲ್ಲಿ ಅವಕಾಶ ಇದೆ. ಅದಕ್ಕಿಂತಲೂ ಹೆಚ್ಚಿನ ಹಣ ಅಗತ್ಯವಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುಮತಿ ಪಡೆದುಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗುತ್ತಿದೆ. ಹೊಸ ಗಣಿ ನೀತಿಯನ್ನು ತರಲಾಗುತ್ತಿದ್ದು, ತ್ವರಿತ ಕಾರ್ಯನಿರ್ವಹಣೆ ಹಾಗೂ ಸರಳೀಕರಣಕ್ಕಾಗಿ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ. ಇಲಾಖೆಯ ಅಧಿಕಾರಿಗಳಿಗೆ ಪೊಲೀಸರಂತೆ ಸಮವಸ್ತ್ರ, ಪ್ರತ್ಯೇಕ ವಾಹನ, ಮೈನಿಂಗ್‍ಗಳಿಗೆ ತೆರಳುವಾಗ ಸೆಕ್ಯೂರಿಟಿ ಗಾರ್ಡ್‍ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮರಳನ್ನು ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಎತ್ತಿನ ಗಾಡಿಯಲ್ಲಿ ಸಣ್ಣ ಪ್ರಮಾಣದಲ್ಲಿ ಸ್ವಂತ ಬಳಕೆಗೆ ಸಾಗಿಸುವವರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಬಾರದೆಂದು ಸೂಚಿಸಲಾಗಿದೆ. ಕೊಳ್ಳೇಗಾಲ ಭಾಗದಲ್ಲಿ ಇಂತಹ ಪ್ರಕರಣಗಳು ದಾಖಲಾಗಿರುವ ಬಗ್ಗೆ ಶಾಸಕರು ಗಮನಕ್ಕೆ ತಂದಿದ್ದಾರೆ. ಸ್ವಂತ ಬಳಕೆಗಾಗಿ ಮನೆ, ಅಭಿವೃದ್ಧಿ ನಿರ್ಮಾಣ ಕೆಲಸಗಳಿಗೆ ಸಣ್ಣ ಪ್ರಮಾಣದಲ್ಲಿ ಮರಳು ಸಾಗಿಸುವವರ ವಿರುದ್ಧ ಕ್ರಮ ವಹಿಸದಂತೆ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ತಾಲೂಕಿನ ಮಲ್ಲಯ್ಯನಪುರದ ಬಳಿ ಸ್ವಾಭಾವಿಕ ಭೂವಿಜ್ಞಾನ ಸಂಗ್ರಹಾಲಯ ಸ್ಥಾಪನೆಗೆ ಯೋಗ್ಯವಾಗಿದ್ದು, ಈ ಸಂಬಂಧ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಮುಂದಿನ ಪೀಳಿಗೆಗೆ ಇಲ್ಲಿನ ಗ್ರಾನೈಟ್ ಹಾಗೂ ಶಿಲೆಗಳ ವಿಶೇಷತೆಯ ಅಧ್ಯಯನ ಹಾಗೂ ಮಾಹಿತಿ ನೀಡುವ ಉದ್ದೇಶಕ್ಕಾಗಿ ಸ್ವಾಭಾವಿಕ ಭೂವಿಜ್ಞಾನ ಸಂಗ್ರಹಾಲಯ ಸ್ಥಾಪಿಸಲು ಮುಂದಾಗಿದ್ದು, ಈ ಸಂಭಂಧ ಮೌಖಿಕವಾಗಿ ಒಪ್ಪಿಗೆ ನೀಡಲಾಗಿದೆ. ಈ ಕುರಿತು ವಿವರಗಳನ್ನು ಕಳುಹಿಸಿಕೊಡಲು ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ, ನಮ್ಮಲ್ಲಿ ಸಾಕಷ್ಟುಪ್ರಮಾಣದಲ್ಲಿ ಆಕ್ಸಿಜನ್ ಇದೆ. ಆದರೆ, ಅದನ್ನು ಶೇಖರಣೆ ಮಾಡಲು ಕಂಟೇನರ್‌ಗಳ ಕೊರತೆ ಇದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ.
ಕೇಂದ್ರದಿಂದಲೂ ಆಕ್ಸಿಜನ್ ಪೂರೈಕೆ ಆಗ್ತಿದೆ. ಸಿಲಿಂಡರ್‌ಗಳ ಕೊರತೆಯಿಂದ ಸಮಸ್ಯೆಯಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು. ಕಲಬುರಗಿಯಲ್ಲಿ ಪ್ರತಿನಿತ್ಯ 500 ಕಂಟೇನರ್ ತಯಾರಿಸುವ ಕಾರ್ಯ ನಡೆಯುತ್ತಿದೆ. ಶೀಘ್ರವೇ ರಾಜ್ಯದಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ಕೊರತೆ ನೀಗಲಿದೆ ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


